ಮಂಗಳವಾರ, ಏಪ್ರಿಲ್ 13, 2021
29 °C

ರೋಚಕ ಮೂಡಿಸಿದ ಗೌಳಿಗರ ಎಮ್ಮೆ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಚಕ ಮೂಡಿಸಿದ ಗೌಳಿಗರ ಎಮ್ಮೆ ಓಟ

ಹಾನಗಲ್: ಮೈದುಂಬಿಕೊಂಡ ಎಮ್ಮೆಗಳ ಮೈನವಿರೆಳಿಸುವ ಗುದ್ದುವ ಸ್ಪರ್ಧೆ ಹಾನಗಲ್ಲಿನಲ್ಲಿ ಬುಧವಾರ ನಡೆದು ದೀಪಾವಳಿ ಹಬ್ಬದ ಸಂಭ್ರಮವನ್ನು ಕೃಷಿಕ ಸಮುದಾಯ ವಿಶೇಷವಾಗಿ ಆಚರಿಸಿತು.ದೀಪಾವಳಿ ಹಬ್ಬದ ಅಂಗವಾಗಿ ಇಂದು ಇಲ್ಲಿನ ಕಮಾಟಗೇರಿ, ಕುರುಬಗೇರಿ ಹಾಗೂ ಸರ್ವಿಕೇರಿ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಹೋರಿ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಯಿತು. ಹೋರಿ ಬೆದರಿಸುವ ಸ್ಪರ್ಧೆ ಈ ಭಾಗದಲ್ಲಿ ಸಾಮಾನ್ಯವಾಗಿದ್ದು, ಹೋರಿಗಳಂತೆಯೇ ಎಮ್ಮೆಗಳನ್ನು ಸಿಂಗಾರಗೊಳಿಸಿ ಅವುಗಳನ್ನು ಹುರಿದುಂಬಿಸಿ ಸ್ಪರ್ಧೆಗೆ ಭಾಗವಹಿಸುವ ಆಟ ಇತ್ತೀಚೆಗೆ ಹಾನಗಲ್ಲಿನ ಪ್ರಮುಖ ಆಕರ್ಷಣೆಯಾಗುತ್ತಿದೆ.ಹಾಲು ಮಾರುವ ಗೌಳಿಗಳ ಪಾಲಿನ ಆರಾಧ್ಯವಾದ ಎಮ್ಮೆಗಳನ್ನು ವರ್ಷಕ್ಕೊಮ್ಮೆ ಸ್ಪರ್ಧೆಗೆ ಅಣಿಯಾಗಿಸುವುದು ಇಲ್ಲಿನ ಗೌಳಿ ಸಮುದಾಯ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ದೀಪಾವಳಿಯ ಪಾಡ್ಯದ ದಿನದಂದು ಮನೆಗಳಲ್ಲಿನ ಎಮ್ಮೆಗಳನ್ನು ಸ್ವಚ್ಛವಾಗಿ ತೊಳೆದು ಎಣ್ಣೆಯಿಂದ ತಿಕ್ಕಿ ಅವುಗಳ ಕೋಡುಗಳಿಗೆ ಸಿಂಗಾರ ಮಾಡಿ ಮೈಮೇಲೆ ಜೂಲಾ ಹೊದಿಸಿ ಬಲೂನಗಳಿಂದ ರಂಗು-ರಂಗಾಗಿಸುತ್ತಾರೆ. ಮಧ್ಯಾಹ್ನದ ವೇಳೆಗೆ ಸ್ಪರ್ಧಾ ಕಣಕ್ಕೆ ಬರುವ ಎಮ್ಮೆಗಳ ಶೈಲಿ ಕಂಡ ಜನರು ಹುಚ್ಚೆದ್ದು ಕೆಕೆ ಹೊಡೆಯುತ್ತಾರೆ.ಹುಲ್ಲು ಮೆಯಲು ಕಾಡಿಗೆ ಹೋಗುವ ಎಮ್ಮೆಗಳು ಕ್ರೂರ ಪ್ರಾಣಿಗಳಿಂದ ರಕ್ಷಣೆ ಪಡೆಯಲೆಂಬ ಉದ್ದೇಶದ ಹಿನ್ನೆಲೆಯ ಈ ಸ್ಪರ್ಧೆಯು ಹೋರಿ ಬೆದರಿಸುವ ಸ್ಪರ್ಧೆಯಷ್ಟು ಅಪಾಯಕಾರಿ ಅಲ್ಲ. ಗೂಟಕ್ಕೆ ಆನಿಸ ಲಾಗಿದ್ದ ಹುಲಿ ಅಥವಾ ಚಿರತೆ ಆಕೃತಿ ಹೋಲುವ ಚರ್ಮಕ್ಕೆ ರೋಶ ಉಕ್ಕೇರಿ ಗುದ್ದುವ ಎಮ್ಮೆಗಳ ಸ್ಪರ್ಧೆ ಅತ್ಯಂತ ರೋಚಕತೆ ಪಡೆಯುತ್ತದಲ್ಲದೆ, ಮಹಿಳೆ ಯರು ಮತ್ತು ಮಕ್ಕಳು ಅಪಾಯಕ್ಕೆ ಅವಕಾಶವಿಲ್ಲದೆ ವೀಕ್ಷಿಸಬಹುದು.ಎಮ್ಮೆ ಸ್ಪರ್ಧೆ: ಕುರುಬಗೇರಿಯ ಹೋಳಿಮಟ್ಟಿಯಲ್ಲಿ ಗೌಳಿ ಸಮಾಜದ ಜನರು ಎಮ್ಮೆಗಳ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ಕೇವಲ ಎಮ್ಮೆಗಳು ಮಾತ್ರ ಭಾಗವಹಿಸುತ್ತವೆ. ಹುಲಿಯ ಚರ್ಮವನ್ನು ಬಿದಿರುಗಳದಿಂದ ಮಾಡಿದ ಸ್ಟ್ಯಾಂಡ್‌ಗೆ ಸಿಕ್ಕಿಸಿರುತ್ತಾರೆ. ದೂರದಿಂದ ಎಮ್ಮೆಗಳನ್ನು ಓಡಿಸಿಕೊಂಡು ಬಂದು ಈ ಚರ್ಮವನ್ನು ತೋರಿಸಲಾಗುತ್ತದೆ. ಎಮ್ಮೆ ಹುಲಿಯೆಂದೇ ಭ್ರಮಿಸಿ ರೊಚ್ಚಿಗೆದ್ದು ಈ ಚರ್ಮವನ್ನು ಕಿತ್ತೆಸೆಯುತ್ತವೆ. ಆಗ ಕೂಡಿದ ಜನ ಕೇಕೆ ಹಾಕಿ ಖುಶಿಪಡುತ್ತಾರೆ. ಇಂದು ನಡೆದ ಎಮ್ಮೆ ಸ್ಪರ್ಧೆಯಲ್ಲಿ 15 ಎಮ್ಮೆಗಳು ಪಾಲ್ಗೊಂಡವು. ಛತ್ರಪತಿ ಶಿವಾಜಿ ಯುವಕ ಮಂಡಳ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸುಮಾರು 30 ಎಮ್ಮೆಗಳು ಭಾಗವಹಿಸಿ ರೋಚಕತೆ ಮೂಡಿಸಿದವು.ವಿಜೇತ ಎಮ್ಮೆಗಳು: ಗೌಳಿಗಲ್ಲಿಯಲ್ಲಿ ಶೇಖಪ್ಪ ಅರಳಿಮರದ ಅವರ ಎಮ್ಮೆ ಪ್ರಥಮ, ರಾಜು ಗುಂಡೆಗೌಳಿ ದ್ವಿತೀಯ, ಕರದಪ್ಪ ತಡಸ ತೃತೀಯ ಬಹುಮಾನ ಪಡೆದವು. ಶಿವಾಜಿ ಮಂಡಳದ ಸ್ಪರ್ಧೆಯಲ್ಲಿ ಇವೇ ಎಮ್ಮೆಗಳು ಮೊದಲೆರಡು ಸ್ಥಾನ ಪಡೆದರೆ, ತೃತೀಯ ಸ್ಥಾನ ಶಾಂತಣ್ಣ ಗೌಳಿ ಅವರ ಎಮ್ಮೆ ಪಾಲಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.