ಭಾನುವಾರ, ಜೂನ್ 13, 2021
20 °C

ಲಂಕಾ ಸೋತರೆ ಮಹಿ ಪಡೆ ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ನೆರೆಯ ರಾಷ್ಟ್ರ ಶ್ರೀಲಂಕಾ ಸೋಲಬೇಕು; ದೂರದ ಆಸ್ಟ್ರೇಲಿಯಾ ಗೆಲ್ಲಬೇಕು. ಇದು ಭಾರತದ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ! ಭಾರತ ತಂಡದ ಪರಿಸ್ಥಿತಿ ಸದಾ ಹೀಗೆ ಎಂದು ಕೆಲವರು ಮನಸ್ಸಿನ್ಲ್ಲಲೇ ಗೊಣಗಿದರೂ ಎದೆಯೊಳಗಿನ ಆ ಪ್ರೀತಿ ಕೇಳಬೇಕೇ?ಹಾಗಾಗಿಯೇ ಶುಕ್ರವಾರ ಇಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಕೊನೆಯ ಲೀಗ್ ಪಂದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಹೋಬರ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕದ ಮೂಲಕ ಭಾರತ ತಂಡದ ಜಯಕ್ಕೆ ಕಾರಣವಾಗದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಭಾರತ ಗಂಟುಮೂಟೆ ಕಟ್ಟಬೇಕಾಗಿತ್ತು. ಆದರೆ ಮಹಿ ಬಳಗ ಸವಾಲಿನ ಗುರಿಯನ್ನು ಬೋನಸ್ ಪಾಯಿಂಟ್‌ನೊಂದಿಗೆ ಗೆದ್ದ ಕಾರಣ ತ್ರಿಕೋನ ಸರಣಿ ಆಸಕ್ತಿ ಉಳಿಸಿಕೊಂಡಿದೆ.ಕಾಂಗರೂ ಪಡೆಗೆ ಈ ಪಂದ್ಯ ಅಷ್ಟೇನು ಮಹತ್ವ ಅಲ್ಲ. ಏಕೆಂದರೆ 19 ಪಾಯಿಂಟ್ ಹೊಂದಿರುವ ಆತಿಥೇಯ ತಂಡ ಈಗಾಗಲೇ ಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಬಳಿ ಈಗ 15 ಪಾಯಿಂಟ್‌ಗಳಿವೆ. ಲೀಗ್ ವ್ಯವಹಾರ ಮುಗಿಸಿರುವ ಭಾರತದ ಬಳಿ ಕೂಡ 15 ಪಾಯಿಂಟ್‌ಗಳಿವೆ.ಆದರೆ ಈ ಸರಣಿಯಲ್ಲಿ ಭಾರತ-ಲಂಕಾ ಮುಖಾಮುಖಿಯಲ್ಲಿ ದೋನಿ ಬಳಗ 2-1ರಲ್ಲಿ ಮುಂದಿದೆ. ಒಂದು ಪಂದ್ಯ ಟೈ ಆಗಿತ್ತು. ಆದರೆ ಮಳೆಯ ಕಾರಣ ಈ ಪಂದ್ಯ ರದ್ದಾದರೂ ದೋನಿ ಬಳಗ ಟೂರ್ನಿಯಿಂದ ಹೊರ ಬೀಳಲಿದೆ.`ಸದ್ಯ ನಾವು ಬೇರೆಯವರ ಫಲಿತಾಂಶದ ಮೇಲೆ ಅವಲಂಬಿಸಿಲ್ಲ. ಏಕೆಂದರೆ ಈ ಪಂದ್ಯದಲ್ಲಿ ಗೆದ್ದರೆ ನಾವು ಫೈನಲ್ ತಲುಪಲಿದ್ದೇವೆ. ಆದರೆ ಭಾರತ ತಂಡದ ಭವಿಷ್ಯ ನಮ್ಮ ಫಲಿತಾಂಶದ ಮೇಲೆ ಅವಲಂಬಿತವಾಗಿದೆ~ ಎಂದು ಲಂಕಾ ತಂಡದ ನಾಯಕ ಜಯವರ್ಧನೆ ಹೇಳಿದ್ದಾರೆ. ಈ ಮೂಲಕ ಭಾರತ ತಂಡ ಹಾಗೂ ಅದರ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.ಆದರೆ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಕೂಡ ಶ್ರೀಲಂಕಾ ಸೋಲಲಿ ಎಂದು ಪ್ರಾರ್ಥಿಸುತ್ತಿರಬಹುದು. ಏಕೆಂದರೆ ಹೆಸರಾಂತ ಆಟಗಾರರು ಇರುವ ಭಾರತ ಫೈನಲ್ ತಲುಪದಿದ್ದರೆ ತ್ರಿಕೋನ ಸರಣಿಯ ಫೈನಲ್ ಎಲ್ಲರ ಆಸಕ್ತಿ ಕಳೆದುಕೊಳ್ಳುತ್ತದೆ. ಆಗ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಹೆಚ್ಚು ಸಂಖ್ಯೆಯಲ್ಲಿ ಬರುವುದಿಲ್ಲ. ಟಿವಿ ಜಾಹೀರಾತು ಕೂಡ ಕಡಿಮೆ ಆಗುತ್ತದೆ.ಅದೇನೇ ಇರಲಿ, ಈ ಪಂದ್ಯದಲ್ಲೂ ಮೈಕಲ್ ಕ್ಲಾರ್ಕ್ ತಂಡ ಮುನ್ನಡೆಸುವುದು ಅನುಮಾನ. ಗಾಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಅವರ ಬದಲಿಗೆ ಆಲ್‌ರೌಂಡರ್ ಶೇನ್ ವಾಟ್ಸನ್ ತಂಡದ ಸಾರಥ್ಯ ವಹಿಸಲಿದ್ದಾರೆ. ವೇಗಿ ಬ್ರೆಟ್ ಲೀ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಆದರೆ ಅವರು ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ವೇಗಿ ಜೇಮ್ಸ ಪ್ಯಾಟಿನ್ಸನ್ ಕೂಡ ಆಡುವ ನಿರೀಕ್ಷೆ ಇದೆ.ಇತ್ತ ಲಂಕಾ ದೋನಿ ಪಡೆ ನೀಡಿದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಏಕೆಂದರೆ 320 ರನ್ ಗಳಿಸಿದ್ದರೂ ಅದನ್ನು ಭಾರತ ಕೇವಲ 36.4 ಓವರ್‌ಗಳಲ್ಲಿ ತಲುಪಿದ್ದು ಜಯವರ್ಧನೆ ಪಡೆಯ ವಿಶ್ವಾಸವನ್ನು ಕಸಿದುಕೊಂಡಿದೆ. ಈ ತಂಡದ ಪ್ರಮುಖ ವೇಗಿ ಲಸಿತ್ ಮಾಲಿಂಗ ಭಾರತ ತಂಡದ ಭವಿಷ್ಯದ ನಾಯಕ ಕೊಹ್ಲಿ ಅವರ ಆಕ್ರಮಣಕಾರಿ ಆಟಕ್ಕೆ ಸಿಲುಕಿ ತಮ್ಮ 7.4 ಓವರ್‌ಗಳಲ್ಲಿ 96 ರನ್ ನೀಡಿ ಬಹು ದುಬಾರಿ ಎನಿಸಿದ್ದರು. ಆದರೆ ಈ ತಂಡದ ಬ್ಯಾಟ್ಸ್ ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.ತಂಡಗಳು:

ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಶೇನ್ ವಾಟ್ಸನ್ (ಉಪನಾಯಕ), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ಡೇನಿಯಲ್ ಕ್ರಿಸ್ಟಿಯನ್, ಕ್ಸೇವಿಯರ್ ಡೋಹರ್ತಿ, ಪೀಟರ್ ಫಾರೆಸ್ಟ್, ಬೆನ್ ಹಿಲ್ಫೆನ್ಹಾಸ್, ಮೈಕ್ ಹಸ್ಸಿ, ಡೇವಿಡ್ ಹಸ್ಸಿ, ಕ್ಲಿಂಟ್ ಮೆಕ್‌ಕೇ, ಬ್ರೆಟ್ ಲೀ ಹಾಗೂ ಜೇಮ್ಸ ಪ್ಯಾಟಿನ್ಸನ್.ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ (ವಿಕೆಟ್ ಕೀಪರ್), ದಿನೇಶ್ ಚಂಡಿಮಾಲ್, ಲಹಿರು ತಿರಿಮಾನೆ, ತಿಸ್ಸಾರ ಪೆರೇರಾ, ಆ್ಯಂಜೆಲೊ ಮ್ಯಾಥ್ಯೂಸ್, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ರಂಗನಾ ಹೇರತ್, ಫರ್ವೀಜ್ ಮಹಾರೂಫ್ ಹಾಗೂ ಉಪುಲ್ ತರಂಗ.

ಪಂದ್ಯ ಆರಂಭ: ಭಾರತೀಯ ಕಾಲಮಾನ ಬೆಳಿಗ್ಗೆ 8.50ಕ್ಕೆ.

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.