ಲಂಕಾಕ್ಕೆ ಕಠಿಣ ಸವಾಲು

7

ಲಂಕಾಕ್ಕೆ ಕಠಿಣ ಸವಾಲು

Published:
Updated:

ಪರ್ತ್: ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಎದುರು ನಿರಾಸೆ ಅನುಭವಿಸಿದ್ದ ಶ್ರೀಲಂಕಾ ತಂಡಕ್ಕೆ ಮತ್ತೊಂದು ಕಠಿಣ ಸವಾಲು ಎದುರಾಗಿದೆ. ಅದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ.

ಶುಕ್ರವಾರ ನಡೆಯುವ ಪಂದ್ಯದಲ್ಲಿ ಮಾಹೇಲ ಜಯವರ್ಧನೆ ಬಳಗ ಆತಿಥೇಯರ ಸವಾಲನ್ನು ಎದುರಿಸಲಿದೆ. ಬುಧವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಲಂಕಾ, ಭಾರತದ ಎದುರು 4 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಆಸೀಸ್ ಮೊದಲ ಪಂದ್ಯದಲ್ಲಿ ಭಾರತವನ್ನು ಮಣಿಸಿತ್ತು.ಲಂಕಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯುವ ಕನಸಿನೊಂದಿಗೆ ಶುಕ್ರವಾರ ಕಣಕ್ಕಿಳಿಯಲಿದೆ. ಆದರೆ ಬಲಿಷ್ಠ ಆಸ್ಟ್ರೇಲಿಯಾ ಎದುರು ಗೆಲುವು ಪಡೆಯಬೇಕಾದರೆ ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ.

ಭಾರತ ವಿರುದ್ಧದ ಪಂದ್ಯದಲ್ಲಿ ದಿನೇಶ್ ಚಂಡಿಮಾಲ ಮತ್ತು ತಿಲಕರತ್ನೆ ದಿಲ್ಶಾನ್ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಅಗ್ರಕ್ರಮಾಂಕದ ಆಟಗಾರರು ಫಾರ್ಮ್ ಕಂಡುಕೊಳ್ಳುವುದು ಅಗತ್ಯ. ಉಪುಲ್ ತರಂಗ ಮತ್ತು ಕುಮಾರ ಸಂಗಕ್ಕಾರ ಎಂದಿನ ಲಯದಲ್ಲಿ ಬ್ಯಾಟ್ ಬೀಸಿದರೆ ತಂಡಕ್ಕೆ ಗೆಲುವಿನ ಕನಸು ಕಾಣಬಹುದು.ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರಿಂದ ಲಂಕಾ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಕಳೆದ ಸಲ ಲಂಕಾ ತಂಡ ಆಸೀಸ್ ಪ್ರವಾಸ ಮಾಡಿದ್ದ ಸಂದರ್ಭ ಮ್ಯಾಥ್ಯೂಸ್ ಪ್ರಭಾವಿ ಪ್ರದರ್ಶನ ನೀಡಿದ್ದರು. ಅದೇ ರೀತಿಭಾರತ ವಿರುದ್ಧದ ಪಂದ್ಯದಲ್ಲಿ ಅಜೇಯ 33 ರನ್ ಗಳಿಸಿದ್ದಲ್ಲದೆ, 31 ರನ್‌ಗಳಿಗೆ ಎರಡು ವಿಕೆಟ್ ಪಡೆದಿದ್ದಾರೆ. ಈ ಆಟಗಾರನನ್ನು ನಿಯಂತ್ರಿಸಲು ಆಸೀಸ್ ತಕ್ಕ ಯೋಜನೆ ರೂಪಿಸಿರುವ ಸಾಧ್ಯತೆಯಿದೆ.ಪರ್ತ್ ಕ್ರೀಡಾಂಗಣದ ಪಿಚ್ ಆಸ್ಟ್ರೇಲಿಯಾ ಬೌಲರ್‌ಗಳಿಗೆ ನೆರವು ನೀಡುವುದು ಖಚಿತ. ಈ ಕಾರಣ ಜಯವರ್ಧನೆ ಬಳಗದ ಬ್ಯಾಟ್ಸ್‌ಮನ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ. ಮಿಷೆಲ್ ಸ್ಟಾರ್ಕ್ ಮತ್ತು ರ‌್ಯಾನ್ ಹ್ಯಾರಿಸ್ ವೇಗದ ಬೌಲಿಂಗ್ ದಾಳಿಯನ್ನು ಹೇಗೆ ಮೆಟ್ಟಿನಿಲ್ಲುವರು ಎಂಬುದನ್ನು ನೋಡಬೇಕು. ಬ್ರೆಟ್ ಲೀ ಅನುಪಸ್ಥಿತಿ ಆಸೀಸ್ ತಂಡವನ್ನು ಕಾಡದಂತೆ ನೋಡಿಕೊಳ್ಳಲು ಯುವ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.ಮೈಕಲ್ ಕ್ಲಾರ್ಕ್ ಬಳಗ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.  ಪೀಟರ್ ಫಾರೆಸ್ಟ್ ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ತಂಡದ ಆಡಳಿತ ಅಂತಹ ಸೂಚನೆ ನೀಡಿದೆ.ಅಂತಿಮ ಹನ್ನೊಂದರಲ್ಲಿ ಅವರಿಗೆ ಸ್ಥಾನ ನೀಡಲು ಯಾರನ್ನು ಕೈಬಿಡಲಾಗುತ್ತದೆ ಎಂಬುದು ಖಚಿತವಾಗಿಲ್ಲ. ವಾರ್ನರ್ ಅಥವಾ ಡೇವಿಡ್ ಹಸ್ಸಿ ಇವರಲ್ಲೊಬ್ಬರಿಗೆ ವಿಶ್ರಾಂತಿ ನೀಡಬಹುದು. `ರೊಟೇಷನ್ ಪದ್ಧತಿ~ಯಂತೆ ಆಸೀಸ್ ತಂಡದ ಆಡಳಿತ ಹಿರಿಯ ಆಟಗಾರರಾದ ಪಾಂಟಿಂಗ್ ಅಥವಾ ಮೈಕ್ ಹಸ್ಸಿ ಅವರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ.ಪಂದ್ಯ ಆರಂಭ: ಭಾರತೀಯ ಕಾಲಮಾನ ಬೆಳಿಗ್ಗೆ 9.50ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry