ಲಂಕಾ ವಿರುದ್ಧ ಪಾಕ್ ಪರಾಕ್ರಮ?

7

ಲಂಕಾ ವಿರುದ್ಧ ಪಾಕ್ ಪರಾಕ್ರಮ?

Published:
Updated:

ಕೊಲಂಬೊ (ಪಿಟಿಐ): ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊಟ್ಟ ಮೊದಲ ವಿಜಯ ದಾಖಲಿಸುವ ಮಹತ್ವಾಕಾಂಕ್ಷೆಯ ಕನಸು ಕಂಡಿರುವ ಶ್ರೀಲಂಕಾ ತಂಡವು ಆ ನಿಟ್ಟಿನಲ್ಲಿ ಯಶಸ್ವಿಯಾಗುವ ವಿಶ್ವಾಸವನ್ನೂ ಹೊಂದಿದೆ.ಪಾಕ್ ವಿರುದ್ಧ ವಿಶ್ವಕಪ್ ಕ್ರಿಕೆಟ್‌ನಲ್ಲಿ ಒಂದೂ ಪಂದ್ಯವನ್ನು ಗೆದ್ದಿಲ್ಲದ ಸಿಂಹಳೀಯರು ಈ ಬಾರಿ ವಿಜಯದ ಸಿಹಿಯನ್ನು ಸವಿಯುವ ಆಶಯದೊಂದಿಗೆ ಸಜ್ಜಾಗಿದ್ದಾರೆ. ಸ್ವಂತ ನೆಲದಲ್ಲಿ ನಡೆಯುವ ಪಂದ್ಯದಲ್ಲಿ ಜಯ ತಮ್ಮದಾಗುತ್ತದೆಂದು ಕಾಗದದ ಮೇಲೆ ಲೆಕ್ಕಾಚಾರ ಕೂಡ ಮಾಡಿಕೊಂಡಿದ್ದಾರೆ. ಆದರೂ ಅಪಾಯಕಾರಿ ಎದುರಾಳಿ ಎನಿಸಿರುವ ಪಾಕ್ ಸುಲಭದ ತುತ್ತಾಗುವುದಿಲ್ಲ ಎನ್ನುವುದು ಲಂಕಾ ತಂಡದ ನಾಯಕ ಕುಮಾರ ಸಂಗಕ್ಕಾರ ಅವರಿಗೂ ಗೊತ್ತು.ಕಷ್ಟದ ಹಾದಿಯಿದ್ದರೂ ಇಷ್ಟವಾಗುವಂಥ ಆಟವಾಡಿ ತಮ್ಮ ಜನರು ಸಂಭ್ರಮಿಸುವಂಥ ಜಯವನ್ನು ಪಾಕ್ ವಿರುದ್ಧ ಪಡೆಯುವುದು ‘ಸಂಗಾ’ ಉದ್ದೇಶ. ಕೆನಡಾ ವಿರುದ್ಧದ ಪಂದ್ಯದಲ್ಲಿ ಇನ್ನೂರಕ್ಕೂ ಹೆಚ್ಚು ರನ್‌ಗಳ ಅಂತರದ ವಿಜಯ ಸಾಧಿಸಿದ ನಂತರ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ವಿಶ್ವಾಸ ಪಡೆದ ಶ್ರೀಲಂಕಾ ಅದೇ ಹುಮ್ಮಸ್ಸನ್ನು ಕಾಯ್ದುಕೊಂಡು ಹೋಗುವ ಕಡೆಗೆ ಗಮನ ಕೇಂದ್ರೀಕರಿಸಿದೆ.ಶನಿವಾರ ಇಲ್ಲಿನ ಆರ್. ಪ್ರೇಮದಾಸಾ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ನ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಎರಡು ಪಾಯಿಂಟುಗಳನ್ನು ಖಾತೆಗೆ ಸೇರಿಸಿಕೊಳ್ಳುವುದು ಸಿಂಹಳೀಯರ ಗುರಿ. ಆತಿಥೇಯ ತಂಡದಂತೆಯೇ ಪಾಕಿಸ್ತಾನದವರೂ ಗೆಲುವಿನ ಓಟವನ್ನು ಮುಂದುವರಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಕೀನ್ಯಾ ಎದುರು 205 ರನ್‌ಗಳ ಅಂತರದ ಜಯದ ನಂತರ ಶಾಹೀದ್ ಆಫ್ರಿದಿ ಬಳಗವೂ ಯಶಸ್ವಿ ಕಾರ್ಯಾಚರಣೆಯ ಭರವಸೆ ಪಡೆದುಕೊಂಡಿದೆ.ಐಸಿಸಿ ಸಹ ಸದಸ್ಯ ರಾಷ್ಟ್ರಗಳಾದ ಕೆನಡಾ ಹಾಗೂ ಕೀನ್ಯಾ ಎದುರು ಗೆದ್ದಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡ ಈಗ ಸತ್ವಪರೀಕ್ಷೆಗೆ ಒಳಗಾಗಬೇಕು. ಆ ನಿಟ್ಟಿನಲ್ಲಿ ಶನಿವಾರದ ಪಂದ್ಯವೇ ವೇದಿಕೆಯಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡದವರ ಮನೋಬಲ ಹೆಚ್ಚುತ್ತದೆ. ದುರ್ಬಲ ತಂಡದ ವಿರುದ್ಧ ಮಾತ್ರ ಗೆದ್ದಿರುವ ಈ ಎರಡೂ ಪಡೆಗಳು ತಮ್ಮ ನಿಜವಾದ ಬಲವೇನೆಂದು ಸಾಬೀತುಪಡಿಸಬೇಕು.ಶ್ರೀಲಂಕಾ ತಂಡವು ಪಾಕ್ ವಿರುದ್ಧದ ಪಂದ್ಯಕ್ಕಾಗಿ ಬೌಲಿಂಗ್ ದಾಳಿಯಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಲಸಿತ್ ಮಾಲಿಂಗ ಅವರನ್ನು ಉಳಿಸಿಕೊಂಡು ಅವರೊಂದಿಗೆ ಹೊಸ ಚೆಂಡನ್ನು ಹಂಚಿಕೊಳ್ಳಲು ಬೇರೆ ಆಯ್ಕೆಗೆ ಯೋಚನೆ ನಡೆಸಿದೆ. ನುವಾನ್ ಕುಲಶೇಖರಾ ಇಲ್ಲವೆ ತಿಸ್ಸಾರ ಪೆರೆರಾ ಅವರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪಾಕ್ ತನ್ನ ಬೌಲಿಂಗ್ ದಾಳಿಯ ಸಂಯೋಜನೆಯನ್ನು ಮಾರ್ಪಾಡು ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎನ್ನುವುದು ಸ್ಪಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry