ಭಾನುವಾರ, ಮಾರ್ಚ್ 7, 2021
28 °C

ರೋಹಿತ್ ಆತ್ಮಹತ್ಯೆ: ನಗರದಲ್ಲೂ ಹೋರಾಟದ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಹಿತ್ ಆತ್ಮಹತ್ಯೆ: ನಗರದಲ್ಲೂ ಹೋರಾಟದ ಕಾವು

ಬೆಂಗಳೂರು: ಹೈದರಾಬಾದ್ ವಿ.ವಿ.ಯ ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನ ವಿವಿಧೆಡೆ ಗುರುವಾರ ಪ್ರತಿಭಟನೆಗಳು ನಡೆದಿವೆ.

ಪ್ರತಿಭಟನೆ, ಘರ್ಷಣೆ: ರೋಹಿತ್ ಆತ್ಮಹತ್ಯೆ ಪ್ರಕರಣಕ್ಕೆ ಎಬಿವಿಪಿ ಕಾರಣ ಎಂದು ಆರೋಪಿಸಿ, ಗುರುವಾರ ಎನ್‌ಎಸ್‌ಯುಐ ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ನಡೆಸಿತು. ಈ ವೇಳೆ ಪ್ರತಿಭಟನಾಕಾರರು ಮತ್ತು ಎಬಿವಿಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು.

ಘಟನೆಯಲ್ಲಿ ಎಬಿವಿಪಿ ಪ್ರಾಂತೀಯ ಕಾರ್ಯದರ್ಶಿ ಬಸವೇಶ್ ಅವರಿಗೆ ಗಾಯವಾಗಿದ್ದು, ಕಚೇರಿಯ ಗಾಜುಗಳು ಒಡೆದಿವೆ.

ನಡೆದಿದ್ದೇನು?: ಮಧ್ಯಾಹ್ನ 12.30ರ ಸುಮಾರಿಗೆ ಶೇಷಾದ್ರಿಪುರದಲ್ಲಿರುವ ಎಬಿವಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ ಕಾರ್ಯಕರ್ತರು, ಕಚೇರಿಯ ಆವರಣ ಪ್ರವೇಶಿಸಲು ಮುಂದಾದರು. ಆಗ ಅವರನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಎಬಿವಿಪಿ ಕಾರ್ಯಕರ್ತರೂ ಪ್ರತಿಭಟನಾಕಾರರಿಗೆ ಪ್ರತಿರೋಧ ಒಡ್ಡಿದರು. ಹೀಗೆ ಇಬ್ಬರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಆರೋಪ-ಪ್ರತ್ಯಾರೋಪ: ‘ಪ್ರತಿಭಟನಾಕಾರರು ಕಚೇರಿ ಒಳಗಡೆ ಪ್ರವೇಶಿಸಲು ಮುಂದಾದಾಗ, ನಾನೂ ಸೇರಿದಂತೆ ಕೆಲ ಕಾರ್ಯಕರ್ತರು ತಡೆಯಲು ಮುಂದಾದೆವು. ಆಗ ಇದ್ದಕ್ಕಿದ್ದಂತೆ ನಮ್ಮ ಮೇಲೆ ಕಲ್ಲು ತೂರಿದರು. ಅಲ್ಲದೆ, ನನ್ನನ್ನು ಎಳೆದಾಡಿ ಹಲ್ಲೆ ನಡೆಸಿದರು’ ಎಂದು ಬಸವೇಶ್ ಅವರು ‘ಪ್ರಜಾವಾಣಿ’ಗೆ ಹೇಳಿದರು.‘ಸಂಶೋಧನಾ ವಿದ್ಯಾರ್ಥಿ ವೇಮುಲ ಆತ್ಮಹತ್ಯೆಗೂ ಎಬಿವಿಪಿಗೂ ಯಾವುದೇ ಸಂಬಂಧ ಇಲ್ಲ. ಆದರೂ, ಸಾವಿಗೆ ಸಂಘಟನೆಯೇ ಕಾರಣ ಎಂದು ಆರೋಪಿಸಿ, ಕಚೇರಿ ಎದುರು ಪ್ರತಿಭಟನೆ ಮಾಡಿದ್ದು ಎಷ್ಟು ಸರಿ?’ ಎಂದು ಅವರು ಪ್ರಶ್ನಿಸಿದರು.ಅವರಿಂದಲೇ ಹಲ್ಲೆ: ಇನ್ನು, ‘ವೇಮುಲ ಆತ್ಮಹತ್ಯೆಗೆ ಎಬಿವಿಪಿ ಕಾರಣ ಎಂದು ಆರೋಪಿಸಿ, ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು 60 ದಲಿತ ವಿದ್ಯಾರ್ಥಿಗಳು ಎಬಿವಿಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಎಬಿವಿಪಿಯವರು ಪ್ರತಿಭಟನಾ ನಿರತರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಿದರು’ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ ದೂರಿದರು.

‘ಆಗ ಸ್ಥಳದಲ್ಲಿದ್ದ ನಮ್ಮ ಕಾರ್ಯಕರ್ತರು ಅವರ ನೆರವಿಗೆ ಹೋಗಿದ್ದಾರಷ್ಟೆ. ನಮ್ಮ ವಿರುದ್ಧ ಸುಳ್ಳು ದೂರು ನೀಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.ಪ್ರಕರಣ ದಾಖಲು: ಘಟನೆ ಸಂಬಂಧ ಬಸವೇಶ್ ಅವರು ನೀಡಿದ ದೂರಿನ ಮೇರೆಗೆ, ಪ್ರಕರಣ ದಾಖಲಿಸಿಕೊಂಡು ಎಂಟು  ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಶೇಷಾದ್ರಿಪುರ ಠಾಣೆ ಪೊಲೀಸರು ತಿಳಿಸಿದರು.

ಕುಲಪತಿ ಬಂಧನಕ್ಕೆಆಗ್ರಹ: ಮತ್ತೊಂದೆಡೆ, ರೋಹಿತ್‌ ಆತ್ಮಹತ್ಯೆಗೆ ಕಾರಣರಾದ ಹೈದರಾಬಾದ್‌ ಕೇಂದ್ರೀಯ ವಿವಿ ಕುಲಪತಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ.ಬಿ.ಆರ್‌. ಅಂಬೇಡ್ಕರ್‌ ವಿದ್ಯಾರ್ಥಿಸಂಘ ಹಾಗೂ ವಿವಿಧ ದಲಿತ ಸಂಘಟನೆಗಳ ಸದಸ್ಯರು ಜಿಕೆವಿಕೆ ಗೇಟ್‌ ಬಳಿ ಪ್ರತಿಭಟಿಸಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಿಪಬ್ಲಿಕ್‌ ಪಾರ್ಟಿ ಆಫ್ ಇಂಡಿಯಾ ರಾಜ್ಯಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ವಿಶ್ವವಿದ್ಯಾಲಯಗಳಲ್ಲಿ ವಿಶೇಷವಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ರೋಹಿತ್‌ ಪ್ರಕರಣ ಅಧ್ಯಯನ: ಈ ನಡುವೆ, ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ಅಂಬೇಡ್ಕರ್‌ ಅಭಿಯಾನದಲ್ಲಿ ಅಧ್ಯಯನ ವಿಷಯವನ್ನಾಗಿ ಬಳಸಿಕೊಳ್ಳಲು ಬೆಂಗಳೂರು ನಗರದ ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ವಿಭಾಗ ನಿರ್ಧರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.