`ರೋಗ ಹರಡದಂತೆ ಮುಂಜಾಗ್ರತೆ ವಹಿಸಿ'

ಭಾನುವಾರ, ಜೂಲೈ 21, 2019
21 °C
ಮಲೇರಿಯಾ ಮಾಸಾಚರಣೆಯಲ್ಲಿ ಜಿಲ್ಲಾಧಿಕಾರಿ ಸಲಹೆ

`ರೋಗ ಹರಡದಂತೆ ಮುಂಜಾಗ್ರತೆ ವಹಿಸಿ'

Published:
Updated:

ಹಾವೇರಿ: `ನಮ್ಮ ಸುತ್ತಮುತ್ತಲಿರುವ ಗಲೀಜು ಪರಿಸರವೇ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದ್ದು, ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ರೋಗ ಬರದಂತೆ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು' ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಸ್‌ಜೆಎಂ ಪದವಿಪೂರ್ವ ಕಾಲೇಜು, ಜಿಲ್ಲಾ ವಾರ್ತಾ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾವೇರಿ ಇವರ ಸಹಯೋಗದಲ್ಲಿ ಬುಧವಾರ ನಗರದ ಎಸ್‌ಜೆಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ -2013 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲಿವರೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಲ್ಲಿವರೆಗೆ ನಾವು ಆರೋಗ್ಯವಂತರಾಗಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಉತ್ತಮ ಪರಿಸರದ ಕೊರತೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಮಲೇರಿಯಾ, ಡೆಂಗೆ, ಚಿಕನ್ ಗುನ್ಯಾದಂತಹ ರೋಗಗಳು ಜಿಲ್ಲೆಯಾದ್ಯಂತ ಉಲ್ಬಣವಾಗುತ್ತಿವೆ. ಪರಿಸರ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಿ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಆರೋಗ್ಯ ಇಲಾಖೆ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಪ್ರಸ್ತು ದಿನಗಳಲ್ಲಿ ಡೆಂಗೆ ಜ್ವರದ ಹಾವಳಿ ಹೆಚ್ಚಾಗಿದೆ. ಯಾವುದೇ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ಚಿಕಿತ್ಸೆ ಪಡೆದು ಯಾವ ಜ್ವರ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಏಕೆಂದರೆ, ಎಲ್ಲ ಜ್ವರವೂ ಡೆಂಗೆ ಅಥವಾ ಮಲೇರಿಯಾ ಜ್ವರಗಳಾಗಿರುವುದಿಲ್ಲ. ಯಾವುದೇ ಜ್ವರ ಬಂದರೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಸಿದರೆ, ಅವುಗಳಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ ಮಾತನಾಡಿ, ಉತ್ತಮ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಜಾಗೃತವಾಗಬೇಕು. ಈ ನಿಟ್ಟಿನಲ್ಲಿ ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವತ್ತ ಗಮನ ಹರಿಸಬೇಕು. ಎಲ್ಲವನ್ನು ಸರ್ಕಾರವೇ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳದೇ, ಪ್ರತಿಯೊಬ್ಬರ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಇರುವ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಘಟಕಗಳು ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಜನರಲ್ಲಿ ಸ್ವಚ್ಛತೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟು ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಣವಾಗಲಿದೆ. ಇದರಿಂದ  ಮಲೇರಿಯಾ. ಡೆಂಗೆದಂತಹ ಮಾರಣಾಂತಿಕ ಕಾಯಿಲೆಗಳಿಂದ ದೂರವಿರಲು ಸಾಧ್ಯ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಡಾ.ಬಸವರಾಜ ಸಜ್ಜನರ ಮಲೇರಿಯಾ ರೋಗದ ಹರಡುವಿಕೆ ಹಾಗೂ ನಿಯಂತ್ರಣ ಕುರಿತು ಉಪನ್ಯಾಸ ಮಾಡಿದರಲ್ಲದೇ, ಜಿಲ್ಲೆಯಲ್ಲಿ 112 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.ಜಿ.ಪಂ.ಉಪಾಧ್ಯಕ್ಷ ಗೀತಾ ಅಂಕಸಖಾನಿ, ತಹಶೀಲ್ದಾರ್ ಶಿವಲಿಂಗ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ ಅಂಗಡಿ, ತಾ.ಪಂ. ಅಧ್ಯಕ್ಷ ಬಸವರಾಜ ಕಳಸೂರ, ಎಸ್‌ಜೆಎಂ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಬೇವಿನಮರದ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಪಿ.ಮಾಯಾಚಾರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭಾಕಾರ ಕುಂದೂರು ಮತ್ತಿತರರು ಹಾಜರಿದ್ದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸುರೇಶ ಪೂಜಾರ ಪ್ರಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry