ಲಂಕಾ-ಪಾಕ್: ಯಾರು ಬಲಶಾಲಿ?

7

ಲಂಕಾ-ಪಾಕ್: ಯಾರು ಬಲಶಾಲಿ?

Published:
Updated:

ಕೊಲಂಬೊ: ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಬಗ್ಗುಬಡಿದಿರುವ ಪಾಕಿಸ್ತಾನ ಬಳಗ ಈಗ ವಿಶ್ವಾಸದ ಖನಿ. ಆದರೆ ಮುಂದಿನ ಪಂದ್ಯದಲ್ಲಿ ಇವರಿಗೆ ಎದುರಾಗುತ್ತಿರುವುದು ಆತಿಥೇಯ ತಂಡ ಶ್ರೀಲಂಕಾ.ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಲಂಕಾ ಹಾಗೂ ಪಾಕ್ ಮುಖಾಮುಖಿಯಾಗುತ್ತಿವೆ. ಆದರೆ ಸಿಂಹಳೀಯ ಪಡೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.ಏಕೆಂದರೆ ಇಂಗ್ಲೆಂಡ್‌ನಲ್ಲಿ 2009ರಲ್ಲಿ ನಡೆದ ಚುಟುಕು ವಿಶ್ವಕಪ್ ಫೈನಲ್‌ನಲ್ಲಿ ಲಂಕಾ ತಂಡವನ್ನು ಬಗ್ಗುಬಡಿದಿದ್ದ ಪಾಕ್ ಚಾಂಪಿಯನ್ ಆಗಿತ್ತು. ಆ ಸೋಲಿನ ನೋವು ಈ ಆಟಗಾರರ ಎದೆಯಲ್ಲಿ ಇನ್ನೂ ಹಾಗೇ ಇದೆ. ಈ ಟೂರ್ನಿಯಲ್ಲಿ ಶ್ರೀಲಂಕಾ ಸ್ಥಿರ ಪ್ರದರ್ಶನ ತೋರುತ್ತಿದೆ. ಇದಕ್ಕೆ ಸಾಕ್ಷಿ `ಸೂಪರ್ 8~ ಹಂತದಲ್ಲಿ ಗೆದ್ದ ಮೂರು ಪಂದ್ಯಗಳೇ ಸಾಕ್ಷಿ. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಗಮನಾರ್ಹ ಆಟ ತೋರುತ್ತಿದ್ದಾರೆ.

ಆದರೆ ತನ್ನ ಪಾಲಿನ ಓವರ್‌ಗಳನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಂಡ ಕಾರಣ ನಿಷೇಧದ ಭೀತಿಯನ್ನು ಈ ತಂಡದ ನಾಯಕ ಮಾಹೇಲ ಜಯವರ್ಧನೆ ಎದುರಿಸುತ್ತಿದ್ದಾರೆ.

 

ಒಮ್ಮೆ ಎಚ್ಚರಿಕೆ ಪಡೆದಿರುವ ಅವರು ಮತ್ತೆ ಈ ಘಟನೆ ಪುನರಾವರ್ತಿಸಿದರೆ ಕೆಲ ಪಂದ್ಯಗಳ ನಿಷೇಧಕ್ಕೆ ಒಳಗಾಗುತ್ತಾರೆ. ಇದೇ ಕಾರಣಕ್ಕಾಗಿ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಜಯವರ್ಧನೆ ಬದಲಿಗೆ ಕುಮಾರ ಸಂಗಕ್ಕಾರ ತಂಡವನ್ನು ಮುನ್ನಡೆಸಿದ್ದರು. ಈ ದಿಢೀರ್ ಬದಲಾವಣೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಐಸಿಸಿ ತಿಳಿಸಿದೆ.ಇತ್ತ ಪಾಕಿಸ್ತಾನ ಬ್ಯಾಟಿಂಗ್‌ನಲ್ಲಿ ಅಸ್ಥಿರ ಪ್ರದರ್ಶನ ತೋರುತ್ತಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳು ಪದೇ ಪದೇ ವಿಫಲರಾಗುತ್ತಿದ್ದಾರೆ. ಆಲ್‌ರೌಂಡರ್ ಶಾಹೀದ್ ಅಫ್ರಿದಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ನಾಸೀರ್ ಜೆಮ್‌ಶೆದ್ ಹಾಗೂ ಉಮರ್ ಅಕ್ಮಲ್ ಅವರು ಈ ತಂಡಕ್ಕೆ ಆಪತ್ಬಾಂಧವರಾಗಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಈ ತಂಡದವರು ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಆಫ್ ಸ್ಪಿನ್ನರ್ ಮೊಹಮ್ಮದ್ ಹಫೀಜ್, ಎಡಗೈ ಸ್ಪಿನ್ನರ್ ರಾಜಾ ಹಸನ್, ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್, ಲೆಗ್ ಸ್ಪಿನ್ನರ್ ಶಾಹೀದ್ ಅಫ್ರಿದಿ ಹಾಗೂ ಆಫ್ ಸ್ಪಿನ್ನರ್ ಶೋಯಬ್ ಮಲಿಕ್ ಎದುರಾಳಿ ತಂಡಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಈ ಸ್ಪಿನ್ನರ್‌ಗಳು ಒಟ್ಟು 18 ಓವರ್ ಬೌಲ್ ಮಾಡಿದ್ದೇ ಅದಕ್ಕೆ ಉದಾಹರಣೆ.ಆದರೆ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳ ವಿರುದ್ಧ ಚೆನ್ನಾಗಿಯೇ ಆಡುತ್ತಾರೆ. ಈ ವಿಷಯ ಪಾಕ್ ತಂಡದ ನಾಯಕ ಹಫೀಜ್‌ಗೆ ಗೊತ್ತಿದೆ. ಹಾಗಾಗಿ ಈ ಪಂದ್ಯದಲ್ಲಿ ಅವರು ತಮ್ಮ ತಂತ್ರ ಬದಲಾಯಿಸುವ ಸಾಧ್ಯತೆ ಇದೆ.ಲಸಿತ್ ಮಾಲಿಂಗ ಹಾಗೂ ಅಜಂತಾ ಮೆಂಡಿಸ್ ಸಾರಥ್ಯದ ಲಂಕಾ ತಂಡದ ಬೌಲಿಂಗ್ ಕೂಡ ಚೆನ್ನಾಗಿದೆ. ಬ್ಯಾಟಿಂಗ್‌ನಲ್ಲಿ ನಾಯಕ ಜಯವರ್ಧನೆ, ಸಂಗಕ್ಕಾರ ಹಾಗೂ ತಿಲಕರತ್ನೆ ದಿಲ್ಶಾನ್ ಆಧಾರಸ್ತಂಭ. ಈ ತಂಡದವರು ತಮ್ಮೆಲ್ಲಾ ಪಂದ್ಯಗಳನ್ನು ಹಂಬನ್‌ಟೋಟಾ ಹಾಗೂ ಪಳ್ಳೆಕೆಲೆ ಕ್ರೀಡಾಂಗಣದಲ್ಲಿ ಆಡಿದ್ದಾರೆ. ಈ ಪಿಚ್ ವೇಗಿಗಳಿಗೆ ನೆರವಾಗುತಿತ್ತು. ಈ ಪಂದ್ಯಕ್ಕೆ ವೇದಿಕೆಯಾಗುತ್ತಿರುವ ಆರ್.ಪ್ರೇಮದಾಸ ಅಂಗಳ ಸ್ಪಿನ್ನರ್‌ಗಳ ಸ್ನೇಹಿಯಾಗಿದೆ.ಆದರೆ ಯಾವುದೇ ತಂಡ ಸೋತರೂ ಉಪಖಂಡದ ತಂಡವೊಂದು ವಿಶ್ವಕಪ್‌ನಿಂದ ಹೊರಬೀಳಲಿದೆ.ತಂಡಗಳು ಇಂತಿವೆ:

ಶ್ರೀಲಂಕಾ:
ಮಾಹೇಲ ಜಯವರ್ಧನೆ (ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಂದಿಮಾಲ್, ಅಕಿಲಾ ಧನಂಜಯ, ತಿಲಕರತ್ನೆ ದಿಲ್ಶಾನ್, ಶಮಿಂದಾ ಎರಂಗ, ರಂಗನಾ ಹೇರತ್, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ಅಜಂತಾ ಮೆಂಡಿಸ್, ಜೀವನ್ ಮೆಂಡಿಸ್, ದಿಲ್ಶಾನ್ ಮುನವೀರಾ, ತಿಸಾರ ಪೆರೇರಾ, ಕುಮಾರ ಸಂಗಕ್ಕಾರ ಹಾಗೂ ಲಹಿರು ತಿರಿಮಾನೆ.ಪಾಕಿಸ್ತಾನ: ಮೊಹಮ್ಮದ್ ಹಫೀಜ್ (ನಾಯಕ), ಅಬ್ದುಲ್ ರಜಾಕ್, ಅಸಾದ್ ಶಫೀಕ್, ಇಮ್ರಾನ್ ನಜೀರ್, ಕಮ್ರನ್  ಅಕ್ಮಲ್, ಮೊಹಮ್ಮದ್ ಸಮಿ, ನಾಸೀರ್ ಜೆಮ್‌ಶೆದ್, ರಾಜಾ ಹಸನ್, ಸಯೀದ್ ಅಜ್ಮಲ್, ಶಾಹೀದ್ ಅಫ್ರಿದಿ, ಶೋಯಬ್ ಮಲಿಕ್, ಸೊಹೇಲ್ ತನ್ವಿರ್, ಉಮರ್ ಅಕ್ಮಲ್, ಉಮರ್ ಗುಲ್ ಹಾಗೂ ಯಾಸೀರ್ ಅರಾಫತ್.ಪಂದ್ಯ ಆರಂಭ: ರಾತ್ರಿ ಏಳು ಗಂಟೆಗೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry