ರ‌್ಯಾಕೆಟ್, ಪುಸ್ತಕ, ಬ್ಯಾಟ್ ನಡುವಿನ `ಪಂದ್ಯ'

7

ರ‌್ಯಾಕೆಟ್, ಪುಸ್ತಕ, ಬ್ಯಾಟ್ ನಡುವಿನ `ಪಂದ್ಯ'

Published:
Updated:

ದಾವಣಗೆರೆ: ಟೆನಿಸ್‌ಗಾಗಿ ನನ್ನ ಶಿಕ್ಷಣ ಕೊನೆಗೊಳಿಸಿದೆ. ಇದೀಗ ದೂರ ಶಿಕ್ಷಣ ಅಧ್ಯಯನ ಮಾಡುತ್ತಿದ್ದೇನೆ. ಆದರೆ, ಮತ್ತೆ ಪರೀಕ್ಷೆಗಳು ಬಂದಿವೆ. ಏನಿದ್ದರೂ ಕ್ರೀಡಾಪಟುವಿಗೆ ಒಂದಿಷ್ಟು ಮೂಲ ಶಿಕ್ಷಣ ಬೇಕು. ಒಂದೆರಡು ತಿಂಗಳ ಕಾಲ ಕ್ರೀಡಾ ಬದುಕಿನ ತ್ಯಾಗ ಅನಿವಾರ್ಯ.- ಇದು ನಗರದಲ್ಲಿ ನಡೆಯುತ್ತಿರುವ ಐಟಿಎಫ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಧಾನ ಪಂದ್ಯದಲ್ಲಿ ದಾವಣಗೆರೆಯ ಅಲೋಕ್ ಆರಾಧ್ಯ ಅವರನ್ನು ಮಣಿಸಿದ ಚೆನ್ನೈನ ನೀರಜ್ ಇಳಂಗೋವನ್ ಅವರ ಅಭಿಮತ.8ನೇ ತರಗತಿಯಲ್ಲಿದ್ದಾಗಲೇ ಶಾಲೆಗೆ ಶರಣುಹೊಡೆದೆ. ಪೂರ್ಣ ಪ್ರಮಾಣದಲ್ಲಿ ಟೆನಿಸ್‌ನಲ್ಲೇ ತೊಡಗಿದೆ. ಫರೀಜ್ ಅವರು ನನ್ನ ಕೋಚ್. ಕಳೆದ ವರ್ಷ ಸ್ಪೇನ್‌ಗೆ ಹೋಗಿ 2 ತಿಂಗಳು ತರಬೇತಿ ಪಡೆದಿದ್ದೆ. ಬೇಸಿಗೆಯಲ್ಲಿ ಚೆನ್ನೈನಲ್ಲಿ ಆಡುವುದು ಬಹಳ ಕಷ್ಟ. ಈ ಬಾರಿ ಎಫ್-20 ಪಂದ್ಯಗಳು ನಡೆಯುತ್ತಿರುವುದರಿಂದ ಇಲ್ಲಿಯೇ ಉಳಿಯಲು ನಿರ್ಧರಿಸಿದ್ದೇನೆ.ನನ್ನ ನೀಳ ಕಾಯ (6.2 ಅಡಿ) ಆಟದ ಸಂದರ್ಭದಲ್ಲಿ ಎಲ್ಲ ವೈಪರೀತ್ಯಗಳನ್ನು ನಿಭಾಯಿಸುತ್ತದೆ. ಅದು ದೇವರ ಕೊಡುಗೆ. ಇಂದಿನ ಪಂದ್ಯದಲ್ಲಿಯೂ ಉತ್ತಮವಾಗಿ ಆಡಿದೆ. ಬಹಳ ಕಾಲದ ನಂತರ ಆಡಿದ ಉತ್ತಮ ಪಂದ್ಯವಿದು ಎಂದು ಮನಸ್ಸುಬಿಚ್ಚಿದರು ಇಳಂಗೋವನ್.ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಪಂದ್ಯಗಳಿಂದ ದೂರ ಉಳಿದಿದ್ದೆ. ತೋಳಿಗೆ ಗಾಯವಾಗಿತ್ತು. ಅಕ್ಟೋಬರ್‌ನಲ್ಲಿ ಮುಂಬೈ ಹಾಗೂ ಪುಣೆಯಲ್ಲಿ ನಡೆದ ಫ್ಯೂಚರ್ ಪಂದ್ಯಗಳಲ್ಲಿ, ದೆಹಲಿಯಲ್ಲಿ ನಡೆದ 18ರ ವಯೋಮಿತಿಯ ರಾಷ್ಟ್ರಮಟ್ಟದ ಕಿರಿಯರ ಪಂದ್ಯದಲ್ಲಿ ಪಾಲ್ಗೊಂಡಿದ್ದೆ ಎಂದರು.ಕ್ರಿಕೆಟ್‌ನಿಂದ ಟೆನಿಸ್‌ಗೆ

ಶಶಿಕುಮಾರ್ ಮುಕುಂದ್ ಅವರನ್ನು ಮಣಿಸಿದ ಸಿಕಂದರಾಬಾದ್‌ನ ಅಶ್ವಿನ್ ವಿಜಯರಾಘವನ್ ಹೇಳಿದ್ದು ಹೀಗೆ, ಟೆನಿಸ್ ಹವ್ಯಾಸಕ್ಕಾಗಿ ಆಡುತ್ತಿದ್ದೆ. ಬಳಿಕ ಯಾಕೋ ಕ್ರಿಕೆಟ್‌ನತ್ತ ಆಸಕ್ತಿ ಬಂದಿತು. ಅಂತರ್‌ರಾಜ್ಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ್ದೆ.ಕೊನೆಗೆ ಅದು ಬೋರ್ ಅನಿಸಿತು. ಮತ್ತೆ 2003ರಲ್ಲಿ ಟೆನಿಸ್ ರ‌್ಯಾಕೆಟ್ ಹಿಡಿದೆ. ಅದು ಕೈಹಿಡಿಯಿತು. ಹೆತ್ತವರ ಪ್ರೋತ್ಸಾಹದಿಂದ 16, 18ರ ವಯೋಮಿತಿಯ ಪಂದ್ಯಗಳನ್ನು ಆಡಿದೆ. 2008ರಲ್ಲಿ ಬಿಬಿಎ ಓದಲು ಅಮೆರಿಕಕ್ಕೆ ತೆರಳಿದೆ. ಅಲ್ಲಿನ ವಿದ್ಯಾರ್ಥಿವೇತನ ನನ್ನ ಕ್ರೀಡಾಬದುಕಿಗೆ ಸಹಕರಿಸಿತು. ಇದೀಗ ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿ ಮುಗಿಸಿದ್ದೇನೆ. ಮುಂದಿನ ಎರಡು ವರ್ಷ ಟೆನಿಸ್‌ಗೆ ಮೀಸಲು. ಮನಸ್ಸು ಮಾಡಿದ್ದರೆ ಅಮೆರಿಕದಲ್ಲೇ ನೆಲೆಸಬಹುದಿತ್ತು. ನಾನೊಬ್ಬ ಭಾರತೀಯ. ಯಾವತ್ತೂ ನನ್ನ ದೇಶವನ್ನೇ ಪ್ರತಿನಿಧಿಸುತ್ತೇನೆ ಎಂದರು.ಅಶ್ವಿನ್ ಅವರ ತಂದೆ 1978ರಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಟಿ.ವಿ. ವಿಜಯರಾಘವನ್. ಅದೇ ವರ್ಷ ಬ್ಯಾಸ್ಕೆಟ್‌ಬಾಲ್‌ನ ಭಾರತ ತಂಡದ ನಾಯಕರಾಗಿ ಒಲಿಂಪಿಕ್ ಪಂದ್ಯಗಳಲ್ಲಿ ಭಾಗವಹಿಸಿದ್ದರು. ಅಶ್ವಿನ್ ಹುಟ್ಟಿದ್ದು ಕತಾರ್‌ನಲ್ಲಿ (1989). 1999ರಲ್ಲಿ ಅವರ ಕುಟುಂಬ ಭಾರತಕ್ಕೆ ವಾಪಸಾಯಿತು. ಹಿರಿಯ ಸಹೋದರ ಅರ್ಜುನ್ 2001-02ರಲ್ಲಿ ಟೆನಿಸ್‌ನಲ್ಲಿ ರಾಷ್ಟ್ರಮಟ್ಟದ 10ನೇ ಶ್ರೇಯಾಂಕದ ಆಟಗಾರರಾಗಿದ್ದರು.ಜೀವನ್ ನೆಡುಂಚೆಳಿಯನ್ ಹೇಳುವಂತೆ, ವಿದೇಶದಲ್ಲಿ ಅತ್ಯಂತ ವೃತ್ತಿಪರ, ವ್ಯವಸ್ಥಿತ ತರಬೇತಿ ಸಿಗುತ್ತಿದೆ. ಕಳೆದ ಒಂದು ವರ್ಷದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ತರಬೇತಿ ಪಡೆದೆ. ಇಂದಿನ ಗೆಲುವಿಗೆ ಅದು ನೆರವಾಯಿತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry