ರೋಹನ್-ಗಾಯತ್ರಿಗೆ ಕೆಡೆಟ್ ಕಿರೀಟ

ಬುಧವಾರ, ಜೂಲೈ 24, 2019
27 °C

ರೋಹನ್-ಗಾಯತ್ರಿಗೆ ಕೆಡೆಟ್ ಕಿರೀಟ

Published:
Updated:

ಧಾರವಾಡ: ಮೂರನೇ ಶ್ರೇಯಾಂಕದ ಆಟಗಾರ್ತಿಯಾದ `ಹುಬ್ಬಳ್ಳಿ ಹುಡುಗಿ~ ಗಾಯತ್ರಿ ಟಂಕಸಾಲಿ ಶುಕ್ರವಾರ ಇಲ್ಲಿಯ ಕಾಸ್ಮಸ್ ಕ್ಲಬ್‌ನಲ್ಲಿ ಆರಂಭವಾದ ವರ್ಷದ ಮೊದಲ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ ವಿಭಾಗದ ಕೆಡೆಟ್ ಪ್ರಶಸ್ತಿ ಜಯಿಸುವ ಮೂಲಕ ಸೋಜಿಗದ ಫಲಿತಾಂಶ ತಂದರು.ಮೋಡಗಳ ಮೆರವಣಿಗೆ ಶುರುವಾದ ಸಂಜೆಯ ಹೊತ್ತು ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಮಂಡಳದ ಗಾಯತ್ರಿ 11-8, 11-7, 10-12, 11-8ರಿಂದ ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಂಗಳೂರಿನ ಜೆಮ್ಸ ಕ್ಲಬ್‌ನ ವಿ. ಖುಷಿ ಅವರ ವಿರುದ್ಧ ಗೆಲುವಿನ ನಗು ಹೊರಸೂಸಿದರು.ಮೊದಲ ಎರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದ ಗಾಯತ್ರಿ, ತಪ್ಪು ಹೊಡೆತಗಳ ಮೂಲಕ ಕಡೆಯ ಕ್ಷಣದಲ್ಲಿ ಮೂರನೇ ಸೆಟ್‌ಅನ್ನು ಎದುರಾಳಿಗೆ ಬಿಟ್ಟುಕೊಟ್ಟರು. ಕೊನೆಯ ಸೆಟ್‌ನಲ್ಲಿ ಮತ್ತೆ ಆಟದ ಲಯ ಕಂಡುಕೊಂಡ `ಹುಬ್ಬಳ್ಳಿ ಹುಡುಗಿ~ ಬಲಶಾಲಿ       ಸರ್ವ್‌ಗಳ ಮೂಲಕ ಪಂದ್ಯವನ್ನೂ ಗೆದ್ದುಕೊಂಡರು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗಾಯತ್ರಿ 11-6, 11-4, 11-8ರಿಂದ ಬೆಂಗಳೂರಿನ ಒಎಂಟಿಟಿಯ ಸೋನಾಲಿ ಸಿಂಹ ಅವರನ್ನು ಸೋಲಿಸಿದರೆ, ವಿ. ಖುಷಿ 12-10, 5-11, 13-11, 11-8ರಿಂದ ಅಗ್ರ ಶ್ರೇಯಾಂಕದ ಆಟಗಾರ್ತಿ ಬೆಂಗಳೂರು ಹೊರೈಜಾನ್ ಕ್ಲಬ್‌ನ ಮೇದಿನಿ ಆರ್ ಭಟ್ ಅವರಿಗೆ ಸೋಲಿನ ರುಚಿ ತೋರಿಸಿದರು.ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮೇದಿನಿ ಭಟ್ 11-8, 11-8, 11-9ರಿಂದ ಬೆಂಗಳೂರಿನ ಒಎಂಟಿಟಿಯ ಕಿರಣ ಸಂಜೀವಾ ಮೇಲೂ; ವಿ.ಖುಷಿ 3-11, 11-4, 12-10, 11-9ರಿಂದ ಸಿಒಎಯ ಅರ್ಚನಾ ಕಾಮತ್ ವಿರುದ್ಧವೂ; ಗಾಯತ್ರಿ ಟಂಕಸಾಲಿ 9-11, 11-4, 11-7, 8-11, 11-2ರಿಂದ ಬೆಂಗಳೂರು ಬಿಎನ್‌ಎಂನ ದಿಶಾ ಗುಪ್ತಾ ಮೇಲೂ; ಸೋನಾಲಿ ಸಿಂಹ 11-7, 7-11, 11-8, 11-5ರಿಂದ ಬೆಳಗಾವಿಯ ಅಕ್ಷತಾ ಮಾಲಸೇಟ್ ವಿರುದ್ಧವೂ ಗೆಲುವು ಸಾಧಿಸಿದರು.ರೋಹನ್‌ಗೆ ಪ್ರಶಸ್ತಿ:ಬಾಲಕರ ಕೆಡೆಟ್ ವಿಭಾಗದಲ್ಲಿ ಬೆಂಗಳೂರಿನ ಹೊರೈಜಾನ್ ಕ್ಲಬ್‌ನ ರೋಹನ್ ಜಮದಗ್ನಿ 16-14, 11-8, 11-13, 11-9ರಿಂದ ಬೆಂಗಳೂರು ಜೆಟಿಟಿಎಯ ನೀರಜ್‌ರಾಜ್ ಅವರನ್ನು ಪರಾಭವಗೊಳಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.ಸೆಮಿಫೈನಲ್‌ನಲ್ಲಿ ರೋಹನ್ 11-6, 11-8, 11-7ರಿಂದ ತಮ್ಮದೇ ಕ್ಲಬ್‌ನ ಸುದೀಪ್ ಜಿ ವಿರುದ್ಧ ಜಯಿಸಿದರೆ, ನೀರಜ್‌ರಾಜ್ 11-7, 12-10, 11-8ರಿಂದ ಸಿಸಿಎಯ ವಿಷ್ಣು ಪ್ರಣವ್ ಅವರನ್ನು ಪರಾಭವಗೊಳಿಸಿದರು.ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ರೋಹನ್ 5-11, 11-5, 11-4, 11-8ರಿಂದ ಬಿಎನ್‌ಎಂನ ದಕ್ಷ ತೇಲಾಂಗ್ ಅವರನ್ನು; ಜಿ. ಸುದೀಪ್ 11-4, 11-3, 9-11, 11-6ರಿಂದ ಬಿಎನ್‌ಎಂನ ಕೌಸ್ತುಭ ಕುಲಕರ್ಣಿ ಅವರನ್ನು; ವಿಷ್ಣು ಪ್ರಣವ್ 11-5, 11-6, 11-9ರಿಂದ ಎಚ್‌ಟಿಟಿಎಯ ಎಚ್. ಕಾರ್ತಿಕ್ ಅವರನ್ನು; ನೀರಜ್‌ರಾಜ್ 11-8, 10-12, 11-7, 9-11, 11-7ರಿಂದ ಬಿಎನ್‌ಎಂನ ವಿವೇಕಾನಂದ ಅವರನ್ನು ಪರಾಭವಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry