ಭಾನುವಾರ, ಮೇ 16, 2021
28 °C
ಚಾಂಪಿಯನ್ಸ್ ಟ್ರೋಫಿ: ವ್ಯರ್ಥವಾದ ಸಂಗಕ್ಕಾರ ಆಟ, ಮಿಂಚಿದ ಮೆಕ್ಲಮ್

ಲಂಕಾ ಎದುರು ಗೆದ್ದ ಕಿವೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್ (ಪಿಟಿಐ): ಅಲ್ಪ ಮೊತ್ತದ ಗುರಿಯಿದ್ದರೂ ಅದನ್ನು ತಲುಪಲು ನ್ಯೂಜಿಲೆಂಡ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಶ್ರೀಲಂಕಾ ತಂಡದ ಬೌಲಿಂಗ್ ಸವಾಲನ್ನು ಪ್ರಯಾಸದಿಂದ ಎದುರಿಸಿದ ಕಿವೀಸ್ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಒಂದು ವಿಕೆಟ್‌ನಿಂದ ಜಯ ಪಡೆಯಿತು.ಸೊಫಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಮೊದಲು ಬ್ಯಾಟ್ ಮಾಡಿ 37.5 ಓವರ್‌ಗಳಲ್ಲಿ 138 ರನ್ ಕಲೆ ಹಾಕಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಾಧಾರಣ ಮೊತ್ತದ ಗುರಿ ಮುಟ್ಟಲು ಪರದಾಡಿದ ಬ್ರೆಂಡನ್ ಮೆಕ್ಲಮ್ ನೇತೃತ್ವದ ಕಿವೀಸ್ 36.3 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.ಲಂಕಾ ಪರದಾಟ: ಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕುಶಾಲ್ ಪೆರೇರಾ `ಸೊನ್ನೆ' ಸುತ್ತಿ ಮೊದಲ ಓವರ್‌ನ ಪ್ರಥಮ ಎಸೆತದಲ್ಲಿ ಪೆವಿಲಿಯನ್ ಹಾದಿ ಹಿಡಿದರು. ಆದರೆ, ಕುಮಾರ ಸಂಗಕ್ಕಾರ (68, 87ಎಸೆತ, 8ಬೌಂಡರಿ) ತಂಡಕ್ಕೆ ನೆರವಾದರು. 161 ನಿಮಿಷ ಕ್ರೀಸ್‌ನಲ್ಲಿದ್ದು ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದರಾದರೂ, ಇನ್ನೊಂದು ಬದಿಯ ಬ್ಯಾಟ್ಸ್‌ಮನ್‌ಗಳು ನೆರವಾಗಲಿಲ್ಲ. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಮಾಹೇಲ ಜಯವರ್ಧನೆ (4), ದಿನೇಶ್ ಚಾಂಡಿಮಾಲ್ (0), ನಾಯಕ ಏಂಜಲೊ ಮ್ಯಾಥ್ಯುಸ್ (9) ಮತ್ತು ಲಾಹಿರು ತಿರುಮನ್ನೆ (9) ಎರಡಂಕಿಯ ಮೊತ್ತ ಮುಟ್ಟಲಿಲ್ಲನ್ಯೂಜಿಲೆಂಡ್ ತಂಡದ ಮಿಷೆನ್ ಮೆಕ್ಲ್‌ನಗಾನ್ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಉರುಳಿಸಿ ಲಂಕಾ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಕೇಲ್ ಮಿಲ್ಸ್ (14ಕ್ಕೆ2) ಇದಕ್ಕೆ ನೆರವಾದರು.ಕಿವೀಸ್ ಪ್ರಯಾಸ: ಗೆಲುವಿಗೆ ಅಲ್ಪ ಮೊತ್ತದ ಗುರಿಯಿದ್ದರೂ ಕಿವೀಸ್ ಭಾರಿ ಸಂಕಷ್ಟ ಅನುಭವಿಸಿತು. ರಾಸ್ ಟೇಲರ್ ಮತ್ತು ಜೇಮ್ಸ ಫ್ರಾಂಕ್ಲಿನ್ ಬೇಗನೇ ಔಟ್ ಆಗಿದ್ದರಿಂದ ನ್ಯೂಜಿಲೆಂಡ್ ಪರದಾಡಿತು. ಲಂಕಾದ ವೇಗಿ ಲಸಿತ್ ಮಾಲಿಂಗ ಹತ್ತು ಓವರ್‌ಗಳಲ್ಲಿ 34 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಆದರೆ, ಕೊನೆಯಲ್ಲಿ ನಥಾನ್ ಮೆಕ್ಲಮ್ (32, 42ಎಸೆತ, 3ಬೌಂಡರಿ) ಜವಾಬ್ದಾರಿಯುತ ಆಟವಾಡಿ ತಂಡವನ್ನು ಸೋಲಿನ ಸಂಕಷ್ಟದಿಂದ ಪಾರು ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.