ರೊಟ್ಟಿ ತಟ್ಟೆಯಲ್ಲಿ ಸಮುದ್ರದ ಮೀನು!

7

ರೊಟ್ಟಿ ತಟ್ಟೆಯಲ್ಲಿ ಸಮುದ್ರದ ಮೀನು!

Published:
Updated:

ಗುಲ್ಬರ್ಗ: ಕಡಲಾಳದ ಮೀನಿಗೂ, ರೊಟ್ಟಿಯ ಊಟಕ್ಕೂ ಎತ್ತಣದಿಂದೆತ್ತ ಸಂಬಂಧ ಮಾರಾಯ್ರೇ! ಎಣ್ಣೆಗಾಯಿ, ಕಾಳು ಪಲ್ಯ, ಸಾರು, ಸಾಂಬಾರು ಜೊತೆಗಿನ ರೊಟ್ಟಿ ಊಟದ ತಟ್ಟೆಯಲ್ಲಿ  ಫಿಶ್‌ ಫ್ರೈ,  ರವಾ ಫ್ರೈ, ಫಿಶ್‌ ಕರಿ, ಚಿಲ್ಲಿ, ಬೋನ್‌ಲೆಸ್ ಫಿಶ್ ಬಿರಿಯಾನಿ, ಮಂಚೂರಿ ಬಾಯಿ ನೀರಿಳಿಸುತ್ತಿದೆ. ಇದು ನಗರದಲ್ಲಿ ಕಂಪು ಬೀರುತ್ತಿರುವ ಮೀನು ಖಾದ್ಯ ಹಾಗೂ ಬದಲಾಗುತ್ತಿರುವ ಆಹಾರ ಸಂಸ್ಕೃತಿಯ ಚಿತ್ರಣ.ಇಲ್ಲಿ ಮಾಂಸಾಹಾರ ಎಂದರೆ ಚಿಕನ್, ಮಟನ್‌ ಎಂದೇ ಜನಪ್ರಿಯ. ಕಳೆದ ದಶಕದಲ್ಲಿ ವಿಶೇಷವಾಗಿ ಕಡಲ ಮೀನು ಪ್ರಸಿದ್ದಿ ಪಡೆಯುತ್ತಿವೆ. ಕೆರೆ ಹಾಗೂ ಹೊಳೆಯ ಮೀನುಗಳಾದ ರಾವು, ಕಾಟ್ಲಾ, ಮರುಗ, ತಾಮ್ರಾ, ಗೂಗ್ಲಿ, ಮರನ್‌, ಇಲಾಫಿಯೇ ಜೊತೆಗೆ ಸಮುದ್ರದ ಬಂಗುಡೆ, ಥಾರ್ಲಿ (ಬೂತಾಯಿ), ಸಿಗಡಿ, ಸುರ್ಮಾ, ಬಾಂಮು, ತಾಡೂಸ, ಅಂಜಲ್‌, ಬೊಳೆಂಜೀರ್‌(ಸಿಲ್ವರ್‌ ಫಿಶ್‌), ಕಲ್ಲೂರ, ಪಾಟೆ, ಪಾಂಪ್ಲೆಟ್ (ಮಾಂಜಿ) ಮೀನುಗಳು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿವೆ. ಆಶ್ರಯ, ನಾಗಾರ್ಜುನ, ಗ್ರಾಂಡ್‌ ಹೋಟೆಲ್‌, ಹೆರಿಟೇಜ್‌, ಕದಂಬ, ಶಿಮ್ಲಾ, ಸನ್‌ ಇಂಟರ್‌ನ್ಯಾಷನಲ್‌, ಸಂತೋಷ, ಕ್ರಿಸ್ಟಲ್‌ ಪ್ಯಾಲೇಸ್‌, ಬಹುಮನಿ ಮತ್ತಿತರ ಹೋಟೆಲ್‌ಗಳಲ್ಲಿ ಮೀನಿ ಸಿದ್ಧ ವಿಶೇಷ ಖಾದ್ಯಗಳು ಲಭ್ಯವಿವೆ.‘ಸೂಪರ್‌ ಮಾರ್ಕೆಟ್‌ ಹೂ ಮಾರಾಟ ಮಳಿಗೆ ಮುಂಭಾಗದಲ್ಲಿ ಅಮ್ಮ (ನರಸಮ್ಮ) ನಾಲ್ಕೈದು ದಶಕಗಳಿಂದ ಮೀನು ಮಾರಾಟ ಮಾಡುತ್ತಿದ್ದರು. 30 ವರ್ಷಗಳಿಂದ ಸಮುದ್ರದ ಮೀನು ತರಿಸುತ್ತಿದ್ದರು. ಈಗ ನಾನು (ವಾರಕ್ಕೆರಡು ದಿನ ಬುಧವಾರ ಮತ್ತು ಶನಿವಾರ) ಸಮುದ್ರ ಮೀನು ಮಾತ್ರ ಮಾರಾಟ ಮಾಡುತ್ತಿದ್ದೇನೆ. ಅಲ್ಲದೇ ನಗರದ ವರ್ತುಲ ರಸ್ತೆಯ ಖಾಜಾಕೋಟನೂರ ಕ್ರಾಸ್‌, ಎಂಎಸ್‌ಕೆ ಮಿಲ್‌ ಬಳಿ ಕಸ್ತೂರಿಬಾಯಿ, ಸರಫ್‌ ಬಜಾರ್‌ ಬಳಿಯ ಗಣೇಶ ಮಂದಿರ ಮತ್ತಿತರೆಡೆಗಳಲ್ಲಿ ಸಮುದ್ರದ ಮೀನುಗಳು ಲಭ್ಯ ಇವೆ. ಆದರೆ ನಾನು ಎಲ್ಲ ಋತುವಿನಲ್ಲೂ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ವೆಂಕಟೇಶ್‌.ಶರಣ ಬಸವೇಶ್ವರ ಕೆರೆ ಬಳಿಯ ಫರಕಿತ್ವಾರ್ ಮೀನುಗಾರರ ಸಹಕಾರಿ ಸಂಘವು 1967ರಲ್ಲಿ ಕೆರೆ ಹಾಗೂ ಹೊಳೆ ಮೀನು ವ್ಯಾಪಾರ ಆರಂಭಿಸಿದೆ. ನಗರಕ್ಕೆ ಬಂದು ನೆಲೆಸಿದ ಅಧಿಕಾರಿಗಳು, ಕರಾವಳಿ, ದಕ್ಷಿಣ ಭಾಗದ ಜನರ ಬೇಡಿಕೆಯಂತೆ 30 ವರ್ಷದ ಹಿಂದೆ ಸಮುದ್ರ ಮೀನು ವ್ಯಾಪಾರ ಆರಂಭಿಸಿದೆ. ಆರಂಭದಲ್ಲಿ ಸುಮಾರು 50 ಕೆಜಿ ಇದ್ದ ವ್ಯಾಪಾರ ಈಗ ದಿನಕ್ಕೆ ನಾಲ್ಕೈದು ಕ್ವಿಂಟಲ್‌ಗೆ ತಲುಪಿದೆ.  ಕೆಜಿಗೆ ರೂ. 35  ಇದ್ದ ಬಂಗುಡೆ ರೂ. 200, ರೂ. 100 ಇದ್ದ ಪಾಂಪ್ಲೆಟ್ 400, ರೂ. 40 ಇದ್ದ ಸಿಗಡಿ 500ಕ್ಕೆ ಆಗಿದೆ. ಆದರೂ ಬೇಡಿಕೆ ಹೆಚ್ಚುತ್ತಲೇ ಇದೆ.ಆರೋಗ್ಯಕ್ಕಾಗಿ: ‘ಹಿಂದೆ ಮೀನು ವಾಸನೆ ಎಂದು ತಿನ್ನುತ್ತಿರಲಿಲ್ಲ. ಶ್ರಾವಣ ಮಾಸದಲ್ಲಿ ಮಾರಾಟವೇ ವಿರಳ. ಈಗ ಹಾಗಿಲ್ಲ.  ಭಾನುವಾರ, ಸರ್ಕಾರಿ ರಜಾ ದಿನ ಹಾಗೂ ಕರಿ ಇರುವ ದಿನಗಳಲ್ಲಿ ಭಾರಿ ಬೇಡಿಕೆ. ಅಲ್ಲದೇ ಹೃದಯ, ಶುಗರ್‌, ನಿತ್ರಾಣ, ದೇಹದ ಬಲ, ಅಪೌಷಿ್ಟಿಕತೆ, ಮತ್ತಿತರ ಕಾರಣಕ್ಕೆ ಮೀನು ತಿನ್ನುವವರ ಸಂಖ್ಯೆ ನಗರದಲ್ಲಿ ಹೆಚ್ಚಿದೆ. ಪುರುಷರು ಹೋಟೆಲ್‌ನಲ್ಲಿ  ತಿನ್ನುತ್ತಿದ್ದರು.ಮಹಿಳೆಯರಿಗೆ (ವಿಶೇಷವಾಗಿ ಗರ್ಭಿಣಿಯರು ಹಾಗೂ ಚಿಕ್ಕಮಕ್ಕಳು) ಕಬ್ಬಿಣ ಅಂಶ, ಪ್ರೊಟೀನ್‌ ಅಗತ್ಯ ಎಂಬ ದೃಷ್ಟಿಯಿಂದ ಸುಶಿಕ್ಷಿತರು ಮೀನು  ಸ್ವಚ್ಛಮಾಡಿಸಿ, ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹಿಂದೆ ಖರೀದಿಸಲು ಮುಜುಗರವಿತ್ತು. ಈಗ ಅದು ಪೌಷಿ್ಟಕ ಆಹಾರ ಎಂಬ ಹೆಮ್ಮೆಯಾಗಿದೆ’ ಎನ್ನುತ್ತಾರೆ ಖರೀದಿಗೆ ಬಂದ ಬಸವರಾಜ ಬಿರಾದಾರ.‘ಹಿಂದೆ ಇಲ್ಲಿನ ಹೋಟೆಲ್‌ಗಳಲ್ಲಿ ಮೀನು ಇರಲಿಲ್ಲ. ಈಗ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಮೀನು ಲಭ್ಯ. ಏಕೆಂದರೆ ಹೊರಗಿನಿಂದ ಬಂದವರು ಕೇಳುತ್ತಾರೆ.ನಮ್ಮಲ್ಲಿ ಒಂದು ಕೆಜಿಗೆ 60 ರೂಪಾಯಿ ಹೆಚ್ಚುವರಿ ನೀಡಿದರೆ, ಫ್ರೈ ಮಾಡಿ ಕೊಡುತ್ತೆವೆ ’ ಎನ್ನುತ್ತಾರೆ ಶರಣ ಬಸವೇಶ್ವರ ಕೆರೆ ಬಳಿಯ ಮೀನು ಮಾರಾಟದ ನಾಗಯ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry