ರ‌್ಯಾಲಿ: ರಾಣಾ ಚಾಂಪಿಯನ್

7

ರ‌್ಯಾಲಿ: ರಾಣಾ ಚಾಂಪಿಯನ್

Published:
Updated:

ಅಹ್ಮದಾಬಾದ್: ಕಾಂಡ್ಲಾದ ಕಡಲ ಕಿನಾರೆ ಮೇಲಿರುವ ಸೀಕ್ರಾ ಗ್ರಾಮದ ಉಪ್ಪಿನ ಗದ್ದೆಗಳ ಸುತ್ತ ದೂಳಿನ ಮೋಡಗಳನ್ನು ಸೃಷ್ಟಿಸುತ್ತಾ ತಮ್ಮ ಜಿಪ್ಸಿ ಓಡಿಸಿದ ಥಂಡರ್ ಬೋಲ್ಟ್ ತಂಡದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್, ನಿರೀಕ್ಷೆಯಂತೆ ಶನಿವಾರ `ಡಸರ್ಟ್ ಸ್ಟಾರ್ಮ್~ ರ‌್ಯಾಲಿ         ಎಕ್ಸ್‌ಟ್ರೀಮ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.ಮಾರುತಿ ಸುಜುಕಿ ಸಹಯೋಗದಲ್ಲಿ ನಾದರ್ನ್ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆ ಏರ್ಪಡಿಸಿದ್ದ 3500 ಕಿ.ಮೀ. ಉದ್ದದ ಈ ಮೋಟಾರ್ ರ‌್ಯಾಲಿ, ತನ್ನ ಐದು ದಿನಗಳ ಯಾತ್ರೆಯಲ್ಲಿ ರಾಜಸ್ತಾನದ ಮರಭೂಮಿಯಿಂದ ಗುಜರಾತಿನ ಲವಣ ಭೂಮಿವರೆಗೆ ಬಿರುಗಾಳಿಯನ್ನೇ ಎಬ್ಬಿಸಿ ಮಿಂಚಿನ ಸಂಚಲನ ಉಂಟುಮಾಡಿತು.ರಾಜಸ್ತಾನದ ಸರ್ದಾರ್‌ಶಹರ್‌ನಲ್ಲಿ ಮಂಗಳವಾರದ ನಸುಕಿನಲ್ಲಿ ಶುರುವಾಗಿದ್ದ ರ‌್ಯಾಲಿ, ಶನಿವಾರ ಮಧ್ಯಾಹ್ನ ಅಹ್ಮದಾಬಾದ್‌ನಲ್ಲಿ ಮುಕ್ತಾಯಗೊಂಡಿತು.ಗೌರವ್ ಚಿರಿಪಾಲ್-ನಿಖಿಲ್ ಪೈ ಜೋಡಿ ಎರಡನೇ ಸ್ಥಾನ ಗೆದ್ದುಕೊಂಡರೆ, ಆರಂಭಿಕ ಹಿನ್ನಡೆಯಿಂದ ಹೊರಬಂದು ಅಗ್ರಸ್ಥಾನದಲ್ಲಿದ್ದ ಚಾಲಕರಿಗೆ ತೀವ್ರ ಪೈಪೋಟಿ ಒಡ್ಡಿದ್ದ ಮೈಸೂರಿನ ಲೋಹಿತ್ ಅರಸ್-ಪಿವಿಎಸ್ ಮೂರ್ತಿ ಜೋಡಿ ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂತಿಮ ದಿನದವರೆಗೆ ಮೂರನೇ ಸ್ಥಾನದಲ್ಲಿದ್ದ ಪರ್‌ಫೆಕ್ಟ್ ರ‌್ಯಾಲಿ ತಂಡದ ಅಭಿಷೇಕ್ ಮಿಶ್ರಾ-ಹನುಮಂತ್ ಸಿಂಗ್ ಜೋಡಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.ಮನಾಲಿಯ ರಾಣಾ ಮತ್ತು ಮಂಗಳೂರಿನ ನಾಯಕ್ ಜೋಡಿ ಮಾರುತಿ ಸುಜುಕಿ ರ‌್ಯಾಲಿಯಲ್ಲಿ ಎಂಟನೇ ಸಲ (ಡಸರ್ಟ್ ರ‌್ಯಾಲಿಯಲ್ಲಿ ಎರಡನೆಯದು) ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿತು. `ಪ್ರಶಸ್ತಿ ಗೆಲ್ಲುವುದು ನಮಗೊಂದು ಅಭ್ಯಾಸವಾಗಿದ್ದು, ಈ ಪಟ್ಟಿಗೆ ಈಗ ಮತ್ತೊಂದು ದಾಖಲಾಗಿರುವುದು ಸಂತಸ ತಂದಿದೆ.

 

ರ‌್ಯಾಲಿ ಬಹುತೇಕ ಹಾದಿ ಕಠಿಣವಾಗಿತ್ತು. ಒಂದೆರೆಡು ಸಲ ನಮ್ಮ ವಾಹನದ ಭಾಗಗಳು ಮುರಿದು ಕಿರಿಕಿರಿಯಾಯಿತು. ಎಲ್ಲ ಸವಾಲುಗಳನ್ನು ಮೀರಿನಿಂತ ಖುಷಿ ನಮ್ಮಲ್ಲಿದೆ~ ಎಂದು ರಾಣಾ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.`ಮತ್ತೊಂದು ಮಹತ್ವದ ಪ್ರಶಸ್ತಿ ನಮ್ಮದಾಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿಯೇ ನಾವು ರ‌್ಯಾಲಿಗೆ ಧುಮುಕಿದ್ದೆವು. ಎಲ್ಲವೂ ಅಂದುಕೊಂಡಂತೆಯೇ ನಡೆದಿದೆ. ಪ್ರಶಸ್ತಿ ಗೆದ್ದ ಕಾರಿನ ಎಡಬದಿ ಸೀಟಿನಲ್ಲಿ ನಾನಿದ್ದೆ ಎಂಬ ಹರ್ಷ ಮನಸ್ಸನ್ನು ತುಂಬಿದೆ~ ಎಂದು ಅಶ್ವಿನ್ ಆನಂದದಿಂದ ಹೇಳಿದರು.ಸ್ಪರ್ಧೆಯ ಆರಂಭದ ದಿನದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ರಾಣಾ, ಕೊನೆಯವರೆಗೂ ಆ ಸ್ಥಾನವನ್ನು  ಕಾಯ್ದುಕೊಂಡರು. ತಮ್ಮ ಸಮೀಪದ ಎದುರಾಳಿಗಿಂತ 36 ನಿಮಿಷಗಳ ಮುನ್ನಡೆಯನ್ನು ಶುಕ್ರವಾರ ಸಾಧಿಸಿದಾಗಲೇ ಅವರು ಪ್ರಶಸ್ತಿ ಗೆಲ್ಲುವುದು ಖಚಿತವಾಗಿತ್ತು. ಆದ್ದರಿಂದಲೇ ರಾಣಾ ರ‌್ಯಾಲಿಯ ಕೊನೆಯ ದಿನ ಯಾವುದೇ ಒತ್ತಡವಿಲ್ಲದೆ ಜಿಪ್ಸಿ ಓಡಿಸಿದರು.ರಾಣಾ ಮನಾಲಿಯಲ್ಲಿ ಗ್ಯಾರೇಜ್ ನಡೆಸುತ್ತಿದ್ದರೆ, ಅಶ್ವಿನ್ ಮಂಗಳೂರಿನಲ್ಲಿ ಐಟಿ ಕಂಪೆನಿ ಹೊಂದಿದ್ದಾರೆ. ಹಲವು ರ‌್ಯಾಲಿಗಳಲ್ಲಿ ಈ ಜೋಡಿ ಯಶಸ್ಸಿನ ಸವಿ ಉಂಡಿದೆ.ಉಪ್ಪಿನ ಗದ್ದೆಗಳ ಸುತ್ತ 75 ಕಿ.ಮೀ. ಉದ್ದದ ಪ್ರದಕ್ಷಿಣೆ ಹಾಕಿದ ಬಳಿಕ ವಾಹನಗಳು ಗುಜರಾತ್ ರಾಜಧಾನಿ ಕಡೆಗೆ ಪಯಣ ಬೆಳೆಸಿದವು. ಕೊನೆಯ ಲೆಗ್ ಒಟ್ಟಾರೆ 360 ಕಿ.ಮೀ. ಉದ್ದದ ಯಾತ್ರೆಯನ್ನು ಒಳಗೊಂಡಿತ್ತು. ಬಿಕಾನೇರ್, ಜೈಸಲ್ಮೇರ್, ಪೋಖ್ರಾನ್, ಕಚ್ ಮತ್ತು ಭುಜ್‌ನಂತಹ ಅಪರೂಪದ ತಾಣಗಳನ್ನು ರ‌್ಯಾಲಿ ತನ್ನ ಪಯಣದ ಹಾದಿಯಲ್ಲಿ ಸಂದರ್ಶಿಸಿತು.ಅಹ್ಮದಾಬಾದ್‌ನಲ್ಲಿ ಶನಿವಾರ ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಮಾರುತಿ ಸುಜುಕಿ ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ) `ಸಂಸ್ಥೆಯು ತನ್ನ ಉತ್ಪಾದನೆ ಕುರಿತಂತೆ ಜನಮತ ಸಂಗ್ರಹಿಸಲು ಇಂತಹ ರ‌್ಯಾಲಿಗಳು ಪ್ರಯೋಜನ ಆಗಲಿದ್ದು, ಹೊಸ ವಿನ್ಯಾಸ ರೂಪಿಸಲು ಪ್ರೇರಣೆ ಸಿಗುತ್ತದೆ~ ಎಂದು ರ‌್ಯಾಲಿ ಉದ್ದೇಶವನ್ನು ಹಂಚಿಕೊಂಡರು.ಫಲಿತಾಂಶ: ಎಕ್ಸ್‌ಟ್ರೀಮ್ ವಿಭಾಗ: ಸುರೇಶ್ ರಾಣಾ-ಅಶ್ವಿನ್ ನಾಯಕ್-1, ಗೌರವ್ ಚಿರಿಪಾಲ್-ನಿತಿನ್ ಪೈ-2, ಲೋಹಿತ್ ಅರಸ್-ಪಿವಿಎಸ್ ಮೂರ್ತಿ-3, ಅಭಿಷೇಕ್ ಮಿಶ್ರಾ-ಹನುಮಂತ್ ಸಿಂಗ್-4, ಹರಪ್ರೀತ್ ಸಿಂಗ್ ಬಾವಾ-ಪರ್ಮಿಂದರ್ ಸಿಂಗ್-5, ಕಾಲ: 11.28:55 ಗಂಟೆ.ಮೋಟೋಕ್ವಾಡ್: ರಾಜ್‌ಸಿಂಗ್ ರಾಠೋಡ್-1, ಆರ್.ನಟರಾಜ್-2, ಪ್ರಮೋದ್ ಜೋಸುವಾ-3, ವೀರೇಂದ್ರ ವಘೇಲಾ-4, ಕೌಸ್ತುಭ್ ಎಂ-5, ಕಾಲ: 10.37:17 ಗಂಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry