ಗುರುವಾರ , ಜೂನ್ 17, 2021
27 °C

ರೋಬೊಗಳ ಸಮುದ್ರಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಬೊಗಳ ಸಮುದ್ರಯಾನ

ಸಮುದ್ರದ ಅಲೆಗಳ ಕುರಿತು ಅಧ್ಯಯನ ನಡೆಸುವ ಅಮೆರಿಕ ಮೂಲದ ಲಿಕ್ವಿಡ್ ರೋಬೊಟಿಕ್ಸ್  ಕಂಪೆನಿ ಅಭಿವೃದ್ಧಿಪಡಿಸಿರುವ ನಾಲ್ಕು ರೋಬೊಟ್‌ಗಳು ಹೊಸ ವಿಶ್ವ ದಾಖಲೆ ನಿರ್ಮಿಸಿವೆ.  ಮಾನವ ನಿಯಂತ್ರಣ ಇಲ್ಲದೆ ಈ ರೋಬೊಟ್‌ಗಳು ಪೆಸಿಫಿಕ್ ಸಾಗರದಲ್ಲಿ ಈಜುತ್ತಾ ಈಗಾಗಲೇ ಸುಮಾರು 3,200 ನಾಟಿಕಲ್ ಮೈಲುಗಳಷ್ಟು (ಸುಮಾರು 5,926 ಕಿ.ಮೀ) ದೂರಕ್ರಮಿಸಿವೆ. ಒಟ್ಟು 300 ದಿನಗಳ ಈ ಪಯಣದ ಅಂತ್ಯಕ್ಕೆ 9 ಸಾವಿರ ನಾಟಿಕಲ್ ಮೈಲುಗಳನ್ನು (16,668 ಕಿ.ಮೀ) ತಲುಪುವ ಗುರಿಯನ್ನು ಈ ರೋಬೊಟ್‌ಗಳು ಹೊಂದಿವೆ ಎನ್ನುತ್ತಾರೆ ಇದರ ಸೃಷ್ಟಿಕರ್ತರು.ಸಮುದ್ರದ ನೀರು ಮತ್ತು ಅಲೆಗಳ ಉಬ್ಬರ ಇಳಿತದ ಕುರಿತು ರೋಬೊಟಿಕ್ಸ್ ಕಂಪೆನಿ ಅಧ್ಯಯನ ನಡೆಸುತ್ತದೆ. ಈ ರೋಬೊಟ್‌ಗಳ ಮೂಲಕ ಸಮುದ್ರದ ನೀರಿನ ಗುಣಮಟ್ಟ, ಸಂಯೋಜನೆ ಹಾಗೂ ಸಾಗರ ಮಾಲಿನ್ಯದ ಕುರಿತು ಸಮಗ್ರ ದತ್ತಾಂಶಗಳನ್ನು ಕಲೆ ಹಾಕುವುದು ಕಂಪೆನಿ ಉದ್ದೇಶ. ಸಾಗರದ ನೀರು ಹೇಗೆ ಕಲುಷಿತಗೊಳ್ಳುತ್ತಿದೆ ಮತ್ತು ಜಲಚರಗಳ ಸಂಖ್ಯೆ ಯಾಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎನ್ನುವುದು ಈ ಅಧ್ಯಯನದ ಪ್ರಮುಖ ವಿಷಯ.ಕಳೆದ ನವೆಂಬರ್ 17, 2011ರಂದು ಈ ರೋಬೊಟ್‌ಗಳನ್ನು ಸ್ಯಾನ್‌ಫ್ರಾನ್ಸಿಸ್ಕೊ ಬಂದರಿನಿಂದ ಕಡಲಿಗೆ ಈಜಲು ಬಿಡಲಾಯಿತು. ಇಲ್ಲಿಂದ ಹವಾಯಿ ದ್ವೀಪ ತಲುಪಲು 150 ದಿನಗಳನ್ನು ತೆಗೆದುಕೊಂಡವು. ಮಾನವ ನಿಯಂತ್ರಣ ಇಲ್ಲದ ಉಪಕರಣವೊಂದು ಸುಮಾರು 2,500 ಮೈಲುಗಳನ್ನು (4,630 ಕಿ.ಮೀ) ಸಮುದ್ರದಲ್ಲಿ ಈಜಿರುವುದು ಇದುವರೆಗಿನ ಗಿನ್ನೆಸ್ ವಿಶ್ವದಾಖಲೆ. ಲಿಕ್ವಿಡ್ ರೋಬೊಟಿಕ್ಸ್ ಕಂಪೆನಿ ಇದೀಗ ಈ ದಾಖಲೆಯನ್ನು ಮುರಿದು ಮುಂದಕ್ಕೆ ಸಾಗಿದೆ.`ಈ ರೋಬೊಟ್‌ಗಳ ಮೂಲಕ ಹೊಸ ಸಮುದ್ರ ಆವಿಷ್ಕಾರಗಳು ಬಹಿರಂಗಗೊಳ್ಳಲಿವೆ  ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇವುಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸಾಗರ ಸಂಶೋಧನೆ ತಂತ್ರಜ್ಞಾನವು, ಬೃಹತ್ ಪ್ರಮಾಣದ ದತ್ತಾಂಶ ಒದಗಿಸಲಿದೆ~ ಎನ್ನುತ್ತಾರೆ ಲಿಕ್ವಿಡ್ ರೋಬೊಟಿಕ್ಸ್‌ನ ಆವಿಷ್ಕಾರ ವಿಭಾಗದ ಮುಖ್ಯಸ್ಥ ಎಡ್ವರ್ಡ್ ಲು.ಯಾವುದೇ ಇಂಧನ ಬಳಕೆ ಇಲ್ಲದೆ ಈ ರೊಬೋಟ್‌ಗಳು ಮುಂದಕ್ಕೆ ಚಲಿಸುತ್ತವೆ ಎನ್ನುವುದು ವಿಶೇಷ. ರೋಬೊಗಳನ್ನು ಎರಡು ಭಾಗಗಳಾಗಿ ಸಂಯೋಜಿಸಲಾಗಿದೆ. ಮೊದಲರ್ಧ ಭಾಗ ನೀರಿನ ಮೇಲ್ಭಾಗದಲ್ಲಿ ಜಾರು ಹಲಗೆಯಂತೆ (surfbo­ard)ತೇಲುತ್ತಿರುತ್ತದೆ. ಇನ್ನುಳಿದ ಭಾಗ ನೀರಿನ ಕೆಳಗೆ ಚಲಿಸುತ್ತಿರುತ್ತದೆ. ನೀರಿನಲ್ಲಿ ಮುಳುಗಿ ಈಜುವ ವ್ಯಕ್ತಿ ಕಾಲಿಗೆ ಹಾಕಿಕೊಳ್ಳುವಂತಹ ರಬ್ಬರ್ ರೆಕ್ಕೆಗಳನ್ನು ಈ ರೋಬೊಟ್‌ಗಳ ಕಾಲಿಗೂ ಅಳವಡಿಸಲಾಗಿದೆ. ಕಾಲನ್ನು ಆಡಿಸುತ್ತಿದ್ದಂತೆ ಮೇಲ್ಭಾಗದಲ್ಲಿರುವ ಹಲಗೆ ಮುಂದಕ್ಕೆ ಚಲಿಸುತ್ತದೆ. ಮೇಲ್ಭಾಗದಿಂದ ಕೆಳ ಭಾಗಕ್ಕೆ ತಂತಿ ಸಂಪರ್ಕ ಕಲ್ಪಿಸಲಾಗಿದೆ.ಈ ರೋಬೊಟ್‌ಗಳು ಸಮುದ್ರದ ಅಲೆಗಳ ಘರ್ಷಣೆಯಿಂದ ಉಂಟಾಗುವ ಶಕ್ತಿಯನ್ನೇ ವಿದ್ಯುತ್ ಆಗಿ ಪರಿವರ್ತಿಸಿಕೊಂಡು ಮುಂದೆ ಚಲಿಸುತ್ತವೆ. ನೀರಿನ ಮೇಲೆ ತೇಲುವ ಹಲಗೆಗೆ ಸೌರಫಲಕಗಳನ್ನು ಅಳವಡಿಸಲಾಗಿದೆ. ಈ ಮೂಲಕವೂ ವಿದ್ಯುತ್ ಉತ್ಪಾದನೆಯಾಗುತ್ತದೆ.ಇದರ ಪಕ್ಕದಲ್ಲಿ ಅಳವಡಿಸಲಾಗಿರುವ ಪವರ್ ಸೆನ್ಸರ್‌ಗಳ ಮೂಲಕ ನೀರಿನ ಲವಣತ್ವ, ಉಷ್ಣತೆ, ಹವಾಮಾನ, ವಿದ್ಯುತ್ಕಾಂತೀಯ ಅಲೆಗಳು ಮತ್ತು ದ್ರವೀಕೃತ ಆಮ್ಲಜನಕದ ಕುರಿತು ಪ್ರತಿ 10 ನಿಮಿಷಗಳಿಗೊಮ್ಮೆ ಪರಿಷ್ಕೃತ ದತ್ತಾಂಶ ಸಂಗ್ರಹಿಸಿ, ರವಾನಿಸಲಾಗುತ್ತದೆ.ಹವಾಯಿಯಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡ ರೋಬೊಟ್‌ಗಳು,  ನಂತರ ಎರಡು ವಿರುದ್ಧ ದಿಕ್ಕುಗಳಲ್ಲಿ ಪಯಣ ಬೆಳೆಸಿವೆ. ಎರಡು ರೋಬೊಟ್‌ಗಳು ಜಪಾನಿನ ಕಡಲ ಕಿನಾರೆಯತ್ತ ಸಾಗುತ್ತಿದ್ದರೆ, ಮತ್ತೆರಡು ಆಸ್ಟ್ರೇಲಿಯಾದತ್ತ ಈಜುತ್ತಿವೆ. 2012ರ ಅಂತ್ಯ ಅಥವಾ 2013ರ ಮೊದಲ ವಾರದಲ್ಲಿ ಈ ರೋಬೊಟ್‌ಗಳು ತಮ್ಮ ಗಮ್ಯ ಸ್ಥಾನ ತಲುಪಲಿವೆ ಎನ್ನುವುದು ಲಿಕ್ವಿಡ್ ರೋಬೊಟಿಕ್ಸ್ ತಂಡದ ವಿಶ್ವಾಸ.   

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.