ರೋಟರಿ ಶಿಕ್ಷಣ ಸಂಸ್ಥೆ `ಸುವರ್ಣ ಮಹೋತ್ಸವ'

7
2 ಕೋಟಿ ವೆಚ್ಚದಲ್ಲಿ ಶೀಘ್ರ ಕನ್ನಡ ಶಾಲೆ: 22ರಿಂದ ಸಂಭ್ರಮ

ರೋಟರಿ ಶಿಕ್ಷಣ ಸಂಸ್ಥೆ `ಸುವರ್ಣ ಮಹೋತ್ಸವ'

Published:
Updated:

 


ಹುಬ್ಬಳ್ಳಿ: `ದೇಶಪಾಂಡೆ ನಗರದಲ್ಲಿರುವ ನಿತೀಶ ಲಹರಿ ಶಿಕ್ಷಣ (ಎನ್.ಎಲ್.ಇ) ಸೊಸೈಟಿಯ ರೋಟರಿ ಶಿಕ್ಷಣ ಸಂಸ್ಥೆಗಳಿಗೆ ಇದೀಗ ಸುವರ್ಣ ಮಹೋತ್ಸವ (1962-2012) ಸಂಭ್ರಮ. 

 

ಕಳೆದ ಐದು ದಶಕಗಳಲ್ಲಿ ಗುಣಮಟ್ಟ ಮತ್ತು ಮೌಲ್ಯಾಧರಿತ ಶಿಕ್ಷಣ ನೀಡುವಲ್ಲಿ ತೋರಿದ ಹೆಜ್ಜೆ ಗುರುತುಗಳನ್ನು ನೆನಪಿಸುವ ಕಾರ್ಯಕ್ರಮ ಇದೇ 22 ಮತ್ತು 23ರಂದು ನಡೆಯಲಿದೆ' ಎಂದು ಸೊಸೈಟಿ ಗೌರವ ಕಾರ್ಯದರ್ಶಿ ರಾಜಾ ದೇಸಾಯಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, `ಸುವರ್ಣ ಮಹೋತ್ಸವ ನೆನಪಿಗಾಗಿ ಆದರ್ಶ ನಗರದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಶಾಲೆಗೆ ನೂತನ ಕಟ್ಟಡ ನಿರ್ಮಿಸಲಾಗುವುದು' ಎಂದರು.

 

`ಆದರ್ಶ ನಗರದಲ್ಲಿರುವ ಡಾ.ಜಿ.ವಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೈದಾನದಲ್ಲಿ  22ರಂದು ಸಂಜೆ 5.30ಕ್ಕೆ ಮೇಯರ್ ಪಾಂಡುರಂಗ ಪಾಟೀಲ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 

 

ಸೊಸೈಟಿ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು, ನಿವೃತ್ತ ಮುಖ್ಯ ಶಿಕ್ಷಕ- ಶಿಕ್ಷಕಿಯರನ್ನು ಅಂದು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯ ಕ್ರಮದ ಭಾಗವಾಗಿ ಯಶವಂತ ಸರದೇಶಪಾಂಡೆ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ' ಎಂದರು.

 

`23ರಂದು ಸಂಜೆ 5.30ಕ್ಕೆ ರೋಟರಿ ಶಿಕ್ಷಣ ಸಂಸ್ಥೆಗಳ `50 ವರ್ಷಗಳ ಗುಣಮಟ್ಟದ ಶಿಕ್ಷಣದ ಸಾಧನೆಯ ಆಚರಣೆ' ಕಾರ್ಯಕ್ರಮ ಜರುಗಲಿದೆ. ಕೆ.ಎಲ್.ಇ ಸೊಸೈಟಿ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಧಾನ ಪರಿಷತ್  ಸದಸ್ಯರಾದ ವೀರಣ್ಣ ಮತ್ತಿಗಟ್ಟಿ ಮತ್ತು ಬಸವರಾಜ ಹೊರಟ್ಟಿ ಭಾಗವಹಿಸಲಿದ್ದಾರೆ. ಶಿಕ್ಷಣ ಸಂಸ್ಥೆ ಕಳೆದ 50 ವರ್ಷಗಳ ಯಶೋಗಾಥೆಯನ್ನು ಬಿಂಬಿಸುವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು' ಎಂದರು.

 

`50 ವರ್ಷಗಳ ಹಿಂದೆ ಹುಬ್ಬಳ್ಳಿ ರೋಟರಿ ಕ್ಲಬ್ ಸದಸ್ಯರ ಬಯಕೆಯಂತೆ ನಿತೀಶ ಲಹರಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲಾಯಿತು. ಆ ದಿನಗಳಲ್ಲಿ ಒಂದೆರಡು ಧಾರ್ಮಿಕ ಸಂಸ್ಥೆಗಳು ನಡೆಸುತ್ತಿದ್ದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಪ್ರವೇಶ ದೊರೆಯುವುದು ಅಸಾಧ್ಯವಾದಾಗ ದೇಶಪಾಂಡೆ ನಗರದ ಸಣ್ಣ ನಿವೇಶನದಲ್ಲಿ ಐದು ಕೊಠಡಿಯೊಂದಿಗೆ 1962ರಲ್ಲಿ ರೋಟರಿ ಸಂಸ್ಥೆ ವತಿಯಿಂದ ಹೆಣ್ಣುಮಕ್ಕಳ ವಿದ್ಯಾಲಯ ಆರಂಭಿಸಲಾಗಿತ್ತು. 1973ರಲ್ಲಿ ಡಾ.ಜಿ.ವಿ. ಜೋಶಿ ಪ್ರೌಢ ಶಾಲೆ, 1982ರಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆ, 1995ರಲ್ಲಿ ಕನ್ನಡ ಮಾಧ್ಯಮ ಶಾಲೆ, ಗೋಕುಲ ರಸ್ತೆಯಲ್ಲಿ ಮತ್ತೊಂದು ಕನ್ನಡ ಮಾಧ್ಯಮ ಶಾಲೆ, ಪ್ರಿಯದರ್ಶಿನಿ ನಗರದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲಾಯಿತು' ಎಂದರು.

 

`ನಗರದಲ್ಲಿ ಮೊದಲ ಜಾತ್ಯತೀತ ಶಿಕ್ಷಣ ಸಂಸ್ಥೆ ಆರಂಭಿಸಿದ ಖ್ಯಾತಿ ಎನ್.ಎಲ್.ಇ ಸೊಸೈಟಿಗೆ ಸಲ್ಲುತ್ತದೆ. ದಿವಂಗತ ಎ.ಎ. ಮನಿಯಾರ್, ಡಾ.ಜಿ.ವಿ.ಜೋಶಿ, ಆರ್.ಎನ್.ಶೆಟ್ಟಿ, ಬಸವರಾಜ ಬೊಮ್ಮಾಯಿ, ಡಾ.ಆರ್.ಬಿ.ಪಾಟೀಲ ಮತ್ತಿತರರ ಬೆಂಬಲದಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು'ಎಂದರು.

 

`ರೋಟರಿ ಶಿಕ್ಷಣ ಸಂಸ್ಥೆಗಳ 50 ವರ್ಷಗಳ ಸಾಧನೆ ಮತ್ತು ಉತ್ತಮ ಕಾರ್ಯ ವೈಖರಿಯಿಂದ ಎನ್.ಎಲ್.ಇ ಸಂಸ್ಥೆಗೆ ತನ್ನದೇ ಆದ ವಿಶಿಷ್ಟ ಛಾಪು ಮೂಡಿದೆ. ಎಂಟು ಶಿಕ್ಷಣ ಸಂಸ್ಥೆಗಳು ಸದ್ಯ ಎನ್.ಎಲ್.ಇ ಸಂಸ್ಥೆಯಡಿ ಕಾರ್ಯ ಪ್ರವೃತ್ತವಾಗಿದ್ದು 4,116 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕ ಮತ್ತು ಶಿಕ್ಷಕೇತರ 237 ಸಿಬ್ಬಂದಿ ಸಂಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ಶೇ 98ರಿಂದ 100 ಫಲಿತಾಂಶ ಬರುತ್ತಿದೆ' ಎಂದು ಸಂತಸ ಹಂಚಿಕೊಂಡರು.

 

ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ಡಾ. ಸುಭಾಷ್ ಜೋಶಿ, ಜೊತೆ ಕಾರ್ಯದರ್ಶಿ ಕಿಶೋರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry