ಬುಧವಾರ, ಮೇ 18, 2022
25 °C

ಲಂಚ ಪ್ರಕರಣಕ್ಕೆ ನಿವೇಶನ ವಿವಾದವೇ ಮೂಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಶಾಸಕ ವೈ.ಸಂಪಂಗಿ ಲೋಕಾಯುಕ್ತ ಪೊಲೀಸರು ಒಡ್ಡಿದ ಬಲೆಗೆ ಬೀಳಲು ಆಂಡರಸನ್‌ಪೇಟೆಯ ಮುಖ್ಯ ವೃತ್ತದ ಬಳಿ ಇರುವ 26-74 ಅಳತೆಯ ನಿವೇಶನವೇ ಕಾರಣ.ಆ ನಿವೇಶನದ ಒಡೆತನ ಹೊಂದಿರುವುದಾಗಿ ಫಾರೂಕ್ ಮತ್ತು ನಯಾಜ್ ಅಹ್ಮದ್ ನಡುವೆ ನಡೆಯುತ್ತಿದ್ದ ವ್ಯಾಜ್ಯದಲ್ಲಿ ಮಧ್ಯೆ ಪ್ರವೇಶಿಸಲು ಹೋದ ಸಂಪಂಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದರು. ನಯಾಜ್‌ಗೆ ಶಾಸಕರು ಬೆಂಬಲ ನೀಡುತ್ತಿದ್ದ ಬಗ್ಗೆ ಅಸಮಾಧಾನ ಹೊಂದಿದ್ದ ಫಾರೂಕ್ ಶಾಸಕರನ್ನು ಪೊಲೀಸರ ಬಲೆಗೆ ಸಿಲುಕಿಸಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.ಫಾರೂಕ್, ನಯಾಜ್ ಸಂಬಂಧಿಕರಾದರೂ ಇಬ್ಬರ ನಡುವೆ ಕಡು ವೈರತ್ವ. 2008ರ ಆಗಸ್ಟ್ 29ರಂದು ಆರಂಭವಾದ ಜಗಳದಲ್ಲಿ ಇದುವರೆವಿಗೂ ಆಂಡರಸನ್‌ಪೇಟೆ, ರಾಬರ್ಟ್‌ಸನ್‌ಪೇಟೆ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳಲ್ಲಿ 20 ಪ್ರಕರಣ ದಾಖಲಾಗಿವೆ. ಒಮ್ಮೆ ಶಾಸಕರು ಫಾರೂಕ್ ಬೆಂಬಲಿಗರೊಬ್ಬರನ್ನು ಅಪಹರಿಸಿದ್ದರು ಎಂಬ ದೂರನ್ನು ಫಾರೂಕ್ ಬೆಂಬಲಿಗರು ನೀಡಿದ್ದರು.ಫರೂಕ್ ತಮ್ಮ ವಾಹನದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಯಾಜ್ ರಾಬರ್ಟ್‌ಸನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಒಬ್ಬರ ಮೇಲೆ ಮತ್ತೊಬ್ಬರು ನೀಡುತ್ತಿದ್ದ ಬಹುತೇಕ ದೂರುಗಳು ಸುಳ್ಳಾಗಿದ್ದು, ಪೊಲೀಸರಿಗೆ ಬಹಳಷ್ಟು ಕಿರಿಕಿರಿ ತರುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.ನಿವೇಶನದ ವ್ಯಾಜ್ಯ ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ 2008ರ ಡಿಸೆಂಬರ್ 30ರಂದು ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್.ವೆಂಕಟೇಶ್ ಕಾರ್ಯಾಚರಣೆ ನೇತೃತ್ವ ವಹಿಸಿ ನಿವೇಶನದಲ್ಲಿದ್ದ ಗುಜರಿ ಅಂಗಡಿ ತೆರವುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನಯಾಜ್ ನೀಡಿದ ದೂರಿನ ಮೇರೆಗೆ ಎಸ್ಪಿ ವಿರುದ್ಧ ಕೂಡ ಇಲಾಖೆ ವಿಚಾರಣೆ ನಡೆದಿತ್ತು. ಕೇಂದ್ರ ವಲಯದ ಐಜಿಪಿ ತನಿಖೆ ನಡೆಸಿದ್ದರು.ಆ ಘಟನೆಯಿಂದ ಎಸ್ಪಿ ಹಾಗೂ ಶಾಸಕರ ನಡುವಿನ ಸಂಬಂಧ ಕೂಡ ಹಳಸಿತ್ತು. ಒಮ್ಮೆ ಎಸ್ಪಿ ಕಚೇರಿಗೆ ನುಗ್ಗಿದ್ದ ಶಾಸಕ ವೈ.ಸಂಪಂಗಿ ಬೇರೆ ಘಟನೆ ಮುಂದಿಟ್ಟುಕೊಂಡು ಎಸ್ಪಿ ಎಚ್.ಎಸ್.ವೆಂಕಟೇಶ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಘಟನೆಯಾದ ಕೆಲವು ದಿನಗಳ ಬಳಿಕ ಸಂಪಂಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರು.ಆ ಘಟನೆ ಹಿನ್ನೆಲೆಯಲ್ಲಿ ಎಸ್ಪಿ ವೆಂಕಟೇಶ್ ಅವರ ಕೈವಾಡವಿದೆ ಎಂದು ಸಂಪಂಗಿ ಬೆಂಬಲಿಗರು ಆರೋಪಿಸಿದ್ದರು.

ಪ್ರಕರಣದ ವಿವರ

ಕೆಜಿಎಫ್ ನಿವಾಸಿ ಹುಸೇನ್ ಮೊಯಿನ್ ಫಾರೂಕ್ ಅವರ ನಿವೇಶನವನ್ನು ನಯಾಜ್ ಎಂಬುವರು ಅತಿಕ್ರಮಣ ಮಾಡಿದ್ದರು. ಅದನ್ನು ತೆರವು ಮಾಡಿಸಿಕೊಡುವಂತೆ  ಫಾರೂಕ್, ಆ್ಯಂಡರ್ಸನ್ ಪೇಟೆಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ, ಶಾಸಕರ ಬಳಿ ಹೋಗುವಂತೆ ಪೊಲೀಸರು ದೂರುದಾರರಿಗೆ ಸೂಚಿಸಿದ್ದರು. ಈ ಮಧ್ಯೆ ಫಾರೂಕ್ ವಿರುದ್ಧವೇ ನಯಾಜ್ ದೂರು ದಾಖಲಿಸಿದ್ದರು.ಕೆಲ ದಿನಗಳ ಬಳಿಕ ಫಾರೂಕ್  ಕೆಜಿಎಫ್ ಶಾಸಕ ವೈ.ಸಂಪಂಗಿ ಅವರನ್ನು ಭೇಟಿ ಮಾಡಿದ್ದರು. ನಿವೇಶನ ಒತ್ತುವರಿ ತೆರವು ಮಾಡಿಸಿಕೊಡಲು ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಿಂದಕ್ಕೆ ಪಡೆಯುವಂತೆ ಮಾಡಲು ಐದು ಲಕ್ಷ ರೂಪಾಯಿ ನೀಡುವಂತೆ ಸಂಪಂಗಿ ಕೇಳಿದ್ದರು. ಈ ಕುರಿತು ಫಾರೂಕ್ 2009ರ ಜನವರಿ 29ರಂದು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಫಾರೂಕ್ ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು, ಶಾಸಕರು ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದರು. ಲಂಚಕ್ಕಾಗಿ ಒತ್ತಾಯಿಸುತ್ತಿದ್ದ ಶಾಸಕರನ್ನು ಬಂಧಿಸಲು ಲೋಕಾಯುಕ್ತದ ಆಗಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತ ಮತ್ತು ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಕೆ.ಮಧುಕರ ಶೆಟ್ಟಿ ಕಾರ್ಯತಂತ್ರ ರೂಪಿಸಿದ್ದರು. ದೂರುದಾರರು ಮತ್ತೆ ಶಾಸಕರನ್ನು ಸಂಪರ್ಕಿಸಿದಾಗ ಆ ದಿನ ಮಧ್ಯಾಹ್ನವೇ ಶಾಸಕರ ಭವನಕ್ಕೆ ಹಣ ತರುವಂತೆ ಸೂಚಿಸಿದ್ದರು. ರೂ 50,000 ನಗದು ಮತ್ತು ರೂ 4.5 ಲಕ್ಷ ಮೊತ್ತದ ಚೆಕ್ ಪಡೆಯಲು ಒಪ್ಪಿಕೊಂಡಿದ್ದರು.ಆ ದಿನ ಮಧ್ಯಾಹ್ನ ಶಾಸಕರ ಭವನದ ತಮ್ಮ ಕೊಠಡಿಯಲ್ಲೇ ಸಂಪಂಗಿ ಅವರು ಫಾರೂಕ್ ಅವರಿಂದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್‌ಪಿ ಪರಮೇಶ್ವರಪ್ಪ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿತ್ತು.  ತನಿಖೆ ಪೂರ್ಣಗೊಳಿಸಿ 2009ರ ಆಗಸ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.