ಭಾನುವಾರ, ಮೇ 29, 2022
21 °C

ರೋಡ್ ರೋಮಿಯೋಗಳ ಹಾವಳಿ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾನಗರದಲ್ಲಿ ಹುಡುಗಿಯರನ್ನು ಚುಡಾಯಿಸುವ, ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ಹಳೆಯ ಚಾಳಿ ಮತ್ತೆ ತಲೆ ಎತ್ತಿದೆ. ಸುಮಾರು ದಶಕಗಳ ಹಿಂದೆ, ಇಲ್ಲಿ ಯುವತಿಯರನ್ನು ಚುಡಾಯಿಸುವುದು ಸಾಮಾನ್ಯ ಎನ್ನುವಂತಿತ್ತು. ಆಗ, ಅಲ್ಲೊಂದು ಇಲ್ಲೊಂದು ಚುಡಾಯಿಸುವುದಕ್ಕೆ ಸಂಬಂಧಿಸಿದ ಪ್ರಕರಣಗಳು ಅಧಿಕೃತವಾಗಿ ವರದಿಯಾಗುತ್ತಿದ್ದವು.`ಹುಬ್ಬಳ್ಳಿಯಲ್ಲಿ ಹುಡುಗೀರನ್ನ ಕಾಡೋದು ಭಾಳರೀ....~ ಎನ್ನುವುದು ಆಗಿನ ದಿನಗಳಲ್ಲಿ ಸಾಮಾನ್ಯ ಮಾತೇ ಆಗಿ ಹೋಗಿತ್ತು. ವರ್ಷಗಳು ಉರುಳಿ ಬದಲಾವಣೆಯ ಗಾಳಿ ಎಲ್ಲೆಡೆ ಬೀಸಲಾರಂಭಿಸಿದ ಮೇಲೆ ಈ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿತ್ತು.ಆದರೆ... `ಸರ್, ಬಹಳ ಕಾಟಾ ಕೊಡ್ತಾ ಇದ್ದಾರೆ. ವಿದ್ಯಾನಗರದ ಮುಖ್ಯರಸ್ತೆ, ಈ ರಸ್ತೆಗೆ ಸಮಾಂತರವಾಗಿ ಸಾಗುವ ರಸ್ತೆಗಳಲ್ಲಿ ಹೆಣ್ಣುಮಕ್ಕಳು ಓಡಾಡುವುದು ಕಷ್ಟವಾಗಿದೆ. ಇದಕ್ಕೆ ಏನು ಮಾಡೋದು...~

ಯುವತಿಯೊಬ್ಬಳು ಮೇಲಿನಂತೆ ಅಸಹಾಯಕತೆಯಿಂದ ಹೇಳಿದ್ದರಲ್ಲಿ ಸ್ವಲ್ಪ ಮಟ್ಟಿನ ಸತ್ಯಾಂಶ ಅಡಗಿದೆ ಎಂಬುದನ್ನು ಪೊಲೀಸ್ ಮೂಲಗಳೂ ಅಲ್ಲಗಳೆದಿಲ್ಲ.ಯುವತಿಯರನ್ನು ಕಾಡುವುದರ (ಈವ್ ಟೀಸಿಂಗ್) ಈಗಿನ ಪರಿ ಭಾಷೆ ಮತ್ತು ಕ್ರಮ ಬೇರೆಯೇ ಆಗಿದೆ ಎಂಬುದು ಯುವ ಸಮು ದಾಯದ ಅನಿಸಿಕೆ. ಮೊದಲಿನಂತೆ ಈಗ ಕಾಲೇಜು ಕ್ಯಾಂಪಸ್‌ಗಳಲ್ಲಿ `ಈವ್ ಟೀಸಿಂಗ್~ ಕಂಡು ಬರುವುದಿಲ್ಲ. ಎಲ್ಲೋ ಅಲ್ಲಲ್ಲಿ ಕೆಲವು ಕಾಲೇಜುಗಳಲ್ಲಿ ಇದ್ದರೂ ತೀರ ವಿರಳ ಎನ್ನ ಬಹುದು. ಇದನ್ನು ಯುವತಿಯರೂ ಒಪ್ಪಿ ಕೊಳ್ಳುತ್ತಾರೆ.ಬೈಕ್‌ಗಳು, ಮತ್ತಿತರ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತ ಚುಡಾಯಿಸುವುದು ಮತ್ತು ಅಸಭ್ಯವಾಗಿ ವರ್ತಿಸಿ, ಜನ ಗಮನಿಸುವ ಮುನ್ನವೇ ಬೈಕ್ ಓಡಿಸಿಕೊಂಡು ಹೋಗುವುದು ಈಗಿನ `ಫ್ಯಾಶನ್~ !ವಿದ್ಯಾನಗರ, ಗೋಕುಲ ರಸ್ತೆಯಲ್ಲಿ ಹಾಗೂ ಇವೆರಡು ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಬಡಾವಣೆಗಳ ಒಳ ರಸ್ತೆಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಹೆಚ್ಚುತ್ತಿದೆ ಎಂಬುದು ಮಹಿಳಾ ಉಪನ್ಯಾಸಕರೊಬ್ಬರ ಅನಿಸಿಕೆ. ತುಂಬ ದಿನಗಳಿಂದ ಗಮನಿಸಿಯೇ ಈ ಮಾತನ್ನು ಹೇಳುತ್ತಿರುವುದಾಗಿ ಅವರು ವಿವರಿಸುತ್ತಾರೆ.`ನಮ್ಮ ಕಾಲೇಜು ದಿನಗಳಲ್ಲಿ ಕ್ಯಾಂಪಸ್‌ಗಳಲ್ಲಿ ಮಾತ್ರವಲ್ಲದೇ ಹೊರಗೂ ಚುಡಾಯಿಸುವುದು, ಅದರಲ್ಲೂ ಅಶ್ಲೀಲ ಎಂಬಂತೆ ನಡೆದುಕೊಳ್ಳುವುದು ಹೆಚ್ಚಾಗಿತ್ತು. ನಂತರ ಕ್ರಮೇಣ ಈ ಹಾವಳಿ ನಿಂತಂತೆ ಕಂಡು ಬರಲಾರಂಭಿಸಿತ್ತು. ಆದರೆ ಮತ್ತೆ ಇದು ವ್ಯಾಪಿಸುತ್ತಿರುವುದನ್ನು ಕಾಣುತ್ತಿದ್ದೇವೆ.ಒಂದೇ ವ್ಯತ್ಯಾಸವೆಂದರೆ ಈಗ ಕಾಲೇಜು ಆವರಣಗಳಲ್ಲಿ ಅಸಭ್ಯ ಎನಿಸುವ ರೀತಿಯಲ್ಲಿ ಹುಡುಗಿಯರನ್ನು ಚುಡಾಯಿಸುವುದಿಲ್ಲ. ಆದರೆ ರಸ್ತೆಗಳಲ್ಲಿ ಮಾತ್ರ ತೀರ ಅಸಭ್ಯವಾಗಿಯೇ ಹುಡುಗಿಯರನ್ನು, ಕೆಲವೊಮ್ಮೆ ತಮ್ಮ ಪತಿಯೊಂದಿಗೆ ಹೊರಟ ಯುವತಿಯರನ್ನೂ ಚುಡಾಯಿಸುವುದು ಕಂಡು ಬರುತ್ತಿದೆ~ ಎಂಬುದು ಅವರ ಅನಿಸಿಕೆ.ಇದು ಅನೇಕ ಯುವತಿಯರ ಅನಿಸಿಕೆಯೂ ಆಗಿದೆ. `ಕೆಲವೇ ದಿನಗಳ ಹಿಂದೆ ಕೆಎಂಸಿ ಸಿಗ್ನಲ್ ಸಮೀಪ ಬೈಕ್‌ನಲ್ಲಿ ಬರುತ್ತಿದ್ದ ಕಾಲೇಜು ಹುಡುಗರಿಬ್ಬರು ರಸ್ತೆ ಬದಿ ನಡೆದುಕೊಂಡು ಹೊರಟಿದ್ದ ಯುವತಿಗೆ ಅಸಭ್ಯವಾದ ಪದ ಪ್ರಯೋಗಿಸಿ, ಆಕೆಯ ಭುಜವನ್ನು ತಟ್ಟಿ ಬೈಕ್ ಮುಂದಕ್ಕೆ ಓಡಿಸಿದರು. ಹಿಂದೆಯೇ ಬರುತ್ತಿದ್ದ ಎಸಿಪಿ ಯೊಬ್ಬರು ಘಟನೆಯನ್ನು ಗಮನಿಸಿ ಜೀಪ್ ನಿಲ್ಲಿಸಿದರು.

 

ಆ ಹುಡುಗಿ ನನ್ನ ಫ್ರೆಂಡ್ ಸರ್,  ಅದಕ್ಕೆ ತಟ್ಟಿದೆ ಎಂದ ಯುವಕ ಬೈಕ್ ಮುಂದೆ ಓಡಿಸಿಬಿಟ್ಟ. ಇಲ್ಲದ ರಗಳೆ ಏಕೆ ಎಂದುಕೊಂಡು ಆ ಹುಡುಗಿಯೂ ಎಸಿಪಿಯವರಿಗೆ ಫ್ರೆಂಡ್ ಎಂಬಂತೆಯೇ ಚಿತ್ರಣ ಕೊಟ್ಟು ಪಕ್ಕದ ಅಡ್ಡ ರಸ್ತೆಯಲ್ಲಿ ಬಿರುಸಾದ ಹೆಜ್ಜೆಗಳೊಂದಿಗೆ ನಡೆದುಬಿಟ್ಟಳು.

 

ಎಸಿಪಿ ಸುಮ್ಮನಾಗಬೇಕಾಯಿತು. ಬೈಕ್ ಮೇಲಿನ ಹುಡುಗರು ಹೇಳಿದ್ದ ಅಸಭ್ಯ ಮಾತು ಜೀಪ್‌ನಲ್ಲಿದ್ದ ಎಸಿಪಿಯವರಿಗೆ ಕೇಳಿರಲಿಲ್ಲ. ಹುಡುಗಿಯ ಹಿಂಜರಿಕೆ ಹಾಗೂ ಪರಿಸ್ಥಿತಿಯ ದುರ್ಲಾಭವನ್ನು ಬೈಕ್ ಸವಾರರು ಪಡೆದರು~ ಎಂದು ವಿವರಿಸುವ ಸಂಚಾರ ಕಾನ್ಸ್‌ಟೆಬಲ್ ಮಾತು ಪರಿಸ್ಥಿತಿಯ ಗಂಭೀರತೆ ಹೀಗಿದೆ ಎನ್ನುವುದನ್ನು ಸೂಚಿಸುತ್ತದೆ.ಈಚೆಗೆ ರಂಭಾಪುರಿ ಕಲ್ಯಾಣ ಮಂಟಪದ ಮುಂದೆ ದೊಡ್ಡ ಮೆರವಣಿಗೆ ಬರುತ್ತಿತ್ತು. ಪೊಲೀಸ್ ಸಿಬ್ಬಂದಿಯೂ ಸಾಕಷ್ಟಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವತಿ ಯರಿಬ್ಬರನ್ನು, ಬೈಕ್ ಮೇಲೆ ಸವಾರಿ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಇಬ್ಬರು ಯುವಕರು, ಚುಡಾಯಿಸಿ ಅಸಭ್ಯವಾಗಿ ನಡೆದುಕೊಂಡರು.

 

ಇಬ್ಬರಲ್ಲಿ ಒಬ್ಬ ಯುವತಿ ಧೈರ್ಯಮಾಡಿ ಯುವಕರಿದ್ದ ಬೈಕ್ ನಿಲ್ಲಿಸಿ ಕೂಗಿ ಕೊಂಡಳು. ಹತ್ತಿರವೇ ಇದ್ದ ಪೊಲೀಸರು ಧಾವಿಸಿ ಬಂದು ಯುವಕರಿಗೆ ಚೆನ್ನಾಗಿ ಥಳಿಸಿದರು. ಇನ್ನೇನು ಆ ಯುವಕರನ್ನು ಪೊಲೀಸ್ ಜೀಪ್‌ನಲ್ಲಿ ಕೂರಿಸಬೇಕು ಎನ್ನುವಷ್ಟರಲ್ಲಿ, ಆ ಯುವತಿಯರ ಪಾಲಕರು ಮಧ್ಯ ಪ್ರವೇಶಿಸಿ `ಹೋಗಲಿ ಬಿಡಿ, ಬೆಳೆಸುವುದು ಬೇಡ~ ಎಂದರು.ಪೊಲೀಸರು ಅಸಹಾಯಕರಾಗಿ ಮತ್ತೆ ನಾಲ್ಕೇಟು ಹಾಕಿ ಯುವಕರನ್ನು ಕಳಿಸಿಕೊಟ್ಟರು~ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಈವ್ ಟೀಸಿಂಗ್ ಮತ್ತೆ ಚಿಗಿತುಕೊಂಡಿದೆ ಎಂಬುದನ್ನು ಈ ಘಟನೆ ಗಳು ತೋರಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.