ಶುಕ್ರವಾರ, ನವೆಂಬರ್ 15, 2019
20 °C

`ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆ'

Published:
Updated:

ಯಲಹಂಕ: `ಪಶು ಸಂಗೋಪನಾ ಇಲಾಖೆಯನ್ನು ಪುನರ್ ರಚಿಸುವುದರೊಂದಿಗೆ ಜಿಲ್ಲಾ ಮಟ್ಟದಲ್ಲಿ ರೋಗ ನಿರ್ಣಯ ಪ್ರಯೋಗಾಲಯಗಳನ್ನು ತೆರೆಯಲಾಗುತ್ತಿದೆ' ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಜನ್ನು ಹೇಳಿದರು.ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ 13ನೇ ಭಾರತೀಯ ಪಶುವೈದ್ಯಕೀಯ ಕಾಂಗ್ರೆಸ್ ಮತ್ತು 20ನೇ ವಾರ್ಷಿಕ ಘಟಿಕೋತ್ಸವ ಮತ್ತು ಎರಡು ದಿನದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಖಾಲಿ ಇರುವ ಪಶು ವೈದ್ಯಾಧಿಕಾರಿಗಳ ಮತ್ತು ಪ್ಯಾರಾ ವೆಟೆರಿನರಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಈಗಾಗಲೆ ಕ್ರಮ ಕೈಗೊಂಡಿದೆ. ವಿಶೇಷ ತರಬೇತಿ ಹೊಂದಿದ ಪಶು ವೈದ್ಯಾಧಿಕಾರಿಗಳನ್ನು ಈ ಸ್ಥಳಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಪಶುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳನ್ನು ಹತೋಟಿಯಲ್ಲಿಡಲು ನೆರವಾಗಲಿದೆ' ಎಂದು ಅವರು ತಿಳಿಸಿದರು.

`ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಹೆಚ್ಚಿನ ಅನುದಾನವನ್ನು ಮೀಸಲಿರಿಸಿದ್ದು, ರೈತರು ಪಶುಗಳಿಗೆ ಯಾವುದೇ ಸಮಸ್ಯೆಯಿದ್ದರೂ ಹತ್ತಿರದ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿ ಪಡೆದುಕೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಸೂಚಿಸಿದರು. ಇಲಾಖೆಯು ಈಗಾಗಲೆ ಪಶುವಿಮೆ ಸೇರಿದಂತೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಸಲಹೆ ನಿಡಿದರು.ಇದೇ ಸಂದರ್ಭದಲ್ಲಿ ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದಿರುವ ವಿಜ್ಞಾನಿಗಳಾದ ಡಾ.ಚಂಗಪ್ಪ ಮತ್ತು ಡಾ.ಟಿ.ಜಿ.ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (ಬೀದರ್) ಪ್ರಾಣಿ ಆರೋಗ್ಯ ಮತ್ತು ಪ್ರಾಣಿ ಜೀವಶಾಸ್ತ್ರ ಪಶುವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ಹಾಗೂ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಸಮ್ಮೇಳನ ಏರ್ಪಡಿಸಲಾಗಿದೆ. ಭಾರತೀಯ ಪಶುವೈದ್ಯಕೀಯ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎನ್.ಸಿಂಗ್, ಸಂಸ್ಥಾಪನಾ ಕಾರ್ಯದರ್ಶಿ ಡಾ.ರಿಶೇಂದ್ರವರ್ಮಾ, ಸಮ್ಮೇಳನದ ಅಧ್ಯಕ್ಷ ಡಾ.ಎಂ.ಡಿ.ವೆಂಕಟೇಶ, ಸಂಘಟನಾ ಕಾರ್ಯದರ್ಶಿ ಡಾ.ಎಸ್.ಎಂ.ಬೈರೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)