ಸೋಮವಾರ, ನವೆಂಬರ್ 18, 2019
22 °C

`ರೋಟರಿ ಕ್ಲಬ್ ಮಾದರಿ'

Published:
Updated:

ಬೆಂಗಳೂರು: `ರೋಟರಿ ಕ್ಲಬ್ ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ' ಎಂದು ಹಿರಿಯ ನಟ ಶ್ರೀನಾಥ್ ಶ್ಲಾಘಿಸಿದರು.ರೋಟರಿ ಬೆಂಗಳೂರು ಡೌನ್ ಟೌನ್ ಕ್ಲಬ್ ನಗರದ ಪಿ.ಡಿ ಹಿಂದುಜಾ ಸಿಂಧಿ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ  ಸಮಾರಂಭದಲ್ಲಿ `ನವೀಕೃತ ಡಯಾಲಿಸಿಸ್' ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. `ಆರೋಗ್ಯ ಮತ್ತು ಶೈಕ್ಷಣಿಕ ಸೇವೆ ನೀಡುವತ್ತ ರೋಟರಿ ಕ್ಲಬ್ ಹೆಚ್ಚಿನ ಮಹತ್ವ ನೀಡುತ್ತಿದ್ದು, ಮಾನವೀಯತೆಗೆ ಹೊಸ ವ್ಯಾಖ್ಯಾನ ಒದಗಿಸುವಲ್ಲಿ ತನ್ನದೇ ಹಾದಿ ತುಳಿದಿದೆ. ರೋಟರಿ ಸಮಾಜಸೇವಾ ಕಾರ್ಯದೊಂದಿಗೆ ನನ್ನ ಸಂಸ್ಥೆ ದಿಶಾ ಕಲಾ ಪ್ರತಿಷ್ಠಾನವೂ ಕೈಜೋಡಿಸಲಿದೆ' ಎಂದರು.ಕ್ಲಬ್‌ನ ಅಧ್ಯಕ್ಷ ಬಿ.ಎಸ್.ಶ್ರೀರಾಮ್, `ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ರೋಟರಿ ಸಂಸ್ಥೆಯು `ಡಯಾಲಿಸಿಸ್ ಕೇಂದ್ರ'ಗಳನ್ನು ಆರಂಭಿಸಿದೆ. ಈ ಬಾರಿಪಿ.ಡಿ.ಹಿಂದೂಜಾ ಆಸ್ಪತ್ರೆಗೆ  ಹೆಚ್ಚುವರಿ ಐದು ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗಿದೆ. ಇತರೆ ಕೇಂದ್ರಗಳಲ್ಲಿ ಡಯಾಲಿಸಿಸ್‌ಗೆ ರೂ 1,500 ವೆಚ್ಚ ತಗುಲಿದರೆ, ರೋಟರಿ ನಡೆಸುವ ಕೇಂದ್ರಗಳಲ್ಲಿ  ರೂ800 ಮಾತ್ರ' ಎಂದು ಮಾಹಿತಿ ನೀಡಿದರು. ಕಾರ್ಯದರ್ಶಿ ಇ.ವಿವೇಕಾನಂದ, ಶ್ರೀಕಾಂತ್ ಛತ್ರಪತಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)