ಗುರುವಾರ , ಮೇ 19, 2022
24 °C

ಲಂಕಾ, ಬಾಂಗ್ಲಾ ಜತೆ ಕೃಷ್ಣ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥಿಂಫು (ಪಿಟಿಐ): ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಹತ್ಯೆ ನಡೆಸಿರುವುದರ  ಬಗ್ಗೆ ಭಾರತ ಮಂಗಳವಾರ ಇಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿತು.

33ನೇ ಸಾರ್ಕ್ ಸಚಿವರ ಮಂಡಳಿಯ ಸಭೆಗೆ ಆಗಮಿಸಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಶ್ರೀಲಂಕಾ ವಿದೇಶ ಸಚಿವ ಜಿ.ಎಲ್. ಪೆರಿಸ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಕುರಿತು ಗಮನ ಸೆಳೆದಿದ್ದು ಉಭಯ ರಾಷ್ಟ್ರಗಳು ಇಂತಹ ಸೂಕ್ಷ್ಮ ಮತ್ತು ವ್ಯಾವಹಾರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯುವತ್ತ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.ಸುಮಾರು 30 ನಿಮಿಷಗಳ ಕಾಲ ನಡೆದ ಈ ಮಾತುಕತೆಯಲ್ಲಿ ಇಬ್ಬರೂ ನಾಯಕರು ಮೀನುಗಾರರ ಸಮಸ್ಯೆಗಳನ್ನು ಚರ್ಚಿಸಲು ಆದಷ್ಟು ಬೇಗ ಜಂಟಿ ಕಾರ್ಯತಂಡದ ಸಭೆ ಕರೆಯಲು ಒಪ್ಪಿಗೆ ಸೂಚಿಸಿದರು. ಆದರೆ ತಮ್ಮ ತಮ್ಮ ಕಾವಲು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳದಿರಲು ಅವರು ಒಪ್ಪಿದರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.ಒಪ್ಪಂದ ಜಾರಿಗೆ ಚಾಲನೆ: ಇದೇ ಸಂದರ್ಭದಲ್ಲಿ ಬಾಂಗ್ಲಾದೇಶದ ವಿದೇಶ ಸಚಿವ ದೀಪು ಮೋನಿ ಅವರನ್ನೂ ಭೇಟಿ ಮಾಡಿದ ಕೃಷ್ಣ, ಈ ವರ್ಷಾಂತ್ಯದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಢಾಕಾ ಭೇಟಿಗೂ ಪೂರ್ವಭಾವಿಯಾಗಿ, ಕಳೆದ ವರ್ಷ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯಲ್ಲಿ ಕೈಗೊಂಡ ಸಂಪರ್ಕ ಮತ್ತು ನೀರು ಹಂಚಿಕೆ ಸೇರಿ ವಿವಿಧ  ಕ್ಷೇತ್ರಗಳ ಒಪ್ಪಂದ ಜಾರಿಗೆ ಚಾಲನೆ ನೀಡಿದರು.  ಆಗ ಭಾರತವು ಸುಮಾರು ಒಂದು ಶತಕೋಟಿ ಡಾಲರ್‌ಗಳ ನೆರವನ್ನು ಬಾಂಗ್ಲಾಕ್ಕೆ ವಿಸ್ತರಿಸುವುದಾಗಿ ಪ್ರಕಟಿಸಿತ್ತು. ಸಂಪರ್ಕ, ಜಲ ಹಂಚಿಕೆ, ಗಡಿ ವಿವಾದ, ಆವೃತ ವಲಯ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿ ಎರಡೂ ದೇಶಗಳು ಪ್ರಗತಿದಾಯಕ ಚರ್ಚೆ ನಡೆಸಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.