ಭಾನುವಾರ, ಮೇ 22, 2022
23 °C

ರೋಚಕತೆಯೂ ಪ್ರಶ್ನೆಗಳೂ (ಚಿತ್ರ: ಪರಮಾತ್ಮ)

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಭಾವ ಪ್ರಾಂಗಣದಲ್ಲಿ ಮಾತಿನ ಮಂಟಪ ಕಟ್ಟುವುದರ ಮೂಲಕವೇ ಛಾಪು ಮೂಡಿಸಿರುವ ನಿರ್ದೇಶಕ ಯೋಗರಾಜ ಭಟ್ ಹಾಗೂ ಸ್ಟಾರ್ ನಾಯಕ ಪುನೀತ್ ರಾಜ್‌ಕುಮಾರ್ ಒಟ್ಟಾಗಿ ಕೆಲಸ ಮಾಡಿರುವ ಮೊದಲ ಚಿತ್ರ `ಪರಮಾತ್ಮ~. ಅದರ ಮೇಲೆ ಸಹಜವಾಗಿಯೇ ನಿರೀಕ್ಷೆಯ ಭಾರವಿದೆ. ಪುನೀತ್ ಉಪಸ್ಥಿತಿಯನ್ನು ಅರಿತು ಭಟ್ಟರು ತಮ್ಮತನದಲ್ಲಿ ರಾಜಿ ಮಾಡಿಕೊಂಡು ಚಿತ್ರಕಥೆ ಹೆಣೆದಿದ್ದಾರೆ.ಮೊದಲರ್ಧದ ಕಥನಗಳದ್ದು ಲವಲವಿಕೆಯ ಹೆಣಿಗೆ. ಶಿಕ್ಷಣ ವ್ಯವಸ್ಥೆಯನ್ನು ಧಿಕ್ಕರಿಸುತ್ತಲೇ ಆಕಾಶಕ್ಕೆ ಏಣಿ ಹಾಕುವ ನಾಯಕನ ಮನಸ್ಥಿತಿ ಬಲು ಅಪರೂಪ. ಆಗೀಗ ಮನೆಗೆ ಬರುವ ನಾಯಕನನ್ನು ಮಂಚದ ಮೇಲೆ ಮಲಗಿಸಿ ಆತನ ಹೃದಯದ ಸ್ಥಿತಿಯ ವೈದ್ಯಕೀಯ ಪರೀಕ್ಷೆ ಮಾಡುವ ಅಪ್ಪನ ಪಾತ್ರದ ಕಲ್ಪನೆಯಂತೂ ಭಾವಜಗತ್ತಿನ `ಫ್ಯಾಂಟಸಿ~.

 

ಮಗನ ಮೇಲೆ ಅಪ್ಪನಿಗಿರುವ ಅವ್ಯಾಜ ಪ್ರೀತಿ, ಪರಮ ನಂಬಿಕೆಯೂ ರೋಚಕ. ಹೀಗೆ ಪಾತ್ರ ಪೋಷಣೆಯಲ್ಲಿ ರೋಚಕತೆಯ ಚುಚ್ಚುಮದ್ದು ಕೊಟ್ಟಿರುವ ಯೋಗರಾಜ ಭಟ್ಟರು ಪ್ರೀತಿಯನ್ನು ನೋಡುವ ಕ್ರಮದಲ್ಲೂ ತಮ್ಮ ಎಂದಿನ ಶೈಲಿಯನ್ನು ಮೀರಿದ್ದಾರೆ.ತ್ರಿಕೋನ ಪ್ರೇಮ, ಭಗ್ನಪ್ರೇಮದ ಚೌಕಟ್ಟಿನಲ್ಲೇ ಅವರ ಕಟ್ಟುವಿಕೆಯ ಧಾಟಿ ಭಿನ್ನವಾಗಿದೆ. ಇಲ್ಲಿ ಭಗ್ನಗೊಳ್ಳುವ ಪ್ರೇಮ ಹುಡುಗಿಯದ್ದು. ಒಬ್ಬಳ ಪ್ರೇಮ ನಿವೇದನೆಯ ಸಂಕಟವನ್ನು ಒಂದೆಡೆ ತೋರಿಸುತ್ತಲೇ ಇನ್ನೊಬ್ಬ ಮುಗ್ಧ, ಹಟಮಾರಿ ಹುಡುಗಿಯ ಬದುಕಿನಲ್ಲಿ ಪ್ರೇಮಾಂಕುರವಾಗುವ ಪರಿಯನ್ನು ಭಟ್ಟರು ಅರಳಿಸುತ್ತಾರೆ.ಬಹುತೇಕ ಚಿತ್ರಗಳಲ್ಲಿ ನಾಯಕಿ ಇರಬಹುದಾದ ಸ್ಥಾನದಲ್ಲಿ ಅವರು ನಾಯಕನನ್ನು ನಿಲ್ಲಿಸುತ್ತಾರೆ. ನಾಯಕಿಯ ಅಂತಃಕರಣವನ್ನು ನಾಯಕನಿಗೆ ಇಡುತ್ತಾರೆ. ಚೇಷ್ಟೆ, ಹಟಮಾರಿತನ, ಸಿಟ್ಟು, ಸೆಡವು ಎಲ್ಲವನ್ನೂ ಹೆಣ್ಣುಮಕ್ಕಳ ಪಾತ್ರಗಳಿಗೇ ತುಂಬಿ, ನಾಯಕನನ್ನು ಭಾವಾಧಿಪತಿಯಾಗಿಸುತ್ತಾರೆ.ಹರಿವ ನೀರಿನ ನಡುವೆ ಹುಟ್ಟೇ ಇಲ್ಲದ ತೆಪ್ಪದ ಮೇಲೆ ಕಂದೀಲಿನ ಬೆಳಕಲ್ಲಿ ನಾಯಕ ಕೊಟ್ಟ ಮುತ್ತಿನಿಂದ ನಾಯಕಿ ಮೌನದ ಮೂರ್ತಿಯಾಗುವ ದೃಶ್ಯ ಚಿತ್ರದ ಪೂರ್ವಾರ್ಧದ ಕೊನೆಯ ಕಂತು. ಅದುವರೆಗೆ ಸುಸೂತ್ರವಾದ ಪಯಣದಂತಿರುವ ಚಿತ್ರ ಆಮೇಲೆ ಹಲವು ರೂಪಕಗಳನ್ನು ಅನಾವರಣಗೊಳಿಸುತ್ತಾ, ಕಾವ್ಯದ ಮೈಕಟ್ಟು ಪಡೆಯುತ್ತಾ ಸಾಗುತ್ತದೆ.ಸಂಪ್ರದಾಯದ ಬೇರನ್ನು ಧಿಕ್ಕರಿಸುತ್ತಾ ಪರದೇಶಿ ಹೆಣ್ಣುಮಗಳ ಮೋಹಿಸುವ ಮಧ್ಯವಯಸ್ಕನ ಪಾತ್ರದ (ರಂಗಾಯಣ ರಘು ನಿರ್ವಹಿಸಿರುವ ಪಾತ್ರ) ಸೃಷ್ಟಿ ಇದಕ್ಕೊಂದು ಉದಾಹರಣೆ.ಅಸ್ತಂಗತಳಾದ ಬಾಳಸಂಗಾತಿಯ ಅಸ್ತಿತ್ವದಲ್ಲೇ ಬದುಕುವ ನಾಯಕನ ಮನಸ್ಥಿತಿಯೇ ಆತ `ಪರಮಾತ್ಮ~ ಎಂಬುದಕ್ಕೆ ಇಂಬುಗೊಟ್ಟೀತು ಎಂಬುದು ನಿರ್ದೇಶಕರ ಪರಿಕಲ್ಪನೆ.ಇದನ್ನು ಚಿತ್ರದ ಅಂತ್ಯದವರೆಗೆ ಗುಟ್ಟಾಗಿಡುವ ಸಂಕಲ್ಪದ ಕಟ್ಟುಪಾಡಿಗೆ ಚಿತ್ರದ ನಿರೂಪಣೆ ಒಳಪಟ್ಟಿದೆ. ಹಾಗಾಗಿ ಮೊದಲರ್ಧದ ಕಥಾನಕಗಳು ಕೊಡುವ ಕಚಗುಳಿಯು ಎರಡನೇ ಅರ್ಧದಲ್ಲಿ ಮುಂದುವರಿಯುವುದಿಲ್ಲ.ಬರಬರುತ್ತಾ ಚಿತ್ರಕ್ಕೆ ಕಾವ್ಯದ ಖಾಸಗಿತನ ಪ್ರಾಪ್ತಿ ಯಾಗುತ್ತಾ ಹೋಗುತ್ತದೆ. ವ್ಯಕ್ತಗೊಳ್ಳಬೇಕಾದ ಸಂಗತಿಗಳು ದಕ್ಕುವುದು ಕಷ್ಟವಾಗುತ್ತಾ, ಪ್ರಶ್ನೆಗಳು ಮೂಡುತ್ತವೆ. ಚಿತ್ರದ ಭಿನ್ನತೆ ಹಾಗೂ ಮಿತಿ ಎರಡಕ್ಕೂ ಕೊನೆಕೊನೆಯ ನಿಧಾನಗತಿಯೇ ಕಾರಣ.ಹಿಮಾಲಯ ಏರಿ, ಕುಂಗ್‌ಫೂ ಕಲಿತು, ಷೇರುಪೇಟೆಯಲ್ಲಿ ಹಣ ಬಾಚಿ, ಬೆಟಿಂಗ್ ಬೊಂಬೆಯಾಗಿ ಹೊಡೆದಾಡಿ, ಬೇಕೆಂದೇ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪದೇಪದೇ ಫೇಲಾಗುವ ನಾಯಕನ ಪಾತ್ರದ ಮೈಕಟ್ಟು ತುಂಬಾ ಸಂಕೀರ್ಣ.

 

ಕೊನೆಗೆ ಆ ಪಾತ್ರಕ್ಕೆ ಆಗುವುದು ಬದುಕಿನ ದರ್ಶನ. ಆತ ತಮಾಷೆಗೆ `ತಿಥಿ ವಡೆ~ ಎಂಬ ಅಡ್ಡಹೆಸರನ್ನು ಇಡುವ ನಾಯಕಿಯ ಬದುಕು ಅದಕ್ಕೆ ಅನ್ವರ್ಥದಂತೆಯೇ ಆಗಿಬಿಡುವುದು ಭಟ್ಟರ ವ್ಯಂಗ್ಯದ ಬದಲಾದ ಶೈಲಿಗೆ ಉದಾಹರಣೆ ಯಂತೆ ಕಾಣುತ್ತದೆ.ಹಾಗೆ ನೋಡಿದರೆ ಭಟ್ಟರ ಹರಿತವಾದ ವ್ಯಂಗ್ಯ ಕಾಣುವುದು ಈ ಚಿತ್ರಗೀತೆಗಳ ಸಾಲುಗಳ್ಲ್ಲಲಿ. ಉಳಿದಂತೆ ಸಂಭಾಷಣೆ ಮಜಾ ಕೊಟ್ಟರೆ ಸಾಕು ಎಂಬುದು ಅವರ ಧೋರಣೆ. ವಸ್ತುಸೃಷ್ಟಿ ಸಂಕೀರ್ಣವಾಗಿ ರುವುದರಿಂದ ಚಿತ್ರದ ಅಂತ್ಯ ಪ್ರಶ್ನೆಗಳನ್ನು ಉಳಿಸುತ್ತದೆ. ಕಾಡುವ ಗುಣವನ್ನು ದಮನಗೊಳಿಸುವುದು ಕೂಡ ಈ ಪ್ರಶ್ನೆಗಳೇ.ಅಭಿನಯದಲ್ಲಿ ಪುನೀತ್ ರಾಜ್‌ಕುಮಾರ್ ತನ್ಮಯತೆಯನ್ನು ಕಾಣಬಹುದು. ಭಟ್ಟರು ಬರೆದ ಮಾತುಗಳು ತಮ್ಮ ಜಾಯಮಾನಕ್ಕೆ ಹೊರತಾಗಿದ್ದರೂ ಪುನೀತ್ ಅವನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.ಸಂಕೀರ್ಣ ಪಾತ್ರದಲ್ಲೂ ನಾಯಕಿ ದೀಪಾ ಸನ್ನಿಧಿ ಭರವಸೆ ಮೂಡಿಸಿದ್ದಾರೆ. ಐಂದ್ರಿತಾ ರೇ ಕೂಡ ತುಸು ಸಪ್ಪೆ ಎನ್ನಿಸುವಷ್ಟು ಢಾಳಾಗಿ ದೀಪಾ ಅಭಿನಯ ಮೂಡಿಬಂದಿದೆ. ರಂಗಾಯಣ ರಘು ಪಾತ್ರ, ಮಾತುಗಳಲ್ಲಿ ನಾಟಕೀಯ ಗುಣವಿದೆ. ಅನಂತನಾಗ್, ಅವಿನಾಶ್ ಎಂದಿನಂತೆ ತಾವೇ ಪಾತ್ರಗಳಾಗಿದ್ದಾರೆ.ಸಂಗೀತ ನಿರ್ದೇಶಕ ಹರಿಕೃಷ್ಣ ಹಾಡುಗಳಲ್ಲಿನ `ಜಾನಪದೀಯ ಫ್ಯೂಷನ್~ ಅಪರೂಪದ್ದು. ಸಂತೋಷ್ ರೈ ಪಾತಾಜೆ ಎಲ್ಲವನ್ನೂ ಸುಂದರವಾಗಿ ಕಾಣಿಸುವ ಉಮೇದನ್ನು ಚಿತ್ರದ ಇಂಚಿಂಚಲ್ಲೂ ಮೂಡಿಸಿದ್ದಾರೆ.ಭಾವಿಸಿಕೊಳ್ಳುವ ಎಲ್ಲಾ ದೃಶ್ಯಗಳ ದರ್ಶನ ಕಷ್ಟಸಾಧ್ಯ ಎಂಬುದಕ್ಕೆ ದಟ್ಟವಾದ ಕುರುಹುಗಳನ್ನು ಉಳಿಸುವ `ಪರಮಾತ್ಮ~ ಭಟ್ಟರ ಇದುವರೆಗಿನ ಸಂಕೀರ್ಣ ಹಾಗೂ ಸಮಸ್ಯಾತ್ಮಕ ಚಿತ್ರವಂತೂ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.