ರೋಮಾಂಚನಗೊಳಿಸಿದ ಜಲ ಸಾಹಸ ಕ್ರೀಡೆ

7

ರೋಮಾಂಚನಗೊಳಿಸಿದ ಜಲ ಸಾಹಸ ಕ್ರೀಡೆ

Published:
Updated:
ರೋಮಾಂಚನಗೊಳಿಸಿದ ಜಲ ಸಾಹಸ ಕ್ರೀಡೆ

ಕಾರವಾರ: ಸರ್ವ ಶಿಕ್ಷಣ ಅಭಿಯಾನದ ಭಾಗವಾಗಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಆಶ್ರಯದಲ್ಲಿ `ಸಾಹಸ ಮತ್ತು ಪ್ರಕೃತಿ ಅಧ್ಯಯನ~ ಶಿಬಿರ ನಗರದ ಅಲಿಗದ್ದಾ ಕಡಲತೀರದಲ್ಲಿ ಶುಕ್ರವಾರ ನಡೆಯಿತು.ಗ್ರಾಮೀಣ ಪ್ರದೇಶದಲ್ಲಿರುವ, ವಿಶೇಷವಾಗಿ ಕಡು ಬಡವ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯ ಒಟ್ಟು 50 ವಿದ್ಯಾರ್ಥಿಗಳು (ವಿಶೇಷ ಅಗತ್ಯತೆವುಳ್ಳ ಹತ್ತು ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ) ಮೂರು ದಿನಗಳ ಸಾಹಸ ಮತ್ತು  ಪ್ರಕೃತಿ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.ಹುಬ್ಬಳ್ಳಿ ಮತ್ತು ಧಾರವಾಡ ನಗರದಲ್ಲಿರುವ ಪ್ರಾಥಮಿಕ ಶಾಲೆಗಳ ತಲಾ ಐದು, ಗ್ರಾಮೀಣ ಭಾಗದ 10, ಕಲಘಟಗಿ ತಾಲ್ಲೂಕಿನ 10, ಕುಂದಗೋಳ ತಾಲ್ಲೂಕಿನಿಂದ 10 ಮತ್ತು ನವಲಗುಂದ ತಾಲ್ಲೂಕಿನಿಂದ 10 ವಿದ್ಯಾರ್ಥಿಗಳು ಇಲ್ಲಿ ಸಾಹಸ ಕ್ರೀಡೆಗಳ ತರಬೇತಿ ಪಡೆದರು.ಶಿಬಿರದಲ್ಲಿ ಮಕ್ಕಳಿಗೆ ಈಜು, ರೋಯಿಂಗ್, ರ‌್ಯಾಪ್ಟಿಂಗ್, ಬನಾನಾ ಬೋಟ್ ರೈಡಿಂಗ್, ಕಯಾಕಿಂಗ್, ಕೊರೆಕಲ್ (ತೆಪ್ಪ), ಬೋರ್ಡ್ ಬ್ಯಾಲೆನ್ಸಿಂಗ್ ಮತ್ತು ಭೂ ಸಾಹಸ ಕ್ರೀಡೆಗಳ ಭಾಗವಾಗಿ ರಾಕ್ ಕ್ಲೈಬಿಂಗ್, ರಿವರ್ ಕ್ರಾಸಿಂಗ್ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವ್ಯವಸ್ಥಾಪಕ ಪ್ರಕಾಶ ಹರಿಕಂತ್ರ `ಪ್ರಜಾವಾಣಿ~ಗೆ ತಿಳಿಸಿದರು.ಜಲ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಮೊದಲು ಹಿಂದೇಟು ಹಾಕಿದ ವಿದ್ಯಾರ್ಥಿಗಳು ನಂತರ ಉತ್ಸಾಹದಿಂದ ಪಾಲ್ಗೊಂಡರು. ಲೈಪ್ ಜಾಕೆಟ್ ಧರಿಸಿದ ವಿದ್ಯಾರ್ಥಿಗಳು ಬನಾನ ಬೋಟ್ ಮೇಲೆ ಆಳ ಸಮುದ್ರದಲ್ಲಿ ವಿಹರಿಸಿ ಖುಷಿಪಟ್ಟರು.ಕಯಾಕಿಂಗ್, ಕೊರೆಕಲ್ ಮೇಲೆ ತೆರಳಿ, ಹುಟ್ಟು ಹಾಕಿ ಸಮುದ್ರದಲ್ಲಿ ಅತ್ತಿಂದಿತ್ತ ತಿರುಗಾಡಿ ಆನಂದಪಟ್ಟರು. `ನನಗೆ ಸಮುದ್ರ ಹೇಗಿರುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ಇಲ್ಲಿಗೆ ಬಂದು ಈಜು ಕಲಿತೆ. ಇಲ್ಲಿ ನಡೆದ ಜಲ ಸಾಹಸ ಕ್ರೀಡೆಗಳ ತರಬೇತಿ~ಯ ಬಗ್ಗೆ ಮೊರಬ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಮಲ್ಲಾರಿ ಮೆಚ್ಚುಗೆ ವ್ಯಕ್ತಪಡಿಸಿದಳು.ಶಿಕ್ಷಕರಾದ ಎಂ.ಜಿ.ಜಾಡಗೌಡ, ವಿ.ಜಿ.ಮಸ್ಕಿ ಮತ್ತು ವೀಣಾ ವಿದ್ಯಾರ್ಥಿಗಳಿಗೆ ಜಲಸಾಹಸ ಕ್ರೀಡೆಗಳ  ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry