ಲಂಚ: ತನಿಖೆಗೆ ಸೂಚನೆ

7

ಲಂಚ: ತನಿಖೆಗೆ ಸೂಚನೆ

Published:
Updated:

ರಾಣೆಬೆನ್ನೂರು: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸಂಬಂಧಿಸಿದ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಹೆಚ್ಚಿನ ನಿಗಾ ವಹಿಸಿ ಬೇಗನೆ ಕುಡಿಯುವ ನೀರು ಪೂರೈಕೆ ಮಾಡಬೇಕು. ಬೇಜವಾಬ್ದಾರಿ ವಹಿಸಿದರೆ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಪಂ ಸದಸ್ಯರನ್ನು ತಾಪಂ ಸಾಮಾನ್ಯ ಸಭೆಗೆ ಆಹ್ವಾನಿಸಿಲ್ಲ ಎಂದು ಸದಸ್ಯ ಗುಡ್ಡಪ್ಪ ಓಲೇಕಾರ ಸಭೆಗೆ ತಿಳಿಸಿದಾಗ ಶಾಸಕರು ಅವರು ತಾಪಂ ಸದಸ್ಯರಲ್ಲ, ಅದಕ್ಕೆ ಅವರನ್ನು ಕರೆದಿಲ್ಲ ಅಷ್ಟೇ, ಜಿಪಂ ಸದಸ್ಯರು ತಾಪಂ ಸಭೆಗೆ ಬರುವ ನಿಯಮವಿಲ್ಲ, ಕಾನೂನು ಪ್ರಕಾರ ಸಭೆ ನಡೆಸುತ್ತೇವೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ (ಸಿಡಿಪಿಓ) ಕಚೇರಿಯಲ್ಲಿ ಸ್ರ್ತೀ ಶಕ್ತಿ ಗುಂಪುಗಳಿಗೆ  ಸುತ್ತು ನಿಧಿ ಚೆಕ್‌ ಕೊಡುವಾಗ ಪ್ರತಿಯೊಂದು ಗುಂಪಿನಿಂದ ಐದು ನೂರು ರೂ ಲಂಚ ತೆಗೆದುಕೊಂಡು ಚೆಕ್‌ ನೀಡುತ್ತಿದ್ದಾರೆ ಎಂದು ಮುದೇನೂರು ತಾಪಂ ಸದಸ್ಯೆ ರೇಣುಕಾ ಮಲಕನಹಳ್ಳಿ ಸಭೆಗೆ ತಿಳಿಸಿದಾಗ ಶಾಸಕರು ಸ್ತ್ರೀ ಶಕ್ತಿ ಗುಂಪುಗಳ ಸದಸ್ಯೆಯರನ್ನು ನೇರವಾಗಿ ಭೇಟಿ ಮಾಡಿ ಯಾವ ಅಧಿಕಾರಿ ದುಡ್ಡು ವಸೂಲಿ ಮಾಡಿದ್ದಾರೆ ವಾಸ್ತವ ಪರಿಶೀಲನೆ ನಡೆಸಿ ಸೂಕ್ತ ವರದಿ ನೀಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶ ಮಾಡಿದರು. ತುಂಗಭದ್ರಾ ನದಿ ಗ್ರಾಮದ ಸಮೀಪದಲ್ಲಿದ್ದರೂ ಮಾಕನೂರು ಗ್ರಾಮಕ್ಕೆ ನದಿ ನೀರು ಕುಡಿಯುವ ಭಾಗ್ಯ ಇರದ ಬಗ್ಗೆ ಶಾಸಕರು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ತಾಪಂ ಸದಸ್ಯರಾದ ಸೋಮಪ್ಪ ಲಮಾಣಿ ಶಾರದಾ ಲಮಾಣಿ ಮತ್ತು ಹಾಲಪ್ಪ ಲಮಾಣಿ ಅವರು ಕೂಡ ಕಜ್ಜರಿ, ಕಾಕೋಳ ಮತ್ತು ರಾಹುತನ ಕಟ್ಟಿ ತಾಂಡಾಗಳಿಗೆ ಒಂದು ವಾರ ದೊಳಗೆ ಮಲ್ಟಿ ವಿಲೇಜ್‌ ಯೋಜನೆ ಯಿಂದ ನದಿ ಕುಡಿಯುವ ನೀರು ಪೂರೈಕೆಯಾಗಬೇಕು ಎಂದರು.25.75 ಲಕ್ಷ ರೂಗಳ ಕ್ರಿಯಾ ಯೋಜನೆ ಸಭೆ ಒಪ್ಪಿಗೆ ನೀಡಿತು.ತಾಪಂ ಅಧ್ಯಕ್ಷೆ ಹೂವಕ್ಕ ನಾಗೋರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಣೇಶ ಬಿಲ್ಲಾಳ, ತಹಸೀಲ್ದಾರ ಬಿ.ಎಸ್‌. ರಿತ್ತಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಕೆ.ಕೃಷ್ಣಮೂರ್ತಿ ಅವರು ಸ್ವಾಗತಿಸಿದರು. ಹಾಲಸ್ವಾಮಿ ವಿಷಯಗಳನ್ನು ಓದಿದರು. ಶ್ರೀಕಾಂತ ಸಾಗರ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry