ಸೋಮವಾರ, ಜೂನ್ 21, 2021
20 °C

ರೋಗ ಲಕ್ಷಣ ಮೌಲ್ಯಮಾಪನ ವ್ಯವಸ್ಥೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಷಮ ಸ್ಥಿತಿಯಲ್ಲಿರುವ ರೋಗಿಗಳಿಗೆ ಯಾವ ಮೂಲದಿಂದ ಸೋಂಕು ಉಂಟಾಗಿದೆ ಎಂಬುದನ್ನು ನಿಖರವಾಗಿ ಮತ್ತು ಕ್ಷಿಪ್ರವಾಗಿ ಪತ್ತೆ ಮಾಡಬಲ್ಲ ಹೊಸ ವಿಧಾನವೊಂದನ್ನು ನಗರದ `ಎಕ್ಸ್‌ಸೈಟಾನ್ ಡಯಾಗ್ನಸ್ಟಿಕ್ಸ್~ ಕಂಪೆನಿಯು ಅಭಿವೃದ್ಧಿಪಡಿಸಿದೆ.`ಅಣು ಜೀವವಿಜ್ಞಾನ ನೆಲೆಯಿಂದ ಕಂಡುಹಿಡಿದಿರುವ ಹೊಸ ವಿಧಾನವು ಮಾರ್ಗ ಪ್ರವರ್ತಕ ಸಂಶೋಧನೆಯಾಗಿದೆ. `ರೋಗ ಲಕ್ಷಣ ಮೌಲ್ಯಮಾಪನ ವ್ಯವಸ್ಥೆ~ (ಎಸ್‌ಇಎಸ್) ಎಂಬ ಈ ವಿಧಾನದಿಂದ ಸಾವಿನಂಚಿನಲ್ಲಿರುವ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಆ  ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಬಹುದಾಗಿದೆ~ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ರವಿಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಮೆದುಳು, ಕಣ್ಣು ಮೊದಲಾದ ಅಂಗಾಂಗಗಳಿಗೆ ಸೋಂಕು ಉಂಟಾದ ಸಂದರ್ಭದಲ್ಲಿ ಸಮಸ್ಯೆಗೆ ಸರಿಯಾದ ಕಾರಣವೇನು ಎಂಬುದನ್ನು ಆದಷ್ಟು ಬೇಗ ಪತ್ತೆ ಮಾಡಬೇಕು. ರೋಗಿಯ ಜೀವ ಉಳಿಸುವ ದೃಷ್ಟಿಯಿಂದ ಪ್ರತಿ ಕ್ಷಣವೂ ಅಮೂಲ್ಯ. ಸಾಂಪ್ರದಾಯಿಕ ರೋಗ ಪತ್ತೆ ವಿಧಾನದಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಾಣು ಸ್ವಭಾವಗಳು ಅಥವಾ ರೋಗ ನಿರೋಧಕ ಶಕ್ತಿಯ ಪರೀಕ್ಷೆಯ ಫಲಿತಾಂಶ ಪಡೆಯಲು 3ರಿಂದ 7 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಹೊಸ ವಿಧಾನದಲ್ಲಿ ಕೇವಲ ಏಳು ಗಂಟೆಯಲ್ಲಿ ಫಲಿತಾಂಶ ದೊರಕುತ್ತದೆ.ಫಲಿತಾಂಶದ ನಿಖರತೆಯು ಸಾಂಪ್ರದಾಯಿಕ ವಿಧಾನಕ್ಕಿಂತ ನಾಲ್ಕು ಪಟ್ಟು ಹೆಚ್ಚು~ ಎಂದು ಅವರು ಹೇಳಿದರು.

`ಎಸ್‌ಇಎಸ್ ಮಾಡಿಸಲು ರೂ 6,500 ರಿಂದ 15,000 ದವರೆಗೆ ಖರ್ಚಾಗುತ್ತದೆ. ಮೊದಲೇ ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಅಂದಾಜಿನ ಮೇಲೆ ಚಿಕಿತ್ಸೆ ನೀಡುವುದರಿಂದ ಆಗುವ ಅಪಾಯಗಳು ಹಾಗೂ ನಿರ್ದಿಷ್ಟ ಕಾರಣಕ್ಕೆ ನಿರ್ದಿಷ್ಟ ಚಿಕಿತ್ಸೆ ನೀಡುವುದರಿಂದ ಆಗುವ ಪ್ರಯೋಜನಗಳನ್ನು ಹೋಲಿಕೆ ಮಾಡಿದರೆ ವೆಚ್ಚ ಹೆಚ್ಚೆನಿಸುವುದಿಲ್ಲ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಸದ್ಯ ನಗರದ ಪೀಣ್ಯದಲ್ಲಿ ಎಕ್ಸ್‌ಸೈಟಾನ್ ಪ್ರಯೋಗಾಲಯವಿದೆ. ಇನ್ನಾರು ತಿಂಗಳಲ್ಲಿ ಮುಂಬೈ, ದೆಹಲಿಗಳಲ್ಲೂ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ನಂತರದ ಒಂದು ವರ್ಷದ ಅವಧಿಯಲ್ಲಿ ದೇಶದ ನಾಲ್ಕು ನಗರಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಪ್ರಯೋಗಾಲಯದ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 28367581- 85 ಅನ್ನು ಸಂಪರ್ಕಿಸಬಹುದು~ ಎಂದು ಅವರು ನುಡಿದರು.ಎಕ್ಸ್‌ಸೈಟಾನ್ ಕಂಪೆನಿಯಲ್ಲಿ ವೈಯಕ್ತಿಕವಾಗಿ ಬಂಡವಾಳ ಹೂಡಿರುವ ಬಯೋಕಾನ್ ಕಂಪೆನಿಯ ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ ಷಾ ಮಾತನಾಡಿ, `ಅಣು ಜೀವವಿಜ್ಞಾನದ ರೋಗ ಪತ್ತೆ ವಿಧಾನಗಳೇ ಭವಿಷ್ಯದ ವೈದ್ಯಕೀಯ ತಂತ್ರಜ್ಞಾನ ಎನಿಸಿಕೊಳ್ಳಲಿವೆ. ಈ ದೃಷ್ಟಿಯಿಂದ ಎಸ್‌ಇಎಸ್ ಮಹತ್ವದ ಮೈಲಿಗಲ್ಲಾಗಿದೆ~ ಎಂದರು.ಎಕ್ಸ್‌ಸೈಟಾನ್ ಕಂಪೆನಿಯ ನಿರ್ದೇಶಕಿ ಡಾ.ಪಿ.ಲತಾ ಲಕ್ಷ್ಮಣ್, ಎಫ್‌ಐಎಲ್ ಕ್ಯಾಪಿಟಲ್ ಅಡ್ವೈಸರ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ರಾಜ್ ಡುಗಾರ್ ಮೊದಲಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.