ರೋಂ ಸಾಮ್ರಾಜ್ಯ ನೀಡುವ ಎಚ್ಚರಿಕೆ

7

ರೋಂ ಸಾಮ್ರಾಜ್ಯ ನೀಡುವ ಎಚ್ಚರಿಕೆ

Published:
Updated:

ಗಿಬನ್ಸ್ ಎಂಬ ಬಹು ಶ್ರೇಷ್ಠ ಇತಿಹಾಸಕಾರ ತನ್ನ ಮಹತ್ವದ ಪುಸ್ತಕ, ‘ರೋಂ ಸಾಮ್ರಾಜ್ಯದ ಅವನತಿ ಮತ್ತು ನಾಶ’ದಲ್ಲಿ ಅಂತಹ ಬಲಿಷ್ಠ ಸಾಮ್ರಾಜ್ಯ ನಷ್ಟವಾಗಿ ಹೋಗುವುದಕ್ಕೆ ಐದು ಕಾರಣಗಳನ್ನು ಕೊಡುತ್ತಾನೆ. ಆ ದೇಶದ ಪ್ರಜೆಗಳು ಅತ್ಯಂತ ಕೀಳು ದರ್ಜೆಯ ಸಂತೋಷಗಳಲ್ಲಿ ಮೈಮರೆತದ್ದು ಮೊದಲನೆಯ ಕಾರಣ.ಎರಡನೆಯದು, ಮನೆಯ ವ್ಯವಸ್ಥೆ ಕುಸಿದು ಬಿದ್ದದ್ದು. ಅಂದರೆ ಮನೆಯಲ್ಲಿ ಜನರ ಮಧ್ಯೆ ಆತ್ಮೀಯತೆ, ಪ್ರೀತಿ ಕಡಿಮೆಯಾಗಿ ಸಂಬಂಧಗಳು ಕಡಿದು ಹೋದದ್ದು. ಮೂರನೆಯ ಕಾರಣ, ದೇಶ ತನ್ನ ಬಹುಪಾಲು ಹಣವನ್ನು ಯುದ್ಧಸಿದ್ಧತೆಗಾಗಿ ಸೈನ್ಯದ ಮೇಲೆ ಖರ್ಚು ಮಾಡಿದ್ದು. ನಾಲ್ಕನೆಯದು, ದೇಶ ತನ್ನ ಜನರ ಮೇಲೆ ಹೇರಿದ ವಿಪರೀತವಾದ ತೆರಿಗೆಗಳು.  ಕೊನೆಯದಾಗಿ ರೋಂ ದೇಶದ ಜನರಿಗೆ ಧರ್ಮ ಹಾಗೂ ದೇವರಲ್ಲಿ ನಂಬಿಕೆ ಕಡಿಮೆಯಾದದ್ದು. ಈ ಐದೂ ಕಾರಣಗಳು ಒಂದಾಗಿ ಬಂದಾಗ ದೇಶದ ಅವನತಿ ಪ್ರಾರಂಭವಾಗುತ್ತದೆ. ನಾವೆಲ್ಲ ಬ್ಯಾಬಿಲೋನಿಯನ್ ಸಾಮ್ರಾಜ್ಯದ ಬಗ್ಗೆ ಕೇಳಿದ್ದೇವೆ. ಪ್ರಪಂಚದ ಆದಿಯಿಂದ ಅಂತಹ ಪ್ರಬಲವಾದ, ಶ್ರೀಮಂತವಾದ ಸಾಮ್ರಾಜ್ಯ ನಿರ್ಮಾಣವಾಗಿರಲಿಲ್ಲ. ರಾಜಧಾನಿಯಾದ ಬ್ಯಾಬಿಲಾನ್‌ನಲ್ಲಿ ಬಂಗಾರದ ಹೊಗೆಯಾಡುತ್ತಿತ್ತು. ಅರಮನೆಯ ಸುತ್ತ ಇದ್ದ ಭಾರಿ ಗೋಡೆಯ ಮುಖ್ಯದ್ವಾರಗಳ ತುಂಬ ವಜ್ರಗಳನ್ನು ಅಳವಡಿಸಿದ್ದರಂತೆ.  ಅರಮನೆಯ ಒಳಗಿನ ಸಂಭ್ರಮ, ಶ್ರೀಮಂತಿಕೆಯನ್ನು ಕಲ್ಪಿಸುವುದೇ ಅಸಾಧ್ಯ. ಹೀಗೆ ಶ್ರೀಮಂತಿಕೆಯ ತುತ್ತ ತುದಿಗೆ ಏರಿದಾಗಲೇ ಅವನತಿಯ ಬೀಜಗಳು ಮೊಳೆಯತೊಡಗುತ್ತವೆ. ಇದು ಸೃಷ್ಟಿಯ ನಿಯಮ. ಜನ ಲೋಲುಪತೆಯಲ್ಲಿ ತೊಡಗಿ ರಾಜನೇ ತುಂಬ ಬಲಿಷ್ಠನೆಂದೂ, ‘ಭಗವಂತ ಇರುವುದೇ ಸಾಧ್ಯವಿಲ್ಲ, ಇದ್ದಿದ್ದರೆ ಯಾರಿಗಾದರೂ ಕಾಣಬೇಕಿತ್ತಲ್ಲ’ ಎಂದು ಬುದ್ಧಿಜೀವಿಗಳು ತರ್ಕಮಾಡಲು ಪ್ರಾರಂಭಿಸಿದರು. ಅದನ್ನು ರಾಜನೂ ನಂಬತೊಡಗಿದ.ಈ ರಾಜನ ತಂದೆ ಧರ್ಮಭೀರುವಾಗಿದ್ದ. ಆತ ಜೆರುಸಲೇಂನ ದೇವಸ್ಥಾನದಿಂದ ತಮ್ಮ ಹಿರಿಯರು ತಂದಿದ್ದ ಪತ್ರ ಪಾತ್ರೆಗಳಿಗೆ ಗೌರವದಿಂದ ಪೂಜೆಮಾಡುತ್ತಿದ್ದ. ಅವನ ಮಗ ತರುಣ ಚಕ್ರವರ್ತಿ ಉನ್ಮತ್ತನಾಗಿ ಆ ಪಾತ್ರೆಗಳನ್ನು ದರ್ಬಾರಿಗೆ ತರುವಂತೆ ಆದೇಶ ನೀಡಿದ. ಆ ಪವಿತ್ರ ಪಾತ್ರೆಗಳನ್ನು ತರಲಾಯಿತು. ಅಹಂಕಾರದಿಂದ ಕುರುಡನಾಗಿದ್ದ ಆತ ಅವುಗಳಲ್ಲಿ ಮದಿರೆಯನ್ನು ತುಂಬುವಂತೆ ಆಜ್ಞೆ ಮಾಡಿದ.  ಸೇವಕರು ಹಾಗೆಯೇ ಮಾಡಿದರು. ಬಹುಶಃ ಇವನ ಪೂರ್ವಜರು ತಮ್ಮ ತಮ್ಮ ಸಮಾಧಿಗಳಲ್ಲಿ ನಾಚಿಕೆಯಿಂದ, ಸಿಟ್ಟಿನಿಂದ, ಕುದಿದುಹೋಗಿರಬಹುದು. ತಾನು ಅಮಲಿನಲ್ಲಿ ತೂರಾಡುತ್ತ ಮದಿರೆ ತುಂಬಿದ ಪವಿತ್ರ ಪಾತ್ರೆಗಳನ್ನು ಎತ್ತಿ ತುಟಿಗೆ ಹಚ್ಚಿಕೊಂಡು ಮದಿರೆಯನ್ನು ಹೀರತೊಡಗಿದ. ಸುರೆ ಅವನ ಗಡ್ಡದಿಂದಿಳಿದು ಬಟ್ಟೆಯ ಮೇಲೆ ಹರಡಿತು. ‘ಛೇ ಇವೆಂಥ ದರಿದ್ರ ಪಾತ್ರೆಗಳು. ಇವು ಪವಿತ್ರ ಪಾತ್ರೆಗಳಂತೆ’ ಎಂದು ಗಹಗಸಿ ನಗುತ್ತ ಅವುಗಳನ್ನು ಎತ್ತಿ ನೆಲಕ್ಕೆ ರಪ್ಪನೇ ಅಪ್ಪಳಿಸಿದ. ಆಗ ಅರಮನೆ ನಡುಗುವಂತೆ ಧೂಮ್, ಧೂಮ್, ಧೂಮ್ ಎಂದು ಸದ್ದಾಯಿತು.ಮರುಕ್ಷಣದಲ್ಲೇ ಎದುರಿಗಿದ್ದ ಗೋಡೆಯ ಮೇಲೆ ಕೆಲವು ಅಕ್ಷರಗಳು ಮೂಡಿದವು. ಯಾರಿಗೂ ಅವುಗಳ ಅರ್ಥ ತಿಳಿಯಲಿಲ್ಲ.  ರಾಜ ತನ್ನ ಪಂಡಿತರನ್ನು ಕರೆಸಿ ಕೇಳಿದ. ಅವರಲ್ಲಿ ಹಿರಿಯ, ‘ರಾಜಾ ನಾನು ಸತ್ಯವನ್ನೇ ಹೇಳಬೇಕೇ? ನಿನಗೆ ಸತ್ಯ ಕೇಳುವ ಧೈರ್ಯವಿದ್ದರೆ ಮಾತ್ರ ಹೇಳುತ್ತೇನೆ’ ಎಂದು ಹೇಳಿದ. ರಾಜ ‘ಸತ್ಯವನ್ನೇ ಹೇಳು’ ಎಂದು ಒತ್ತಾಯಿಸಿದ. ಆಗ ಆ ಪಂಡಿತ ಹೇಳಿದ, ‘ರಾಜಾ, ಧರ್ಮ ಮತ್ತು ನಿನ್ನನ್ನು ತಕ್ಕಡಿಯಲ್ಲಿ ತೂಗಿದಾಗ ನಿನ್ನ ತೂಕ ಪೂರ್ತಿ ಕುಸಿದುಹೋಗಿದೆ. ಇನ್ನು ನಿನಗೆ ಬಹಳ ದಿನ ಉಳಿಗಾಲವಿಲ್ಲ.’ಅಂದೇ ರಾತ್ರಿ ರಾಜನ ಹತ್ಯೆಯಾಯಿತು. ರಾಜ್ಯ ಅನಾಯಕವಾಯಿತು, ಅಶಾಂತಿ ತಾಂಡವವಾಡಿತು. ಮಹಾನ್ ಸಾಮ್ರಾಜ್ಯ ದೂಳಿನಲ್ಲಿ ಸೇರಿಹೋಯಿತು. ಖ್ಯಾತ ವಿಕ್ಟೋರಿಯನ್ ಚಿಂತಕ ರಸ್ಕಿನ್ ಹೇಳುತ್ತಾನೆ, ‘ಯಾವಾಗ ಒಂದು ನಾಗರಿಕತೆಯ ನಾಯಕರು ಧರ್ಮದ ಶಕ್ತಿಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೋ ಆಗ ಅದು ಬ್ಯಾಬಿಲೋನಿಯನ್ ಸಾಮ್ರಾಜ್ಯದ ಹಾದಿಯನ್ನೇ ಹಿಡಿಯುತ್ತದೆ.’ನಮ್ಮ ನಾಯಕರಿಗೂ, ನಮಗೂ ಇದರ ಅರಿವು ಆಗಬೇಕು. ಗಿಬನ್ಸ್ ಹೇಳಿದ ನಾಶದ ಐದು ಕಾರಣಗಳನ್ನು ಗಮನಿಸಿದರೆ ಮತ್ತು ನಮ್ಮ ಪ್ರಸಕ್ತ ವಾತಾವರಣಕ್ಕೆ ಅನ್ವಯಿಸಿದರೆ ಗಾಬರಿಯಾಗುವುದು ಸಹಜವಲ್ಲವೇ?  ಪರಿಸ್ಥಿತಿಯನ್ನು ಬದಲಿಸಲು ಪ್ರಯತ್ನಗಳು ಸತತವಾಗಿ ನಡೆಯಲೇಬೇಕಾದ ಹಂತವನ್ನು ನಾವು ತಲುಪಿದ್ದೇವೆ ಎನ್ನಿಸುತ್ತದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry