ಸೋಮವಾರ, ಜೂನ್ 14, 2021
21 °C

ರ್‍ಯಾಗಿಂಗ್‌ಗೆ ಡಿಪ್ಲೊಮಾ ವಿದ್ಯಾರ್ಥಿ ಬಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಆಚಾರ್ಯ ಪಾಲಿಟೆಕ್ನಿಕ್‌ ಶಿಕ್ಷಣ ಸಂಸ್ಥೆಯ ಡಿಪ್ಲೊಮಾ ವಿದ್ಯಾರ್ಥಿ ಅಹಬ್‌ ಇಬ್ರಾಹಿಂ (21) ಎಂಬುವರು ಕೇರಳದ ಮೆಡಿಕಲ್‌ ಟ್ರಸ್ಟ್‌ ಆಸ್ಪತ್ರೆಯಲ್ಲಿ ಸೋಮವಾರ ಸಾವನ್ನಪ್ಪಿದ್ದಾರೆ. ‘ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿ ರ್‌್ಯಾಗಿಂಗ್‌ ಮಾಡಿದ್ದರಿಂದ ಮಗ ಸಾವನ್ನಪ್ಪಿದ್ದಾನೆ’ ಎಂದು  ಅಹಬ್‌ ಪೋಷಕರು ಆರೋಪಿಸಿದ್ದಾರೆ.



ಕೇರಳದ ಚಲಕುಡಿಯ ಪೂಪರಾಂಬಿಲ್‌ ಇಬ್ರಾಹಿಂ ಎಂಬ ವ್ಯಾಪಾರಿಯ ಮಗನಾದ ಅಹಬ್, ನಗರದ ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಪಾಲಿಟೆಕ್ನಿಕ್‌ ಶಿಕ್ಷಣ ಸಂಸ್ಥೆಯಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಜ.27ರಂದು ಅಪಾರ್ಟ್‌ಮೆಂಟ್‌ನ ಸ್ನಾನದ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಲಕುಡಿಯ ಸೇಂಟ್‌ ಜೇಮ್ಸ್‌ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಬಳಿಕ ಅವರನ್ನು ಕೊಚ್ಚಿಯ ಮೆಡಿಕಲ್‌ ಟ್ರಸ್ಟ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅಹಬ್‌, ಸೋಮವಾರ ಕೊನೆಯುಸಿರೆಳಿದಿದ್ದಾರೆ. ಘಟನೆ ಸಂಬಂಧ ಎರ್ನಾಕುಲಂ ದಕ್ಷಿಣ ವಿಭಾಗದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



ರ್‌್ಯಾಗಿಂಗ್‌ ಆರೋಪ: ‘ಅಪಾರ್ಟ್‌­ಮೆಂಟ್‌ನಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು 2013ರ ಸೆಪ್ಟಂಬರ್‌ ತಿಂಗಳಿನಲ್ಲಿ ಮಗನಿಗೆ ರ್‌್ಯಾಗಿಂಗ್‌ ಮಾಡಿದ್ದರು. ಈ ಬಗ್ಗೆ ಆತ ನಮ್ಮ ಬಳಿ ದೂರಿದ್ದ. ಈಗ ಅದೇ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿ ಮಗನನ್ನು ಕೊಲೆ ಮಾಡಿದೆ. ಆ ತಂಡದಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳೂ ಇದ್ದಾರೆ’ ಎಂದು ಅಹಬ್‌ ಪೋಷಕರು ಹೇಳಿದ್ದಾರೆ. ‘ರ್‌್ಯಾಗಿಂಗ್‌ ಸಂಬಂಧ ಬೆಂಗಳೂರು ಪೊಲೀಸರು ಜ.31ರಂದು ಮೌಖಿಕ ದೂರು ನೀಡಿದ್ದೆವು. ಆದರೆ, ಅವರು ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ’ ಎಂದು ಅವರು  ಆರೋಪಿಸಿದ್ದಾರೆ.

‘ಅಹಬ್‌, ಹಾಸ್ಟೆಲ್‌ನ ಸ್ನಾನದ ಕೋಣೆಯಲ್ಲಿ ನಿತ್ರಾಣನಾಗಿ ಬಿದ್ದಿದ್ದ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ. ಆದರೆ, ಹಿರಿಯ ವಿದ್ಯಾರ್ಥಿಗಳ ಪುಂಡಾಟಿಕೆಗೆ ಮಗ ಬಲಿಯಾಗಿದ್ದಾನೆ ಎಂದು ಅಹಬ್‌ ಪೋಷಕರು ಆರೋಪಿಸಿದ್ದಾರೆ. ಆ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಎರ್ನಾಕುಲಂ ಪೊಲೀಸರು ಹೇಳಿದ್ದಾರೆ.



‘ಅಹಬ್‌ 2012ರಲ್ಲಿ ಡಿಪ್ಲೊಮಾ ಕೋರ್ಸ್‌ಗೆ ಸೇರಿದ್ದ. ಆದರೆ, ಹಾಜರಾತಿ ಕೊರತೆಯ ಕಾರಣ  ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದ. ನಂತರ 2014ರ ಜ.16ರಂದು ಪುನಃ ಕಾಲೇಜಿಗೆ ಸೇರಿದ್ದ’ ಎಂದು ಆಚಾರ್ಯ ಪಾಲಿಟೆಕ್ನಿಕ್‌ ಕಾಲೇಜಿನ ನಿರ್ದೇಶಕ ಸಿಬಿಎಂ ಭೂಷಣ್‌ ತಿಳಿಸಿದರು.

‘ಎರಡನೇ ಬಾರಿಗೆ ಪ್ರವೇಶ ಪಡೆದ ನಂತರವೂ ಅಹಬ್‌ ತರಗತಿಗೆ ಹಾಜರಾಗುತ್ತಿರಲಿಲ್ಲ. ಹೀಗಾಗಿ ಆತನ ಬಗ್ಗೆ ಸಹಪಾಠಿಗಳ ಬಗ್ಗೆ ವಿಚಾರಿಸಿದಾಗ ಅಹಬ್‌  ನಗರದ ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿದ್ದರು. ನಂತರ ವಿಭಾಗದ ಮುಖ್ಯಸ್ಥರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಬಂದಿದ್ದರು.



ಜ.31ರಂದು ನಗರಕ್ಕೆ ಬಂದ ಆತನ ಪೋಷಕರು, ಹಿರಿಯ ವಿದ್ಯಾರ್ಥಿಗಳ ಕಿರುಕುಳದಿಂದ ಮಗ ಅಸ್ವಸ್ಥಗೊಂಡಿದ್ದಾನೆ ಎಂದು ದೂರಿದರು. ಕೂಡಲೇ ಈ ಬಗ್ಗೆ ಹಿರಿಯ ವಿದ್ಯಾರ್ಥಿಗಳಲ್ಲಿ ವಿಚಾರಿಸಿದೆವು. ಆದರೆ, ಯಾವುದೇ ಮಾಹಿತಿ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದೆವು’ ಎಂದು ಹೇಳಿದರು.

ಎಸಿಪಿ ನೇತೃತ್ವದ ತಂಡದಿಂದ ತನಿಖೆ

‘ಅಹಬ್‌, ಪೀಣ್ಯ ಠಾಣೆ ವ್ಯಾಪ್ತಿಯಲ್ಲಿರುವ ‘ವಾನ್ಸೆ–3’ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಅವರು ವ್ಯಾಸಂಗ ಮಾಡುತ್ತಿದ್ದ ಕಾಲೇಜು ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿದೆ. ಹೀಗಾಗಿ ಆ ಎರಡೂ ಠಾಣೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಯಶವಂತಪುರ ಉಪವಿಭಾಗದ ಎಸಿಪಿ ಕೆ.ಶೇಷಾದ್ರಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಬುಧವಾರ ಎರ್ನಾಕುಲಂ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.