ರೋಟರಿಯ ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನೆ

7

ರೋಟರಿಯ ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನೆ

Published:
Updated:

ಬೆಂಗಳೂರು:  `ರೋಟರಿ ಆರಂಭಿಸಿರುವ ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನೆಗಾಗಿ ಸಂಸದರ ನಿಧಿಯಿಂದ 25 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು~ ಎಂದು ಸಂಸದ ಅನಂತ ಕುಮಾರ್ ಹೇಳಿದರು.ನಗರದಲ್ಲಿ ಶನಿವಾರ ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್  3190 ಆಯೋಜಿಸಿದ್ದ 35 ನೇ ರೋಟರಿ ಸಮಾವೇಶ `ವಿಶ್ವ ಕಲ್ಯಾಣೋತ್ಸವ~ ದಲ್ಲಿ ಪಾಲ್ಗೊಂಡು ಮಾತನಾಡಿ, `ಸಮಾಜದಲ್ಲಿನ ಬಡವರನ್ನು ಗುರುತಿಸಿ ಅವರ ನೆರವಿಗೆ ಬರುವ ಹಾಗೂ ಬಡ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಉತ್ತಮವಾದುದು.ರೋಟರಿ ಸಂಸ್ಥೆ 25 ಲಕ್ಷ ರೂ. ಹಾಗೂ ಸಂಸದರ ನಿಧಿಯಿಂದ 25 ಲಕ್ಷ ರೂ. ಜೊತೆಗೆ ಸೇರಿಸಿ ಒಟ್ಟು 50 ಲಕ್ಷ ರೂ.ಗಳ ಸಹಭಾಗಿತ್ವದ ಮಕ್ಕಳ ಅಭಿವೃದ್ಧಿ ಯೋಜನೆಯು ಬಡ ಮಕ್ಕಳ ನೆರವಿಗೆ ಬರಲಿದೆ~ ಎಂದು ಅವರು ತಿಳಿಸಿದರು.`ಆಧುನಿಕ ಜಗತ್ತಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ವಿಘಟನೆಗಳು ಹೆಚ್ಚಾಗುತ್ತಿವೆ. ಬಡತನ, ಅಸಮಾನತೆ, ಮಾಲಿನ್ಯ, ಭಯೋತ್ಪಾದನೆ ಹಾಗೂ ಭ್ರಷ್ಟಾಚಾರಗಳು ಪ್ರಸ್ತುತ ಜಗತ್ತಿನ ಬಹುದೊಡ್ಡ ಸವಾಲುಗಳಾಗಿವೆ. ಭಾರತದ ಜನಸಂಖ್ಯೆಯ ಶೇಕಡ 15 ರಷ್ಟು ಜನರು ಇನ್ನೂ ಬಡತನದ ರೇಖೆಯ ಕೆಳಗಿದ್ದಾರೆ.

 

ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಬಡತನ ಇನ್ನೂ ಉಳಿದುಕೊಂಡಿದೆ. ಭಾಷೆ, ಬಣ್ಣ ಹಾಗೂ ಪ್ರದೇಶದ ಕಾರಣಗಳಿಂದ ಅಸಮಾನತೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು  ಅಮೆರಿಕ ನಡೆಸಿಕೊಂಡ ರೀತಿಯೇ ಇದಕ್ಕೆ ಸ್ಪಷ್ಟ ಉದಾಹರಣೆ~ ಎಂದರು.`ಜಾಗತಿಕ ಮಟ್ಟದಲ್ಲಿ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದುವರೆದ ದೇಶಗಳು ಇಂಗಾಲ ಪ್ರಮಾಣ ತಗ್ಗಿಸುವಿಕೆಯ ಬಗ್ಗೆ ಯೋಚಿಸುತ್ತಿಲ್ಲ. ಬದಲಾಗಿ ಅಭಿವೃದ್ಧಿ ಶೀಲ ರಾಷ್ಟ್ರಗಳ ಮಾಲಿನ್ಯದ ಮೇಲೆ ಕಡಿವಾಣ ಹಾಕಲು ಹೊರಟಿವೆ. ಜಾಗತಿಕ ಮಾಲಿನ್ಯ ನಿಯಂತ್ರಣ ಇಂದು ಅನಿವಾರ್ಯವಾಗಿದೆ. ಭಯೋತ್ಪಾದನೆ ಹಾಗೂ ಭ್ರಷ್ಟಾಚಾರಗಳು ಜಗತ್ತು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತೆ ಮಾಡಿವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ~ ಎಂದರು.2010ನೇ ಸಾಲಿನ ಭುವನ ಸುಂದರಿ ನಿಕೋಲ್ ಫೆರಿಯಾ ಮಾತನಾಡಿ, `ಪ್ಲಾಸ್ಟಿಕ್ ಹಾಗೂ ಮಾಲಿನ್ಯ ಮುಕ್ತ ಜಗತ್ತಿನ ನಿರ್ಮಾಣ ನಮ್ಮ ಗುರಿಯಾಗಬೇಕು.  ಬೆಂಗಳೂರಿನಲ್ಲಿಯೇ ದಿನದಿಂದ ದಿನಕ್ಕೆ ಕೆರೆಗಳು ಕಣ್ಮರೆಯಾಗುತ್ತಿವೆ. 250 ಕ್ಕೂ ಹೆಚ್ಚು ಕೆರೆಗಳಿದ್ದ ನಗರದಲ್ಲಿ ಇಂದು ಸುಮಾರು 80 ಕೆರೆಗಳು ಉಳಿದುಕೊಂಡಿವೆ. ಇನ್ನು ಮುಂದೆ ಅವುಗಳೂ ಉಳಿಯುವುದು ಕಷ್ಟ. ಪರಿಸರ ರಕ್ಷಣೆಗಾಗಿ ನಾಗರಿಕರೆಲ್ಲರೂ ಒಂದಾಗಬೇಕಿದೆ~ ಎಂದರು.ಅಮೆರಿಕ ದೇಶದ ಅಲಬಾಮದ ರೋಟರಿ ಇಂಟರ್‌ನ್ಯಾಷನಲ್‌ನ ಮಾಜಿ ನಿರ್ದೇಶಕ ಮಾರ್ಕ್ ಮಲೊನಿ, `ಜಗತ್ತಿನಾದ್ಯಂತ ರೋಟರಿ ಸಂಸ್ಥೆ ರೂಪಿಸಿದ ಪಲ್ಸ್ ಪೋಲಿಯೋ ಅಭಿಯಾನದಿಂದಾಗಿ ಪೋಲಿಯೋ ನಿಯಂತ್ರಣ ಸಾಧ್ಯವಾಗಿದೆ. ಪೋಲಿಯೋ ಮುಕ್ತ ಜಗತ್ತಿನ ನಿರ್ಮಾಣ ಸಂಸ್ಥೆಯ ಧ್ಯೇಯವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ~ ಎಂದರು.ಸಂಸ್ಥೆಯ ಇರ್ಫಾನ್ ರಜಾಕ್ ಅವರಿಗೆ ವಿಶೇಷ ಸೇವಾ ಸಾಧನೆಯ ಪ್ರಶಸ್ತಿ ನೀಡಲಾಯಿತು. ರೋಟರಿ ಇಂಟರ್‌ನ್ಯಾಷನಲ್ 3190 ಡಿಸ್ಟ್ರಿಕ್ಟ್ ನ ಗವರ್ನರ್ ಡಾ.ಎಸ್.ನಾಗೇಂದ್ರ, ಸಂಸ್ಥೆಯ ಡಿ.ಎಲ್.ವೆಂಕಟೇಶ್ ಶರ್ಮ, ಡಾ. ಸಮೀರ್ ಹರಿಯಾನಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry