ಸೋಮವಾರ, ಏಪ್ರಿಲ್ 12, 2021
27 °C

ಲಂಡನ್ ಒಲಿಂಪಿಕ್ಸ್‌ಗೆ ಭಾರತದ 14 ಅಥ್ಲೀಟ್‌ಗಳು, ಪ್ರೀಜಾ, ಕವಿತಾ ಕನಸು ಭಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಷ್ಯನ್ ಕ್ರೀಡಾಕೂಟದ ಪದಕ ವಿಜೇತ ಅಥ್ಲೀಟ್‌ಗಳಾದ ಭಾರತದ ಪ್ರೀಜಾ ಶ್ರೀಧರನ್ ಮತ್ತು ಕವಿತಾ ರಾವತ್ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.ಮಹಿಳೆಯರ 10,000 ಮೀ. ಓಟದಲ್ಲಿ ಇವರು   ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಪ್ರಯತ್ನಲ್ಲಿದ್ದರು. ಆದರೆ ಇಟಲಿಯ ಸಾಂಟಿಯಾದಲ್ಲಿ ನಡೆದ ಅಥ್ಲೆಟಿಕ್ ಕೂಟದಲ್ಲಿ ಇಬ್ಬರಿಗೂ ನಿರಾಸೆ ಎದುರಾಯಿತು. ಶನಿವಾರ ನಡೆದ ಸ್ಪರ್ಧೆಯಲ್ಲಿ ಪ್ರೀಜಾ ಮತ್ತು ಕವಿತಾ ಓಟವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹಿಂದೆ ಸರಿದರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ.ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಜುಲೈ 8 ಅಂತಿಮ ಗಡುವು ಆಗಿತ್ತು. ಈ ಕಾರಣ ಇಬ್ಬರಿಗೂ ಇದು ಕೊನೆಯ ಅವಕಾಶ ಎನಿಸಿತ್ತು. 10,000 ಮೀ. ಓಟದಲ್ಲಿ ಒಲಿಂಪಿಕ್ಸ್ `ಬಿ~ ಸ್ಟ್ಯಾಂಡರ್ಡ್ ಅರ್ಹತಾ ಮಟ್ಟ 32:10.00 ಸೆಕೆಂಡ್ ಆಗಿವೆ.ಪ್ರೀಜಾ ಮತ್ತು ಕವಿತಾ ಉತ್ತಮ ಆರಂಭ ಪಡೆದಿದ್ದರು. ಆದರೆ 3,000 ಮೀ. ಕ್ರಮಿಸಿದ ಬಳಿಕ ಇಬ್ಬರ ವೇಗವೂ ತಗ್ಗಿತು. 5,000 ಮೀ. ದೂರವನ್ನು 16:28.00 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಕೊನೆಯವರೆಗೂ ಅದೇ ವೇಗದಲ್ಲಿ ಓಡಿದ್ದರೆ ಒಲಿಂಪಿಕ್ಸ್ ಅರ್ಹತಾ ಮಟ್ಟವನ್ನು ಮುಟ್ಟುವ ಸಾಧ್ಯತೆಯಿತ್ತು. ಆದರೆ ಆರು ಸಾವಿರ ಮೀ. ಕ್ರಮಿಸಿದ ಬಳಿಕ ಇಬ್ಬರೂ ಹಿಂದೆ ಸರಿದರು.ಪ್ರೀಜಾ 2010ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 10,000 ಮೀ. ಓಟದಲ್ಲಿ ಚಿನ್ನ ಹಾಗೂ 5,000 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕವಿತಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದರು.ಭಾರತದ 14 ಅಥ್ಲೀಟ್‌ಗಳು: ಲಂಡನ್ ಒಲಿಂಪಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಭಾರತದ 14 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಂದರೆ ಭಾರತ ತನ್ನ ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ತಂಡವನ್ನು ಕಣಕ್ಕಿಳಿಸಲಿದೆ. 2000 ದಲ್ಲಿ ಸಿಡ್ನಿಯಲ್ಲಿ ನಡೆದ   ಒಲಿಂಪಿಕ್ಸ್‌ನಲ್ಲಿ ಭಾರತದ 24 ಅಥ್ಲೀಟ್‌ಗಳು ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

`ಪೇಸ್ ಜೊತೆ ಆಡಲು ಒಪ್ಪಬೇಕಿತ್ತು~
ಕೋಲ್ಕತ್ತ (ಪಿಟಿಐ): `ಲಂಡನ್ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೂಡಿ ಆಡಲು ಮಹೇಶ್ ಭೂಪತಿ ಒಪ್ಪಿಗೆ ನೀಡಬೇಕಿತ್ತು~ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.`ಪೇಸ್ ಅತ್ಯುತ್ತಮ ಡಬಲ್ಸ್ ಆಟಗಾರ. ದೇಶದ ಹಿತಾಸಕ್ತಿಯಿಂದ ಪೇಸ್ ಜೊತೆ ಆಡಲು ಭೂಪತಿ ಒಪ್ಪಿಕೊಳ್ಳಬೇಕಿತ್ತು~ ಎಂದು ಅವರು ನುಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.