ಗುರುವಾರ , ಜೂಲೈ 2, 2020
28 °C

ಲಂಕಾದ ತಿಲಕರತ್ನೆ ದಿಲ್ಶಾನ್ ಮೆರೆದಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಕಾದ ತಿಲಕರತ್ನೆ ದಿಲ್ಶಾನ್ ಮೆರೆದಾಟ!

ಕ್ಯಾಂಡಿ: ತಿಲಕರತ್ನೆ ದಿಲ್ಶಾನ್ ಅವರದ್ದು ಅದ್ಭುತ ಆಲ್‌ರೌಂಡ್ ಪ್ರದರ್ಶನ. ಮೊದಲು ಬ್ಯಾಟಿಂಗ್‌ನಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಅಬ್ಬರಿಸಿದ್ದ ಅವರು ಬೌಲಿಂಗ್‌ನಲ್ಲೂ 4 ವಿಕೆಟ್ ಕಬಳಿಸಿ ಜಿಂಬಾಬ್ವೆ ತಂಡವನ್ನು ಕಾಡಿದರು. ಪರಿಣಾಮ ಶ್ರೀಲಂಕಾ ತಂಡದವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನಿಂದ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.ಜಿಂಬಾಬ್ವೆ ತಂಡವು ಗುರುವಾರ ದಿಲ್ಶಾನ್ ಹಾಗೂ ಉಪುಲ್ ತರಂಗ ಮೊದಲ ವಿಕೆಟ್‌ಗೆ ಸೇರಿಸಿದ ರನ್‌ಗಳ ಪರ್ವತ ನೋಡಿಯೇ ಅರ್ಧ ನಡುಗಿ ಹೋಯಿತು. ಲಂಕಾದ 327 ರನ್‌ಗಳಿಗೆ ಉತ್ತರವಾಗಿ ಎಲ್ಟಾನ್ ಚಿಗುಂಬರಾ ಪಡೆ ಪೋಣಿಸಿದ್ದು ಕೇವಲ 188. ಇದು ಆತಿಥೇಯ ಲಂಕಾಕ್ಕೆ 139 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿತು.ಕುಮಾರ ಸಂಗಕ್ಕಾರ ಪಡೆ ಐದು ಪಂದ್ಯಗಳಿಂದ ಈಗ ಏಳು ಪಾಯಿಂಟ್ ಹೊಂದಿದ್ದು ಅಗ್ರಸ್ಥಾನದಲ್ಲಿದೆ.ಆದರೆ ಉಪುಲ್ ತರಂಗ ಹಾಗೂ ದಿಲ್ಶಾನ್ ಕೊಂಚದರಲ್ಲಿ ವಿಶ್ವದಾಖಲೆಯೊಂದನ್ನು ತಪ್ಪಿಸಿಕೊಂಡರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 282 (268 ಎಸೆತ) ರನ್ ಸೇರಿಸಿದರು. ತರಂಗ ಹಾಗೂ ಸನತ್ ಜಯಸೂರ್ಯ ಇಂಗ್ಲೆಂಡ್ ವಿರುದ್ಧ 2006ರಲ್ಲಿ ಲೀಡ್ಸ್‌ನಲ್ಲಿ 286 ರನ್ ಸೇರಿಸಿದ್ದು ಮೊದಲ ವಿಕೆಟ್‌ಗೆ ಇರುವ ವಿಶ್ವದಾಖಲೆ ಜೊತೆಯಾಟ. ತರಂಗ ಅವರಿಗೆ ನಿರಾಸೆ ಏನೂ ಆಗಲಿಲ್ಲ!ಸಚಿನ್ ಹಾಗೂ ದ್ರಾವಿಡ್ 1999ರಲ್ಲಿ ನ್ಯೂಜಿಲೆಂಡ್ ಎದುರು ಹೈದರಾಬಾದ್‌ನಲ್ಲಿ ಎರಡನೇ ವಿಕೆಟ್‌ಗೆ 331 ರನ್ ಸೇರಿಸಿದ್ದು ಯಾವುದೇ ವಿಕೆಟ್‌ಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟವಾಗಿದೆ.ಆದರೆ ತರಂಗ (133; 141 ಎಸೆತ, 17 ಬೌಂಡರಿ) ಹಾಗೂ ದಿಲ್ಶಾನ್ (144; 131 ಎಸೆತ, 16 ಬೌಂ, 1 ಸಿಕ್ಸ್) ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲೆಯ ಜೊತೆಯಾಟಕ್ಕೆ ಕಾರಣರಾದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.