ರೋವರ್ ಇಳಿಯುವ ಜಾಗ ಗುರುತಿಸಿದ್ದು ಭಾರತೀಯ ವಿಜ್ಞಾನಿ!
ನವದೆಹಲಿ: ಮಂಗಳ ಗ್ರಹದಲ್ಲಿ `ಕ್ಯೂರಿಯಾಸಿಟಿ~ ರೋವರ್ ಸೋಮವಾರ ಯಶಸ್ವಿಯಾಗಿ ಇಳಿಯುವ ಕ್ಷಣಕ್ಕೆ ಇಡಿ ವಿಜ್ಞಾನಿಗಳ ಲೋಕವೇ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಅದರಲ್ಲೂ ಭಾರತೀಯ ಮೂಲದ ವಿಜ್ಞಾನಿ ಅಮಿತಾಭ್ ಘೋಷ್ ಅವರು ಆ ಕ್ಷಣವನ್ನು ಇತರೆಲ್ಲರಿಗಿಂತ ಹೆಚ್ಚು ಕುತೂಹಲದಿಂದ, ಗಾಬರಿಯಿಂದ ಎದುರು ನೋಡುತ್ತಿದ್ದರೇನೋ.
`ಕ್ಯೂರಿಯಾಸಿಟಿ~ ಮಂಗಳನ ಅಂಗಳದಲ್ಲಿರುವ ಗೇಲ್ ಕುಳಿಯಲ್ಲಿ (ಕ್ರೇಟರ್) ಸುರಕ್ಷಿತವಾಗಿ ಇಳಿದಾಗ ತನ್ನಿಂತಾನೆ ಅವರ ಕೈ ಬೆರಳುಗಳು `ವಿ~ ಸಂಕೇತವನ್ನು ಪ್ರದರ್ಶಿಸಿದ್ದವು!
ಅದಕ್ಕೆ ಕಾರಣವೂ ಇತ್ತು. `ಕ್ಯೂರಿಯಾಸಿಟಿ~ ರೋವರ್ ಇಳಿಯುವ ಜಾಗವನ್ನು ಗುರುತಿಸಿದ ತಂಡದಲ್ಲಿ ಅಮಿತಾಭ್ ಘೋಷ್ ಅವರೂ ಇದ್ದರು.
ನಾಸಾದ `ಮಂಗಳ ಪರಿಶೋಧನೆ ರೋವರ್ ಯೋಜನೆ~ಯ ವಿಜ್ಞಾನ ಕಾರ್ಯಾಚರಣೆಗಳ ತಜ್ಞರ ತಂಡದ ಮುಖ್ಯಸ್ಥರಾಗಿರುವ ಅಮಿತಾಭ್ ಘೋಷ್, ರೋವರ್ ಇಳಿದ ಜಾಗ ಗುರುತಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಕುಳಿ ಇರುವ ಪ್ರದೇಶವು ಸಂಚಿತ ಪದರಗಳಿಂದ ರಚಿತವಾಗಿರುವುದರಿಂದ ನಾಸಾವು `ಕ್ಯೂರಿಯಾಸಿಟಿ~ಯನ್ನು ಅಲ್ಲಿ ಇಳಿಸುವ ನಿರ್ಧಾರ ಕೈಗೊಂಡಿತ್ತು.
ಇಲ್ಲಿರುವ ಪ್ರತಿ ಪದರವೂ ನಿರ್ದಿಷ್ಟ ಭೌಗೋಳಿಕ ಯುಗದಲ್ಲಿದ್ದ ಸ್ಥಿತಿಗತಿಗಳನ್ನು ದಾಖಲಿಸುತ್ತವೆ. ಈ ಕುಳಿಯಲ್ಲಿ ಕಂಡು ಬಂದಿರುವ ಕೆಲವು ಪದರಗಳು ಮಣ್ಣಿನ ಲವಣಾಂಶಗಳನ್ನು ಹೊಂದಿದೆ ಎಂದು ಈ ಹಿಂದೆ ಮಂಗಳ ಶೋಧನಾ ನೌಕೆ ಕಳುಹಿಸಿದ್ದ ಮಾಹಿತಿಯಲ್ಲಿ ತಿಳಿದು ಬಂದಿತ್ತು.
ಘೋಷ್ ಅವರಲ್ಲದೇ ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಹಲವು ಭಾರತೀಯ ಮೂಲದ ವಿಜ್ಞಾನಿಗಳೂ ಪಾಲ್ಗೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.