ರೋಗಿಗಳಿಂದ ಪಡೆದ ಹಣ ವಾಪಸಾತಿಗೆ ಸೂಚನೆ

7

ರೋಗಿಗಳಿಂದ ಪಡೆದ ಹಣ ವಾಪಸಾತಿಗೆ ಸೂಚನೆ

Published:
Updated:

ರಾಯಚೂರು: ಒಪೆಕ್ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ 114 ರೋಗಿಗಳಿಂದ ಚಿಕಿತ್ಸೆಗಾಗಿ ಹಣ ಪಡೆದಿರುವುದನ್ನು ಆಸ್ಪತ್ರೆ ನಿರ್ವಹಿಸುತ್ತಿರುವ ಅಪೊಲೊ ಸಂಸ್ಥೆಯ ಆಡಳಿತ ವರ್ಗ ಒಪ್ಪಿಕೊಂಡಿದೆ. ಈ ಹಣವನ್ನು ಸಂಬಂಧಪಟ್ಟವರಿಗೆ ಮರಳಿ ಕೊಡುವುದಾಗಿ ಹೇಳಿದ್ದಾರೆ. ಈ ಆಸ್ಪತ್ರೆ ನಿರ್ವಹಣೆಯನ್ನು ಮತ್ತೆ ಇದೇ ಸಂಸ್ಥೆಗೆ ವಹಿಸಿಕೊಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಖಾತೆ ಸಚಿವ ಶ್ರೀರಾಮುಲು ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001ರಲ್ಲಿ ಒಪೆಕ್ ಆಸ್ಪತ್ರೆ ನಿರ್ಮಾಣಗೊಂಡಾಗ ಅದರ ನಿರ್ವಹಣೆಯನ್ನು ಹೊತ್ತಿದ್ದು ಅಪೊಲೊ ಸಂಸ್ಥೆ. 10 ವರ್ಷ ಈ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಒಪ್ಪಂದದ ಅವಧಿ ಪೂರ್ಣಗೊಂಡಿದ್ದು, ಮತ್ತೆ ಇದೇ ಸಂಸ್ಥೆಗೆ ಒಪೆಕ್ ಆಸ್ಪತ್ರೆ ವಹಿಸಿಕೊಡುವ ಬಗ್ಗೆ ಇಂದು ನಡೆದ ಸಭೆಯಲ್ಲಿ ನಿರ್ಧರಿಸಿಲ್ಲ ಎಂದು ಹೇಳಿದರು.ಈ ಭಾಗದ ಜನತೆಗೆ, ಬಡ ರೋಗಿಗಳಿಗೆ ಉಪಯೋಗವಾಗಲಿ. ವೈದ್ಯಕೀಯ ಸೌಲಭ್ಯ ದೊರಕಲಿ ಎಂಬ ಆಶಯದೊಂದಿಗೆ ನಿರ್ಮಾಣಗೊಂಡ ಈ ಆಸ್ಪತ್ರೆಯ ಉದ್ದೇಶ ಸಾಕಾರಕ್ಕೆ ಗಮನಹರಿಸಲಾಗುವುದು. ಒಪೆಕ್ ಆಸ್ಪತ್ರೆಯನ್ನು 10 ವರ್ಷ ನಿರ್ವಹಿಸಿದ ಅಪೊಲೊ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ದೂರುಗಳೂ ಇವೆ. ನಿರ್ದಿಷ್ಟಪಡಿಸಿದ ಸುಪರ್ ಸ್ಪೆಷಾಲಿಟಿ ವೈದ್ಯಕೀಯ ಚಿಕಿತ್ಸೆ ದೊರಕುತ್ತಿಲ್ಲ. ರೆಫರಲ್ ಆಸ್ಪತ್ರೆ ಎಂಬ ಆರೋಪವಿದೆ.ಬಿಪಿಎಲ್ ಕಾರ್ಡ್‌ದಾರರಿಗೆ ಸಮರ್ಪಕ ಚಿಕಿತ್ಸೆ ದೊರಕಿಲ್ಲ ಎಂಬುದು ಸೇರಿದಂತೆ ಹಲವಾರು ದೂರುಗಳು ಬಂದಿವೆ. ಇವೆಲ್ಲವುಗಳ ಬಗ್ಗೆಗೂ ಅಪೊಲೊ ಸಂಸ್ಥೆಯ ಆಡಳಿತ ವರ್ಗದ ಜೊತೆ ಚರ್ಚಿಸಿ ಗಮನಕ್ಕೆ ತರಲಾಗಿದೆ ಎಂದರು. ಒಟ್ಟಾರೆ ಈ ಭಾಗದ ಜನತೆಗೆ ಸುಪರ್ ಸ್ಪೆಷಾಲಿಟಿ ವೈದ್ಯಕೀಯ ಚಿಕಿತ್ಸೆ ಸಮರ್ಪಕ ದೊರಕಬೇಕು. ಈ ಬಗ್ಗೆ ಇಷ್ಟರಲ್ಲಿಯೇ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ, ಇಲ್ಲಿನ ಜಿಲ್ಲಾಧಿಕಾರಿ, ಸಂಸ್ಥೆಯ ಮುಖ್ಯಸ್ಥರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಅಪೋಲೊ ಸಂಸ್ಥೆಯ ಒಪ್ಪಂದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಎನ್ ಶಂಕರಪ್ಪ, ಜಿಲ್ಲಾಧಿಕಾರಿ ವಿ ಅನ್ಬುಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry