ಶನಿವಾರ, ಜೂನ್ 19, 2021
21 °C

ಲಂಕಾ ಅಧ್ಯಕ್ಷರ ವಿರುದ್ಧ ತಮಿಳರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಲಂಕಾದ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ನಡೆಸಿರುವ ತಮಿಳರ ನರಮೇಧವನ್ನು ಜನಾಂಗೀಯ ನಿರ್ಮೂಲನಾ ಯುದ್ಧ ಅಪರಾಧಿ ಎಂದು ಘೋಷಿಸಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ನಗರದ ಪುರಭವನದ ಮುಂದೆ ಸೋಮವಾರ ವಿವಿಧ ತಮಿಳು ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಶ್ರೀಲಂಕಾದಲ್ಲಿ ನಡೆದ ತಮಿಳು ಈಳಂ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಅಮಾನುಷ ದಾಳಿ ನಡೆಸಿರುವ ಅಲ್ಲಿನ ಸೇನೆಯು ಸುಮಾರು ಮೂರು ಲಕ್ಷ ಜನ ತಮಿಳರನ್ನು ಕೊಂದಿದೆ. ಹತ್ತು ಲಕ್ಷ ಜನರು ಈ ಯುದ್ಧದಿಂದ ನಿರಾಶ್ರಿತರಾಗಿದ್ದಾರೆ. ಆದರೆ ಅಲ್ಲಿನ ಆಡಳಿತ ಈ ವಿಚಾರವು ಜಗತ್ತಿನ ಗಮನಕ್ಕೆ ಬಾರದಂತೆ ನೋಡಿಕೊಂಡಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ವಿಶ್ವಸಂಸ್ಥೆ ನೇಮಿಸಿದ್ದ ಮಾನವ ಹಕ್ಕುಗಳ ಸಮಿತಿ ಕೂಡಾ ತಮಿಳರ ಹತ್ಯೆಗಳು ನಡೆದಿರುವುದು ನಿಜ ಎಂದು ವರದಿಯಲ್ಲಿ ತಿಳಿಸಿದೆ. ಹೀಗಾಗಿ ವಿಶ್ವಸಂಸ್ಥೆಯು ಶ್ರೀಲಂಕಾದ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಭಾರತ ಸರ್ಕಾರವೂ ಈ ವಿಷಯದಲ್ಲಿ ವಿಶ್ವಸಂಸ್ಥೆಯ ಮೇಲೆ ಒತ್ತಡ ತರಬೇಕು ಎಂದು ತಮಿಳು ಸಂಘಟನೆಗಳ ಸದಸ್ಯರು ಒತ್ತಾಯಿಸಿದರು.

ಕರ್ನಾಟಕ ತಮಿಳು ಮಕ್ಕಳ್ ಇಯಕ್ಕಂ ಅಧ್ಯಕ್ಷ ಪಿ.ರಾಜನ್, ತಮಿಳರ್ ಸೇನೆಯ ಅಧ್ಯಕ್ಷ ತಮಿಳ್ ಅಡಿಯಾನ್, ಪೆರಿಯಾರ್ ದ್ರಾವಿಡರ್ ಕಳಗಂ ಅಧ್ಯಕ್ಷ ಪಳನಿ ಸೇರಿದಂತೆ  ಇನ್ನಿತರ ಅನೇಕ ತಮಿಳು ಸಂಘಟನೆಗಳು  ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.