ಲಂಡನ್ ಒಲಿಂಪಿಕ್ಸ್‌ಗೆ ರಾಜ್ಯವರ್ಧನ್ ರಾಠೋಡ್‌ಗೆ ಸ್ಥಾನವಿಲ್ಲ

7

ಲಂಡನ್ ಒಲಿಂಪಿಕ್ಸ್‌ಗೆ ರಾಜ್ಯವರ್ಧನ್ ರಾಠೋಡ್‌ಗೆ ಸ್ಥಾನವಿಲ್ಲ

Published:
Updated:

ನವದೆಹಲಿ (ಪಿಟಿಐ): ಅಥೆನ್ಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಡಬಲ್ ಟ್ರ್ಯಾಪ್ ಶೂಟರ್ ರಾಜ್ಯವರ್ಧನ್ ಸಿಂಗ್ ರಾಠೋಡ್ ಅವರಿಗೆ ಲಂಡನ್ ಒಲಿಂಪಿಕ್ಸ್‌ಗೆ ಪ್ರಕಟಿಸಲಾಗಿ ರುವ ಭಾರತ ಶೂಟಿಂಗ್ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ಉದಯೋನ್ಮುಖ ಶೂಟರ್‌ಗಳಾದ ಹೀನಾ ಸಿಧು ಹಾಗೂ ಜಾಯ್‌ದೀಪ್ ಕರ್ಮಾಕರ್ 11 ಮಂದಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಉತ್ತರಾಖಂಡದ ರುದ್ರಪುರದಲ್ಲಿ ಭಾನುವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ರಾಜ್ಯವರ್ಧನ್ ಅವರ ಹೆಸರು ಪ್ರಸ್ತಾಪವಾಯಿತು. ಆದರೆ ಸ್ಥಿರ ಪ್ರದರ್ಶನ ತೋರುತ್ತಿಲ್ಲದ ಕಾರಣ ಅವರನ್ನು ಕೈಬಿಡಲಾಗಿದೆ. ಹರಿಓಂ ಸಿಂಗ್ ಹಾಗೂ ಇಮ್ರಾನ್ ಹಸನ್ ಖಾನ್ ಅವರಿಗೂ ಸ್ಥಾನ ಲಭಿಸಿಲ್ಲ.

`ಇದು ಒಮ್ಮತದ ನಿರ್ಧಾರ. ಸುದೀರ್ಘ ಸಮಾಲೋಚನೆ ನಡೆಸಿದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಯಾರು ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಹಾಗೂ ಅವರು ಇತ್ತೀಚೆಗೆ ನೀಡಿದ ಪ್ರದರ್ಶನವೇನು ಎಂಬುದರ ಬಗ್ಗೆಯೂ ಚರ್ಚೆಸಿದೆವು. ಅದರಲ್ಲಿ ರಾಠೋಡ್ ಹೆಸರು ಕೂಡ ಬಂತು. ಆದರೆ ಸ್ಥಿರ ಪ್ರದರ್ಶನ ತೋರುತ್ತಿರುವ ರೊಂಜನ್ ಸಿಂಗ್ ಸೋಧಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು~ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಸಲಹೆಗಾರ ಬಲ್ಜಿತ್ ಸಿಂಗ್ ಸೇಠಿ ತಿಳಿಸಿದರು.

ಆಯ್ಕೆ ಆಗಿರುವ ಶೂಟರ್‌ಗಳು 9 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.    2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅಭಿನವ್ ಬಿಂದ್ರಾ ಕೂಡ ಈ ಬಾರಿ ತಂಡದಲ್ಲಿದ್ದಾರೆ. ಗಗನ್ ನಾರಂಗ್ ಮೂರು ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ತಂಡ ಇಂತಿದೆ: ಅಭಿನವ್ ಬಿಂದ್ರಾ (10 ಮೀ. ಏರ್ ರೈಫಲ್), ಗಗನ್ ನಾರಂಗ್ (10ಮೀ, 50 ಮೀ. ರೈಫಲ್ ತ್ರಿಪೊಜಿಷನ್, 50 ಮೀ. ಪ್ರೋನ್), ಸಂಜೀವ್ ರಾಜ್‌ಪುತ್ (50 ಮೀ. ರೈಫಲ್ ತ್ರಿಪೊಜಿಷನ್), ಜಾಯ್‌ದೀಪ್ ಕರ್ಮಾಕರ್ (50 ಮೀ. ಪ್ರೋನ್), ವಿಜಯ್ ಕುಮಾರ್ (ರ‌್ಯಾಪಿಡ್ ಫೈರ್ ಪಿಸ್ತೂಲ್), ಅನುರಾಜ್ ಸಿಂಗ್, ಹೀನಾ ಸಂಧು (10 ಮೀ. ಏರ್ ಪಿಸ್ತೂಲ್), ಮಾನವಜಿತ್ ಸಿಂಗ್ ಸಂಧು (ಟ್ರ್ಯಾಪ್), ಶಗುನ್ ಚೌಧುರಿ (ಟ್ರ್ಯಾಪ್), ರವಿ ಶರ್ನೊಬಾತ್ (25 ಮೀ. ಪಿಸ್ತೂಲ್) ಹಾಗೂ ರೊಂಜನ್ ಸಿಂಗ್ ಸೋಧಿ (ಡಬಲ್ ಟ್ರ್ಯಾಪ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry