ಭಾನುವಾರ, ಆಗಸ್ಟ್ 25, 2019
28 °C

ಲಂಚ: ತೆರಿಗೆ ಅಧಿಕಾರಿಗೆ 15 ತಿಂಗಳು ಜೈಲು

Published:
Updated:

ಬೆಂಗಳೂರು: ಸ್ಟೇಷನರಿ ಅಂಗಡಿಯೊಂದರ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಪುನರ್ ನಿಗದಿ ಮಾಡಲು ರೂ. 10 ಸಾವಿರ  ಲಂಚ ಪಡೆದಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ಆರ್.ಉಷಾಬಾಯಿ ಅವರಿಗೆ ಬೆಂಗಳೂರು ನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯ 15 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 7 ಸಾವಿರ ದಂಡ ವಿಧಿಸಿದೆ.ನಗರದಲ್ಲಿ ನಿತ್ಯಾನಂದ ಕಂಪ್ಯೂಟರ್ ಸ್ಟೇಷನರಿ ಶಾಪ್ ನಡೆಸುತ್ತಿದ್ದ ಮಂಜು ಬನ್ಸಾಲಿ ಎಂಬುವವರು ವ್ಯಾಟ್ ಪುನರ್ ನಿಗದಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿದಾರರಿಂದ ರೂ.10 ಸಾವಿರ  ಲಂಚ ಪಡೆಯುತ್ತಿದ್ದ ಉಷಾಬಾಯಿ ಅವರನ್ನು 2008ರ ನವೆಂಬರ್ 10ರಂದು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.ಆರೋಪಿಯ ವಿರುದ್ಧ 2009ರಲ್ಲಿ ಬೆಂಗಳೂರು ನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, `ಉಷಾಬಾಯಿ ಅಪರಾಧಿ' ಎಂದು ಸೋಮವಾರ ಆದೇಶ ಪ್ರಕಟಿಸಿದರು.ಉಷಾಬಾಯಿ ಅವರಿಗೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7ರ ಅಡಿಯಲ್ಲಿ ಒಂಬತ್ತು ತಿಂಗಳು ಕಠಿಣ ಜೈಲು ಶಿಕ್ಷೆ ಮತ್ತು ರೂ. 3 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಗೆ ತಪ್ಪಿದಲ್ಲಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶಿಸಿದೆ.ಕಲಂ 13(1) (ಡಿ ) ಮತ್ತು 13(2)ರ ಅಡಿಯಲ್ಲಿ 15 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ನಾಲ್ಕು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಗೆ ತಪ್ಪಿದಲ್ಲಿ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಹೇಳಿದೆ.

Post Comments (+)