ಬುಧವಾರ, ಏಪ್ರಿಲ್ 21, 2021
30 °C

ಲಂಚ ಪಡೆದ ನಗರ ಯೋಜನಾ ಸಹಾಯಕ ನಿರ್ದೇಶಕರಿಗೆ ಸಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಮೀನು ಮಂಜೂರಾತಿ ಮಾಡಿಕೊಡಲು ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರಿಗೆ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ಒಂದು ವರ್ಷ ಸಾದಾ ಸಜೆ ಮತ್ತು ರೂ.15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಹಾಲಿ ಬೆಂಗಳೂರಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಎಂ.ವಿ.ಪ್ರಕಾಶ್ ಶಿಕ್ಷೆಗೆ ಗುರಿಯಾದವರು.ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಎಡತೊರೆ ಅಂಚೆಯ ಮುರುಗನಹಳ್ಳಿಯ ಲೇ.ಸಿ.ಕೆ.ಮಾದಪ್ಪ ಅವರ ಮಗ ಸಿ.ಎಂ.ಕಿರಣ್‌ಕುಮಾರ್ ಮತ್ತು ಸ್ನೇಹಿತರಾದ ರತ್ನಮ್ಮ ಎಂಬುವರು ಜಂಟಿಯಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿ ಕನಕನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 13ರಲ್ಲಿ 4.3 ಎಕರೆ ಜಮೀನು ಹೊಂದಿದ್ದು, ಇದನ್ನು ಅನ್ಯ ಉಪಯೋಗದ ಸಂಬಂಧ ಕುವೆಂಪುನಗರದ ನಗರ ಯೋಜನಾ ಘಟಕದ ಸಹಾಯಕ ನಿರ್ದೇಶಕರಾಗಿದ್ದ ಪ್ರಕಾಶ್ ಅವರ ಮೊರೆ ಹೋದರು.ಭೂಮಿ ಮಂಜೂರಾತಿಗೆ ರೂ.50 ಸಾವಿರ ನೀಡುವಂತೆ ಪ್ರಕಾಶ್ ಒತ್ತಾಯಿಸಿದ್ದರು. ಈ ಸಂಬಂಧ ಕಿರಣ್‌ಕುಮಾರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 2007ರ ಜೂನ್ 23ರಂದು ಕಚೇರಿಯಲ್ಲಿ ಮುಂಗಡವಾಗಿ ರೂ.15 ಸಾವಿರ ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದಾಗ ಪ್ರಕಾಶ್ ಅವರು ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಇನ್‌ಸ್ಪೆಕ್ಟರ್ ಜಯರಾಮು ಅವರು ಪ್ರಕಾಶ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಮಂಗಳವಾರ ಶಿಕ್ಷೆ ವಿಧಿಸಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿ ಸಾದಾ ಸಜೆ ಅನುಭವಿಸುವಂತೆ ತಿಳಿಸಿದೆ. ವಿಶೇಷ ಅಭಿಯೋಜಕ ವೃಷಭೇಂದ್ರ  ಲೋಕಾಯುಕ್ತ ಪರ ವಾದ ಮಂಡಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.