ಶುಕ್ರವಾರ, ಜೂನ್ 25, 2021
21 °C

ರೊಟ್ಟಿ ಬಡಿಯುವವರು ಸಿರಿ ಸೈನಿಕರಾಗಬೇಕು

ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ರೊಟ್ಟಿ ಬಡಿಯುವವರು ಸಿರಿ ಸೈನಿಕರಾಗಬೇಕು~ ಎಂದು ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ಪಿ.ವಿ. ಸತೀಶ ಸಲಹೆ ನೀಡಿದರು.ಸಿರಿಧಾನ್ಯಗಳನ್ನು ಒಳಗೊಂಡ ರೊಟ್ಟಿ ಉದ್ಯಮವನ್ನು ಅಭಿವೃದ್ಧಿಗೊಳಿಸುವ ಕುರಿತು ಧಾರವಾಡದಲ್ಲಿ ಮಂಗಳವಾರ ನಡೆದ ರೊಟ್ಟಿ ಬಡಿಯುವವರ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿದರು.`ರೊಟ್ಟಿ ಬಡಿಯುವವರನ್ನು ಈ ಸಮಾಜ ಗುರುತಿಸಿಲ್ಲ. ವಿಧವೆಯರು, ಬಡವರು, ಅಸಹಾಯಕ ಮಹಿಳೆಯರು ರೊಟ್ಟಿ ಬಡಿಯುವುದನ್ನು ನೆಚ್ಚಿ ಕೊಂಡಿರುತ್ತಾರೆ. ಅವರೆಲ್ಲ ರೊಟ್ಟಿ ಮೂಲಕ ಪೌಷ್ಟಿ ಕತೆಯನ್ನು ನೀಡುತ್ತಾರೆ. ಅವರು ಸಾಲ ಕೇಳುವುದಿಲ್ಲ, ಯಾರ ನೆರವು ಕೇಳುವುದಿಲ್ಲ.ರೊಟ್ಟಿ ಮೂಲಕ ತಮ್ಮ ಬದುಕನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಅವರಿಗೆ ರೊಟ್ಟಿ ಮೂಲಕ ಆಹಾರ ನೀಡುತ್ತಿರುವೆವೆಂಬ ಸಂತೃಪ್ತಿ ಇರುತ್ತದೆ. ಅಂಥವರನ್ನು ಸಂಘಟಿಸಿ ಇನ್ನೊಂದು ತಿಂಗಳಲ್ಲಿ ರೊಟ್ಟಿ ಬಡಿಯುವವರ ಸಹಕಾರಿ ಸಂಘವನ್ನು ಧಾರವಾಡದಲ್ಲಿ ಆರಂಭಿಸುತ್ತೇವೆ.ಅವರಿಗೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಸಿಗುತ್ತವೆ. ಆದರೆ ಗೃಹಬಳಕೆಯ ಸಿಲಿಂಡರ್ ದರದಲ್ಲೇ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗಬೇಕು ಎನ್ನುವ ಬೇಡಿಕೆ ಜೊತೆಗೆ ರೊಟ್ಟಿ ಬಡಿಯುವವರನ್ನು ಉತ್ತೇಜಿಸಲು ಒಂದೇ ದರದಲ್ಲಿ ರೊಟ್ಟಿ ಮಾರಬೇಕೆಂದು ಸೂಚಿಸಿದ್ದೇವೆ~ ಎಂದು ಮೈಸೂರಿನವರಾದ ಸದ್ಯ ಆಂಧ್ರಪ್ರದೇಶದ ಮೇದಕ್ ಜಿಲ್ಲೆಯ ಪಾಸ್ತಾಪುರದಲ್ಲಿ ನೆಲೆಸಿರುವ ಅವರು ತಿಳಿಸಿದರು.`ಹಸಿರು ಕ್ರಾಂತಿ ಆದ ಮೇಲೆ ಪಡಿತರ ಅಕ್ಕಿ ಬಂತು. 2 ಅಥವಾ 3 ರೂಪಾಯಿಗೇ ಅಕ್ಕಿ ಕೊಡಲು ಆರಂಭಿಸಿದ ಮೇಲೆ ಕಿರುಧಾನ್ಯಗಳನ್ನು ಬೆಳೆಯುವುದು ಹಾಗೂ ಬಳಸುವುದು ಕಡಿಮೆ ಆಯಿತು. ಆದರೆ ನಮ್ಮ ದೇಶದ ಶೇ 65ರಷ್ಟು ಒಣಪ್ರದೇಶವಿದೆ. ಅಲ್ಲಿ ಧಾರಾಳವಾಗಿ ಕಿರುಧಾನ್ಯಗಳನ್ನು ಬೆಳೆಸಬಹುದು.ಪ್ರಪಂಚದಲ್ಲಿ ಅತಿ ಹೆಚ್ಚು ಕಿರುಧಾನ್ಯ ಬೆಳೆಯುವ ಹಾಗೂ ಬಳಸುವ ದೇಶ ನಮ್ಮದು. ಇದನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಯಿತು. ಅಕ್ಕಿ ಹಾಗೂ ಗೋಧಿಯಲ್ಲಿರುವ ಪೌಷ್ಟಿಕಾಂಶಕ್ಕಿಂತ ಶೇ 3-5ರಷ್ಟು ಅಧಿಕ ಪೌಷ್ಟಿಕತೆ ಕಿರುಧಾನ್ಯಗಳಲ್ಲಿರುತ್ತದೆ~ ಎಂದು ಅವರು ವಾಸ್ತವಾಂಶ ಬಿಚ್ಚಿಟ್ಟರು.`ಕಿರುಧಾನ್ಯಗಳನ್ನು ಬೆಳೆಸಲು ಹಾಗೂ ಬಳಸಲು ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಕಳೆದ ವರ್ಷ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರನ್ನು ಭೇಟಿಯಾಗಿ ಧಾರವಾಡ ಜಿಲ್ಲೆಯನ್ನು ಸಿರಿ ಜಿಲ್ಲೆಯಾಗಿ ಮಾಡಿ ಆಗ ಸರಿ ಜಿಲ್ಲೆಯಾಗುತ್ತದೆ ಎಂದು ಸಲಹೆ ನೀಡಿದೆವು.

 

ಈ ನಿಟ್ಟಿನಲ್ಲಿ ಜೋಳದ ರೊಟ್ಟಿ ಜೊತೆಗೆ ನವಣೆ ಹಾಗೂ ಸಜ್ಜೆಯ ರೊಟ್ಟಿ ಮಾರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಇದರೊಂದಿಗೆ ರೊಟ್ಟಿ ಮಾಡುವವರು ಹಾಗೂ ಮಾರುವವರಿಗೆ ನವಣೆ ಕಿಚಡಿ ಮಾಡಿ ಮಾರಿ ಎಂದು ಸಲಹೆ ನೀಡಿದ್ದೇವೆ. ಅಲ್ಲದೇ ಪಾಲಕ್, ಶೇಂಗಾ, ಎಳ್ಳು ಮಿಶ್ರಣ ಮಾಡಿದ ಬಿಸ್ಕಿಟ್ ಆಕಾರದ ರೊಟ್ಟಿಗಳನ್ನು ಮಾಡಲು ಹೇಳಿದ್ದೇವೆ.ಇದಕ್ಕಾಗಿ ಸಿರಿಧಾನ್ಯದ ಆಹಾರ ಸಿದ್ಧಗೊಳಿಸುವವರನ್ನು ಮತ್ತು ರೊಟ್ಟಿ ಬಡಿಯುವವರನ್ನು ಒಂದೆಡೆ ಸೇರಿಸಿ ಮಂಗಳವಾರ ಚರ್ಚಿಸಿದೆವು~ ಎಂದು ಅವರು ವಿವರಿಸಿದರು.`ರೊಟ್ಟಿ ಬಡಿಯುವವರನ್ನು ಹಾಗೂ ಸಿರಿಧಾನ್ಯ ಬೆಳೆಯುವವರನ್ನು ಉತ್ತೇಜಿಸಲು ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ~ ಎಂದು 65 ವರ್ಷದ ಸತೀಶ ಪ್ರಕಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.