ಲಂಚ ರೂಪದಲ್ಲಿ ನಿವೇಶನ!

ಮಂಗಳವಾರ, ಜೂಲೈ 23, 2019
20 °C

ಲಂಚ ರೂಪದಲ್ಲಿ ನಿವೇಶನ!

Published:
Updated:

ಬೆಂಗಳೂರು: ಎಪ್ಪತ್ತು ಲಕ್ಷ ರೂಪಾಯಿಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ನಿವೇಶನವನ್ನೇ ಲಂಚವಾಗಿ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭಾರತಿಪುರ ವಾರ್ಡ್‌ನ ಸಹಾಯಕ ಎಂಜಿನಿಯರ್ ಜಿ.ಆರ್.ನಾಗರಾಜು ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಖಲೆಗಳ ಸಮೇತ ಬಂಧಿಸಿದ್ದಾರೆ.ಪುಟ್ಟಯ್ಯ ಎಂಬುವರು ಕಾಮಾಕ್ಷಿಪಾಳ್ಯದಲ್ಲಿ 25 ಗುಂಟೆ ಜಮೀನು ಹೊಂದಿದ್ದರು. ಇದು ಪಿತ್ರಾರ್ಜಿತವಾಗಿ ಅವರಿಗೆ ಬಂದ ಆಸ್ತಿಯಾಗಿತ್ತು. ಈ ಆಸ್ತಿಯ ಒಡೆತನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಪುಟ್ಟಯ್ಯ ನಡುವೆ ವ್ಯಾಜ್ಯ ಇತ್ತು. 25 ಗುಂಟೆ ಜಮೀನಿನ ಒಡೆತನ ಪುಟ್ಟಯ್ಯ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಈ ಜಮೀನಿನಲ್ಲಿ ಅವರು ಏಳು ನಿವೇಶನಗಳನ್ನು ರಚಿಸಿದ್ದರು.ಏಳು ನಿವೇಶನಗಳ ದಾಖಲಾತಿಗಳನ್ನು ಕ್ರಮಬದ್ಧಗೊಳಿಸುವಂತೆ ಭೂಮಿಯ ಮಾಲೀಕರು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪುಟ್ಟಯ್ಯ ಅವರನ್ನು ಸಂಪರ್ಕಿಸಿದ್ದ ಸಹಾಯಕ ಎಂಜಿನಿಯರ್ ನಾಗರಾಜು, 41/43 ಅಡಿ ವಿಸ್ತೀರ್ಣದ ಮೂಲೆ ನಿವೇಶನವನ್ನು ಪ್ರತಿ ಚದರ ಅಡಿಗೆ ರೂ  750  ದರದಲ್ಲಿ ತಮ್ಮ ಮಾವ ಬಿ.ಜೆ.ರಂಗಸ್ವಾಮಿ ಹೆಸರಿಗೆ ನೋಂದಣಿ ಮಾಡಿಕೊಟ್ಟರೆ ಮಾತ್ರವೇ ದಾಖಲಾತಿಗಳನ್ನು ಕ್ರಮಬದ್ಧಗೊಳಿಸುವುದಾಗಿ ಬೇಡಿಕೆ ಇಟ್ಟಿದ್ದರು. ಇಲ್ಲವಾದರೆ 25 ವರ್ಷ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.ಆರೋಪಿಯು ನಿವೇಶನವನ್ನೇ ಲಂಚವಾಗಿ ನೀಡುವಂತೆ ಒತ್ತಾಯಿಸುತ್ತಿರುವ ಕುರಿತು ಪುಟ್ಟಯ್ಯ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಂತರ ಆರೋಪಿ ಮತ್ತು ದೂರುದಾರರ ನಡುವೆ ನಡೆದ ಮಾತುಕತೆಯಲ್ಲಿ ಶುಕ್ರವಾರ ನಿವೇಶನವನ್ನು ನೋಂದಣಿ ಮಾಡಿಸುವ ನಿರ್ಧಾರಕ್ಕೆ ಬರಲಾಗಿತ್ತು. ಅದರಂತೆ ನಾಗರಬಾವಿ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಗೆ ಸಿದ್ಧತೆ ನಡೆದಿತ್ತು.ಎಂಟು ಲಕ್ಷ ರೂಪಾಯಿ ಮೊತ್ತದ ಡಿ.ಡಿ ಮತ್ತು ರೂ 5.5 ಲಕ್ಷ  ಜತೆ ಶುಕ್ರವಾರ ಉಪ ನೋಂದಣಿ ಕಚೇರಿಗೆ ಬಂದ ನಾಗರಾಜು, ನಿವೇಶನವನ್ನು ತಮ್ಮ ಮಾವನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದರು. ಅರ್ಧ ಭಾಗದಷ್ಟು ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉಪ ನೋಂದಣಿ ಕಚೇರಿ ಮೇಲೆ ದಾಳಿ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿತು.ಪುಟ್ಟಯ್ಯ ಅವರ ನಿವೇಶನ ಇರುವ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ದರವೇ ರೂ 1,730.  ಇಲ್ಲಿ ಚದರ ಅಡಿಗೆ ರೂ 4,000 ಗಳಿಂದ ರೂ  5,000 ವರೆಗೆ ಮಾರುಕಟ್ಟೆ ದರವಿದೆ. ಚದರ ಅಡಿಗೆ ರೂ 4,000ಯಂತೆ ಲೆಕ್ಕ ಹಾಕಿದರೂ ರೂ 70.52 ಲಕ್ಷ ಆಗುತ್ತದೆ. ಈ ನಿವೇಶನವನ್ನು ನಾಗರಾಜು ರೂ 13.5 ಲಕ್ಷಕ್ಕೆ ತಮ್ಮ ಮಾವನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. `ನಿವೇಶನವನ್ನೇ ಲಂಚವಾಗಿ ಪಡೆಯುತ್ತಿದ್ದ ನಾಗರಾಜು ಅವರನ್ನು ದಾಖಲೆಗಳ ಸಮೇತ ಬಂಧಿಸಲಾಗಿದೆ. ಪ್ರಕರಣಕ್ಕೆ ಬಳಸಿದ ಹಣ ಮತ್ತು ಡಿ.ಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬ್ದುಲ್ ಅಹದ್, ಇನ್‌ಸ್ಪೆಕ್ಟರ್‌ಗಳಾದ ಎಸ್.ಟಿ.ಯೋಗೇಶ್, ರೇಣುಕಾಪ್ರಸಾದ್, ಎಸ್.ಟಿ.ಒಡೆಯರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು~ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry