ಶನಿವಾರ, ಅಕ್ಟೋಬರ್ 19, 2019
28 °C

ರೋಗ,ಕೀಟ ನಿಯಂತ್ರಣಕ್ಕೆ ಸಲಹೆ

Published:
Updated:

ರಾಮನಗರ: `ಮಾವಿನ ಮರಗಳಲ್ಲಿ ಹೂವು ಅರಳುತ್ತಿದ್ದು, ಈ ಸಂದರ್ಭದಲ್ಲಿ ಸಂಭವನೀಯ ಕೀಟ ಮತ್ತು ರೋಗಗಳ ಹಾವಳಿಯಿಂದ ರಕ್ಷಿಸಲು ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ~ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಬಿ.ಕೃಷ್ಣ ತಿಳಿಸಿದರು.`ಅನಗತ್ಯ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸಬಾರದು. ಅತಿ ವಿಷಕಾರಿಯಾದ ಹಾಗೂ ನಿಷೇಧಿಸಲ್ಪಟ್ಟ ಔಷಧಿಗಳನ್ನು ಬಳಸಬಾರದು~ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಜನವರಿಯಲ್ಲಿ ಮೋಡ ಮುಸುಕಿದ ಅಥವಾ ಮಂಜುಕವಿದ ವಾತಾವರಣವಿದ್ದಲ್ಲಿ ಮಾವಿಗೆ `ಬೂದಿ ರೋಗ~ ಹೆಚ್ಚಾಗಿ ಕಾಣಿಸುಕೊಳ್ಳುತ್ತದೆ. ಇದರಿಂದ ಹೊಸದಾಗಿ ಕಚ್ಚಿದ ಕಾಯಿಗಳನ್ನು ರಕ್ಷಿಸಲು `ಡೈಥೇನ್~-ಎಂ-45 (2ಗ್ರಾಂ) ಜತೆಗೆ `ಕ್ಯಾರಥೇನ್~ (1 ಮಿ.ಲಿ) ಅಥವಾ ಬಾವಿಸ್ಟಿನ್ 2 ಗ್ರಾಂ/ಲೀಟರ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವಂತೆ ಅವರು ರೈತರಿಗೆ ಸಲಹೆ ನೀಡಿದರು.ಜಿಲ್ಲೆಯಲ್ಲಿ ಹಳೆಯ ಮತ್ತು ಹೊಸ ಮಾವಿನ ತೋಟಗಳು ಅಕ್ಕ ಪಕ್ಕದಲ್ಲಿಯೇ ಇರುವ ಕಾರಣ, ಕಾಂಡ ಕೊರೆಯುವ ಹುಳುವಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ ತೊಗಟೆ ತಿನ್ನುವ ಹುಳು ಸಹ ಅಲ್ಲಲ್ಲಿ ಕಾಣಿಸಿಕೊಂಡಿವೆ ಎಂದು ಅವರು ಹೇಳಿದರು.ನಿಯಂತ್ರಣ ಹೇಗೆ ?:

ಈ ಕೀಟವನ್ನು ನಿಯಂತ್ರಿಸಲು ಬೊಡ್ಡೆಯಲ್ಲಿ ಕಂಡು ಬರುವ ರಂಧ್ರದಲ್ಲಿನ ಪುಡಿ/ಹಿಟ್ಟುಗಳನ್ನು ಸ್ಕ್ರೂಡ್ರೈವರ್/ತಂತಿಗಳಿಂದ ಸ್ವಚ್ಛಗೊಳಿಸಿ 5ರಿಂದ 10 ಎಂ.ಎಲ್ `ನುವಾನ್~ ಔಷಧಿಯನ್ನು ನೇರವಾಗಿ ರಂಧ್ರದಲ್ಲಿ ಸಿರಿಂಜ್ ಮೂಲಕ ಹಾಕಿ, ರಂಧ್ರವನ್ನು ಹಸಿ ಜೇಡಿ ಮಣ್ಣಿನಿಂದ ಭದ್ರವಾಗಿ ಮುಚ್ಚಬೇಕು ಎಂದು ಅವರು ಸಲಹೆ ನೀಡಿದರು. ಮರದ ಬೊಡ್ಡೆಯನ್ನು ನೆಲದಿಂದ 2-3 ಅಡಿಯವರೆಗೂ ರಕ್ಷಣಾ ಪೇಸ್ಟ್ ಲೇಪಿಸುವ ಮೂಲಕ ಈ ಕಾಂಡಕೊರೆಯುವ ದುಂಬಿಯು ಮತ್ತೆ ಹಾನಿ ಮಾಡದಂತೆ ತಡೆಯಬಹುದು ಎಂದು ಅವರು ತಿಳಿಸಿದರು.ಕಾಪರ್ ಆಕ್ಸಿ ಕ್ಲೋರೈಡ್ (40 ಗ್ರಾಂ), ಕ್ಯಾಲಿಕ್ಸಿನ್ (5 ಮಿ.ಲೀ), ಕ್ಲೋರೋಫೈರಿಫಾಸ್ (10 ಮಿ.ಲೀ), ಬಿಳಿ ಡಿಸ್ಟಂಪರ್ (100 ಮಿ.ಲೀ) ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ, ಬ್ರಶ್ ಮೂಲಕ ಬಳಿಯಬೇಕು ಎಂದು ಅವರು ಮಾಹಿತಿ ನೀಡಿದರು.ಕಾಯಿ ಕಚ್ಚಿ ಗೋಲಿ ಗಾತ್ರವಾದಾಗ ಸಲ್ಟೇಟ್ ಆಫ್ ಪೋಟ್ಯಾಷ್- 5 ಗ್ರಾಂ/ಲೀಟರ್‌ನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಹೆಚ್ಚು ಕಾಯಿ ಕಚ್ಚಲು ಸಹಕಾರಿಯಾಗುತ್ತದೆ. ಜತೆಗೆ ಸ್ಟೋನ್ ಫಾರ್ಮೇಷನ್ ತಡೆಗಟ್ಟಲು ಕ್ಯಾಬ್-2 ಗ್ರಾಂ/ಲೀಟರ್ (ಕ್ಯಾಲ್ಸಿಯಂ ಮತ್ತು ಬೋರಾನ್) ಸಿಂಡಿಸುವುದು ಉತ್ತಮ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಹಣ್ಣಿನ ನೊಣದ ಹಾವಳಿ ತಪ್ಪಿಸಲು ಡೆಸಿಸ್( 2 ಮಿ.ಲಿ/ಲೀಟರ್) ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಅವರು ವಿವರಿಸಿದರು.ಮಾರುಕಟ್ಟೆ ತಂತ್ರ: ಹಣ್ಣುಗಳನ್ನು ಕೊಯ್ಲು ಮಾಡುವಾಗ ಕೋಲಿನಿಂದ ಬಡಿದು ಉದುರಿಸುವ ಕ್ರಮ ಅನುಸರಿಸಬೇಡಿ. ಪ್ರತಿ ಕಾಯಿಯನ್ನು ಜೋಲಿ ಉಪಯೋಗಿಸಿ ಕೀಳುವುದರಿಂದ ರೈತರ ವರ್ಷದ ಶ್ರಮಕ್ಕೆ ಉತ್ತಮ ಬೆಲೆ ದೊರೆಯುತ್ತದೆ. ಕಾಯನ್ನು ಕಿತ್ತ ನಂತರ ನೆರಳಿರುವ ಹಾಗೂ ಕಡಿಮೆ ಉಷ್ಣಾಂಶ ಇರುವ ಜಾಗದಲ್ಲಿ ಶೇಖರಿಸಿ, ಅದರಲ್ಲಿ ಇರುವಂತಹ ಸೋನೆಯು ಸಂಪೂರ್ಣವಾಗಿ ಒಣಗಿರುವುದನ್ನು ಖಚಿತಪಡಿಸಿಕೊಂಡ ನಂತರ ಕ್ರೇಟ್‌ಗಳಲ್ಲಿ ತುಂಬಿ ಮಾರುಕಟ್ಟೆಗೆ ಸರಬರಾಜು ಮಾಡಿದರೆ ಶೇ 50ರಿಂದ 60ರಷ್ಟು ಹೆಚ್ಚಿನ ಬೆಲೆ ದೊರೆಯುತ್ತದೆ. ಎರಡು ಕೆ.ಜಿ ಅಥವಾ ನಾಲ್ಕು ಕೆ.ಜಿ `ರಾಮ್‌ಗೋಲ್ಡ್~ ಬಾಕ್ಸ್‌ನಲ್ಲಿ ಕುಷನ್ ಉಪಯೋಗಿಸಿ ಪ್ಯಾಕ್ ಮಾಡಿದಲ್ಲಿ ಹಣ್ಣಿಗೆ ಇನ್ನೂ ಹೆಚ್ಚು ಬೆಲೆ ದೊರೆಯಬಹುದು ಎಂದು ಅವರು ಹೇಳಿದರು. ಜಿಲ್ಲೆಯ ಮಾವು ಬೆಳೆಗಾರರು ಮಾರುಕಟ್ಟೆಗಾಗಿ ಹಾಪ್‌ಕಾಮ್ಸ-0880- 2657 2832, ಸಫಲ್- 080- 2845 8360, ರಿಲೆಯನ್ಸ್- 080- 4149 8280 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು. ಮಾವು ಬೆಳೆ ಸೇರಿದಂತೆ ತೋಟಗಾರಿಕಾ ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಹಾರ್ಟಿ ಕ್ಲಿನಿಕ್ ನಂತರ 080-2727 5620 ಸಂಪರ್ಕಿಸಬಹುದು ಎಂದರು.

Post Comments (+)