ಸೋಮವಾರ, ಅಕ್ಟೋಬರ್ 21, 2019
26 °C

ಲಂಡನ್ ನಲ್ಲಿ ನಟಿ ಮಾಧುರಿ ಮೇಣದ ತದ್ರೂಪ!

Published:
Updated:

ನವದೆಹಲಿ (ಐಎಎನ್ಎಸ್): ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಸಹಜ ನಟನೆ ಹಾಗೂ ಸೌಂದರ್ಯದಿಂದ ತನ್ನದೇ ಆದ ಛಾಪನ್ನು ಮೂಡಿಸಿರುವ ಹಿರಿಯ ನಟಿ ಮಾಧುರಿ ದಿಕ್ಷಿತ್ ಅವರ ಮೇಣದ ತದ್ರೂಪವು ಇಷ್ಟರಲ್ಲೇ ಲಂಡನ್ ನ  ಪ್ರಸಿದ್ಧ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸ್ಥಾನಗಿಟ್ಟಿಸಲಿದೆ. ನಲ್ವತ್ನಾಲ್ಕು ವಸಂತಗಳ ನಟಿ ಮಾಧುರಿ ದಿಕ್ಷಿತ್ ಅವರು, ತಮ್ಮ ಮೇಣದ ಪ್ರತಿಕೃತಿಯ ಸಿದ್ಧತೆಗಾಗಿ ಮುಂಬೈಗೆ ಆಗಮಿಸಿದ್ದ ಮ್ಯೂಸಿಯಂನ ಕಲಾವಿದರ ಎದುರು ರೂಪದರ್ಶಿಯಾಗಿ ನಿಂತಿದ್ದರು. ಇದೇ ಸಾಲಿನ ಮಾರ್ಚ್ ತಿಂಗಳಲ್ಲಿ ಮಾಧುರಿ ಅವರ ಮೇಣದ ತದ್ರೂಪವು ಲಂಡನ್ ನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳ್ಳಲಿದೆ.~ಮಾಧುರಿ ಅವರ ಮೇಣದ ಪ್ರತಿಮೆಯನ್ನು ಸಿದ್ಧಪಡಿಸಲು ಪರಿಣಿತ ಕಲಾವಿದರ ತಂಡವನ್ನು ರಚಿಸಲಾಗಿದೆ.  ಪ್ರತಿಮೆಯು ಸಿದ್ಧಗೊಳ್ಳಲು ನಾಲ್ಕು ತಿಂಗಳು ಸಮಯ ಬೇಕು. ತದ್ರೂಪಿ ಮೇಣದ ಪ್ರತಿಮೆಯ ನಿರ್ಮಾಣಕ್ಕಾಗಿ 150,000 ಪೌಂಡ್ ವೆಚ್ಚವಾಗಲಿದೆ~ ಎಂದು ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನ ಜಾಲತಾಣವು ತಿಳಿಸಿದೆ.~ ಇದರಿಂದ ನನ್ನ ನಟನೆ ಮತ್ತು ಸಾಧನೆಯನ್ನು ಗುರುತಿಸಿದಂತಾಗಿದೆ~ ಎಂದಿರುವ ಮಾಧುರಿ ಅವರು, ~ಬಾಲಿವುಡ್ ನ ನಾಯಕ ನಟರ ತದ್ರೂಪಗಳ ಸಾಲಿನಲ್ಲಿ ನನ್ನ ಮೇಣದ ಪ್ರತಿಮೆಯ ತದ್ರೂಪವು  ಪ್ರದರ್ಶನಗೊಳ್ಳುವ ಸಂಗತಿ ನನಗೆ ಸಂತಸ ತಂದಿದೆ~ ಎಂದಿದ್ದಾರೆ. ~ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ ನನ್ನನ್ನು ಗುರುತಿಸಿರುವುದಕ್ಕೆ ಕೃತಜ್ಞತೆ~ ಎಂದೂ ಮಾಧುರಿ ತಿಳಿಸಿದ್ದಾರೆ.

ಈಗಾಗಲೇ ಮ್ಯೂಸಿಯಂನಲ್ಲಿ ಭಾರತೀಯ ಸಿನಿಮಾದ ಖ್ಯಾತನಾಮರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯ ರೈ, ಋತಿಕ್ ರೋಷನ್, ಸಲ್ಮಾನ್ ಖಾನ್ ಅವರ ಮೇಣದ ತದ್ರೂಪಗಳು ಪ್ರದರ್ಶನಗೊಳ್ಳುತ್ತಿವೆ. ಇವುಗಳ ಸಾಲಿನಲ್ಲಿ ಇದೀಗ ಮಾಧುರಿ ದಿಕ್ಷಿತ್ ಅವರ ತದ್ರೂಪವೂ ಪ್ರದರ್ಶನಗೊಳ್ಳಲಿದೆ.  

 

 

Post Comments (+)