ಲಂಡನ್‌ನಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಬ್ರಾರ್ ಮೇಲೆ ದಾಳಿ ಪ್ರಕರಣ

7

ಲಂಡನ್‌ನಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಬ್ರಾರ್ ಮೇಲೆ ದಾಳಿ ಪ್ರಕರಣ

Published:
Updated:

ನವದೆಹಲಿ (ಪಿಟಿಐ): ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಸ್. ಬ್ರಾರ್ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಬ್ರಿಟನ್ ಸರ್ಕಾರ  ಭಾರತಕ್ಕೆ ನೀಡಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ತನಿಖೆ ಕುರಿತ ಮಾಹಿತಿಯನ್ನು ನಿರಂತರವಾಗಿ ಭಾರತದ ಅಧಿಕಾರಿಗಳಿಗೆ ನೀಡುವುದಾಗಿಯೂ ತಿಳಿಸಿದೆ.ಈ ಸಂಬಂಧ, ಬ್ರಿಟನ್ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಇಲಾಖೆ ಕಾರ್ಯದರ್ಶಿ ವಿಲಿಯಂ ಹೇಗ್ ಅವರು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಪತ್ರ ಬರೆದಿದ್ದು ಸೆ. 30ರಂದು ಬ್ರಾರ್ ಮೇಲೆ ನಡೆದ ದಾಳಿಗೆ `ಆಘಾತ~ ವ್ಯಕ್ತಪಡಿಸಿದ್ದಾರೆ.ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲದ ಬ್ರಿಟನ್ ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಹೇಗ್ ಅವರು ಈ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.`ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬ್ರಿಟನ್ ಸರ್ಕಾರ ಬದ್ಧವಾಗಿದೆ ಎಂದು ಹೇಗ್ ಪತ್ರದಲ್ಲಿ ವಿದೇಶಾಂಗ ಸಚಿವರಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ನಿರಂತರವಾಗಿ ಮಾಹಿತಿಗಳನ್ನು ಭಾರತದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದೂ ಹೇಗ್ ಹೇಳಿದ್ದಾರೆ~ ಎಂದು ಮೂಲಗಳು ಹೇಳಿವೆ.ಭಯೋತ್ಪಾದನೆಗೆ ಐಎಸ್‌ಐ ಪ್ರಚೋದನೆ

ನವದೆಹಲಿ (ಪಿಟಿಐ): ಪಾಕಿಸ್ತಾನದ ಐಎಸ್‌ಐ ಪ್ರಚೋದನೆಯಿಂದ ಸಿಖ್ ಪ್ರತ್ಯೇಕತಾವಾದಿಗಳು ಪಂಜಾಬ್‌ನಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ನಡೆಸಲು ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ನಿಧಿ ಸಂಗ್ರಹಿಸಲು ಆರಂಭಿಸಿದ್ದಾರೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವ ನಿಷೇಧಿತ ಬಬ್ಬರ್ ಖಾಲ್ಸಾ ಅಂತರರಾಷ್ಟ್ರೀಯ ಸಂಘಟನೆ ಮತ್ತು ಖಾಲಿಸ್ತಾನ್ ಕಮಾಂಡೊ ಪಡೆ ಸಿಖ್ ಯುವಕರಿಗೆ ಸುವರ್ಣ ಮಂದಿರದ ಬ್ಲೂಸ್ಟಾರ್ ಕಾರ್ಯಾಚರಣೆ ದೃಶ್ಯಗಳನ್ನು ತೋರಿಸಿ ಪ್ರಚೋದಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯ ವರದಿ ತಿಳಿಸಿದೆ.ಇತ್ತೀಚೆಗೆ ಬ್ಲೂಸ್ಟಾರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ನಿವೃತ್ತ ಲೆ. ಜ.ಕೆ.ಎಸ್. ಬ್ರಾರ್ ಮೇಲೆ ಲಂಡನ್‌ನಲ್ಲಿ ದಾಳಿ ಮತ್ತು ಲಂಡನ್‌ನಲ್ಲಿಯ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಯ ಘಟನೆಗಳು ಖಾಲಿಸ್ತಾನ ಪರ ಚಟುವಟಿಕೆ ಮತ್ತೆ ಚುರುಕಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವರದಿ ತಿಳಿಸಿದೆ.ಅಮೆರಿಕ, ಕೆನಡಾ, ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಬೆಲ್ಜಿಯಂನಲ್ಲಿ ಹುಟ್ಟಿ ಬೆಳೆದ ಸಿಖ್ ಯುವಕರನ್ನು ಐಎಸ್‌ಐ ಪ್ರಚೋದಿಸಿ ಮತ್ತೊಮ್ಮೆ ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಹುನ್ನಾರ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry