ಸೋಮವಾರ, ಜೂನ್ 14, 2021
25 °C

ಲಂಚ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೀರಿನ ಸಂಪರ್ಕ ಪಡೆಯಲು ರಸ್ತೆ ಅಗೆತಕ್ಕೆ ಅನುಮತಿ ನೀಡಲು ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫ್ರೇಜರ್‌ಟೌನ್ ವಾರ್ಡ್‌ನ ಸಹಾಯಕ ಎಂಜಿನಿಯರ್ ಸೈಯದ್ ಇಬ್ರಾಹಿಂ ಮತ್ತು ಸಿದ್ಧಾರ್ಥ ಎಂಬ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಸಗಾಯಪುರದಲ್ಲಿರುವ ಶುಭಕಾಮನ ಅಪಾರ್ಟ್‌ಮೆಂಟ್‌ಗೆ ನೀರಿನ ಸಂಪರ್ಕ ಪಡೆಯಲು ರಸ್ತೆ ಅಗೆಯಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕ ಸೆಂಥಿಲ್‌ಬಾಬು ಅವರು ವಾರ್ಡ್ ಕಚೇರಿಯನ್ನು ಸಂಪರ್ಕಿಸಿದ್ದರು. ಅನುಮತಿ ನೀಡಲು ರೂ 10,000 ನೀಡುವಂತೆ ಸೈಯದ್ ಇಬ್ರಾಹಿಂ ಒತ್ತಾಯಿಸಿದ್ದರು. ಶುಕ್ರವಾರ ಹಣ ತಂದು ಕೊಡುವಂತೆಯೂ ಸೂಚನೆ ನೀಡಿದ್ದರು. ಈ ಕುರಿತು ಅರ್ಜಿದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಶುಕ್ರವಾರ ಸೆಂಥಿಲ್‌ಬಾಬು ಅವರು ಹಣದೊಂದಿಗೆ ವಾರ್ಡ್ ಕಚೇರಿಗೆ ಹೋದಾಗ, ಸ್ಥಳದಲ್ಲಿದ್ದ ಸಿದ್ಧಾರ್ಥ ಎಂಬ ಖಾಸಗಿ ಮಧ್ಯವರ್ತಿಗೆ ನೀಡುವಂತೆ ಎಂಜಿನಿಯರ್ ಸೂಚಿಸಿದ್ದರು. ಅದರಂತೆ ಅರ್ಜಿದಾರರು ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಸೈಯದ್ ಇಬ್ರಾಹಿಂ ಮತ್ತು ಸೆಂಥಿಲ್‌ಬಾಬು ಅವರನ್ನು ಬಂಧಿಸಿದರು. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ತಿಳಿಸಿದರು.ಶಿಕ್ಷಣಾಧಿಕಾರಿಗಳ ಬಂಧನ: ಶಾಲೆಯ ವಾರ್ಷಿಕ ತಪಾಸಣಾ ವರದಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಳುಹಿಸಲು ಬ್ಯಾಲಾಳು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗರಾಜ್ ಅವರಿಂದ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ದಕ್ಷಿಣ ವಲಯ-1ರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ತಿಮ್ಮಯ್ಯ ಮತ್ತು ಶಿಕ್ಷಣ ಸಂಯೋಜಕ ರಾಮಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಶಾಲೆಯ ವಾರ್ಷಿಕ ತಪಾಸಣೆ ನಡೆಸಿದ್ದ ಆರೋಪಿಗಳು, ಸಂಬಂಧಿಸಿದ ವರದಿಯನ್ನು ಇಲಾಖೆಗೆ ಸಲ್ಲಿಸಿರಲಿಲ್ಲ. ವರದಿಯನ್ನು ಇಲಾಖೆಗೆ ರವಾನಿಸುವಂತೆ ಕೇಳಿದಾಗ ರೂ 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಾಗರಾಜ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.