ಲಂಪೋ

7

ಲಂಪೋ

Published:
Updated:

ಲಂಪೋನ ತಲೆಯ ಮೇಲೆ ಕಾನೂನಿನ ಕಠಿಣ ಕೈಗಳು ಬಿದ್ದವು. ಅವನು ಬಾಳೆಯ ಚಿಪ್ಸ್‌ಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು, ರಸ್ತೆಯಂಚಿನಲ್ಲಿ ಕೂತು ಮಾರುತ್ತಿದ್ದ. ‘ನ್ಯೂ ಲೈಫ್ ರೆಸ್ಟೋರೆಂಟ್’ ಎದುರು ಪೊಲೀಸರ ಜೀಪು ಬಂದು ನಿಂತಾಗ, ಈ ಸುದ್ದಿ ರಸ್ತೆಯ ಎರಡೂ ಬದಿಗೆ ಮಿಂಚಿನಂತೆ ಹಬ್ಬಿತು. ಚಿಪ್ಸ್ ಮಾರುವವರೆಲ್ಲರೂ ಓಟ ಕಿತ್ತರು. ಲಂಪೋ ಸರ್ಕಲ್‌ನಲ್ಲಿ ಕೂತಿದ್ದ. ಅವನಿಗೆ ಈ ಸುದ್ದಿ ಸಮಯಕ್ಕೆ ಸರಿಯಾಗಿ ತಲುಪಲಿಲ್ಲ. ಅಥವಾ ಈ ಸುದ್ದಿಯೆಡೆಗೆ ಅವನು ಗಮನ ಕೊಡದ ಸಾಧ್ಯತೆಯೂ ಇದೆ. ಕಾರಣ, ಆಗ ಅವನು ತನ್ನ ಚಿಪ್ಸ್‌ನ ಬಗ್ಗೆ ಗಟ್ಟಿಯಾಗಿ ಗುಣಗಾನ ಮಾಡುತ್ತಿದ್ದ.ಪೊಲೀಸರ ಕೈ ಅವನ ಭುಜಗಳ ಮೇಲಿತ್ತು. ಆ ಹಿಡಿತದಲ್ಲಿ ಅವನ ಬಾಹುಗಳು ಪಕ್ಷಿಯ ರೆಕ್ಕೆಗಳಂತೆ ಬಡಿಯುತ್ತಿದ್ದವು.

‘ಸ್ಟೇಷನ್‌ಗೆ ನಡಿ!” ಗಂಭೀರ ಸ್ವರವೊಂದು ಗದರಿಸಿತು. ಅವನ ಕತ್ತಿನ ಬಳಿ ಹಿಡಿತ ಬಿಗಿಯಾಯಿತು.

“ಅಯ್ಯೋ!.... ಅಯ್ಯೋ!” ಲಂಪೋ ಕುರಿಯಂತೆ ಅರಚಿದ.

ಅವನು ತಲೆಯೆತ್ತಿ ನೋಡಿದ. ಪೊಲೀಸ್ ಉವಾಕನ ಕ್ರೂರ ಮುಖ ಕಂಡು ಲಂಪೋ ಕಂಪಿಸಿದ.

“ಒಂದು ಬಾರದಲ್ಲಿ ಎರಡನೇ ಸಲ!” ಉವಾಕ ಕಿರುನಗೆ ಬೀರಿದ.

“ಬುದ್ಧಿ....” ಲಂಪೋ ಮಾತನಾಡದಾದ.

“ಕಳೆದ ವಾರ ನೀನು ಕ್ಯಾಪ್ಟನ್ ಅಂತ ಹೇಳಿದ್ದೆ!” ಪೊಲೀಸ್ ಉವಾಕನ ಸ್ವರದಲ್ಲಿ ವ್ಯಂಗ್ಯವಿತ್ತು.

“ನನ್ನನ್ನು ಕ್ಷಮಿಸಿಬಿಡಿ, ಕ್ಯಾಪ್ಟನ್ ಸಾಹೇಬ್ರೆ!”

“ನಡಿ, ಮ್ಯಾಜಿಸ್ಟ್ರೇಟರು ಕಾಯ್ತಿದ್ದಾರೆ”

“ದಯವಿಟ್ಟು....” ಲಂಪೋ ಗೋಗೆರದ, “ಕಳೆದ ವಾರದ ನಷ್ಟವನ್ನೇ ಸುಧಾರಿಸಿಕೊಳ್ಳಲು ಆಗ್ತಿಲ್ಲ”

“ಇದು ನನ್ನ ತಪ್ಪೆ?”

“ಇಲ್ಲ ಬುದ್ಧಿ, ತಪ್ಪು ನನ್ನದೇ. ನನ್ನ ಮೂರ್ಖತನವೇ” ಲಂಪೋನ ಮುಖದಲ್ಲಿ ತೆಳು ಮುಗುಳ್ನಗೆ ಮೂಡಿತು. ಅವನು ಈಗ ಬುಟ್ಟಿಯಿಂದ ಒಂದು ಚಿಕ್ಕ ಚೀಲ ತೆಗೆದ.ಉವಾಕ ಮುಗುಳ್ನಗುತ್ತಾ ತನ್ನ ಹಿಡಿತವನ್ನು ಸಡಿಲಿಸಿದ. ನಂತರ ಲಂಪೋನ ಬೆನ್ನು ತಟ್ಟುತ್ತಾ ಹೇಳಿದ, “ನೀನು ಬೇಗ-ಬೇಗ ಕಲಿತುಕೊಳ್ತಿದ್ದೀಯ”.

ನಂತರ ಅವನು ಜೀಪ್ ಹತ್ತಿ ಕೂತ.ಲಂಪೋ ಮೌನ ತಾಳಿದ. ಮನದಲ್ಲೇ ಆ ಕೈಗಳಿಗೆ ಹಳಿದ. ಚೀಲದಲ್ಲಿ, ಕೈಗೆ ಸಿಕ್ಕಿದಷ್ಟು ಚಿಪ್ಸ್‌ಗಳನ್ನು ಹಾಕಿ ಚೀಲದ ಕತ್ತನ್ನು ಹೊರಳಿಸಿ ತನಗೆ ತಾನೇ ‘ಈ ಬೇವರ್ಸಿಯ ಕತ್ತನ್ನು ಹಿಚುಕುತ್ತಿರುವೆ’ ಎಂದುಕೊಂಡ.ಬುಟ್ಟಿಯಲ್ಲಿ ಚಿಪ್ಸ್‌ಗಳು ಕಡಿಮೆಯಾದವು.

“ಈ ಚಿಕ್ಕ ಕಾಣಿಕೆ ಸ್ವೀಕರಿಸಿ!” ಅವನ ಗಂಟಲಿನಿಂದ ಶಬ್ದಗಳು ಬಹುಪ್ರಯಾಸದಿಂದ ಹೊರಟವು.

“ಏನು? ಏನಂದೆ?”

“ಏನಿಲ್ಲ, ಇದನ್ನು ಕಿರುಕಾಣಿಕೆ ಎಂದು ತಿಳಿಯಿರಿ”

“ನೀನು ನನಗೆ ಲಂಚ ಕೊಡ್ತಿದ್ದೀಯ?” ಉವಾಕ ಚಿಪ್ಸ್‌ಗಳನ್ನು ಬಾಯಿಗೆ ಹಾಕಿಕೊಂಡ.

ಲಂಪೋ ಮಾತನಾಡಲಿಲ್ಲ.

“ನಿನ್ನ ಚಿಪ್ಸ್‌ಗಳಲ್ಲಿ ರುಚಿಯೇ ಇಲ್ಲ. ಸಕ್ಕರೆ ಹಾಕು”.ಲಂಪೋ ಕೈಯಿಂದ ಚಮಚ ತೆಗೆದುಕೊಂಡ. ಉವಾಕನ ಬಿಗಿ ಹಿಡಿತದಿಂದಾಗಿ ಅವನ ಹಳೆಯ ಅಂಗಿ ಹಿಂಭಾಗದಲ್ಲಿ ಹರಿದಿತ್ತು. ಉವಾಕನ ಬಗ್ಗೆ ಕಣ್ಣುಗಳಲ್ಲಿ ಜಿಗುಪ್ಸೆ ಮೂಡಿತ್ತು. ಹೀಗಾಗಿ ಅವನ ಮುಖದಲ್ಲಿ ಮುಗುಳ್ನಗೆ ಮೂಡುವುದು ಕಷ್ಟವಾಗುತ್ತಿತ್ತು.ಉವಾಕ ಜೀಪ್‌ನಿಂದ ಕೆಳಗಿಳಿದು ಬಂದು ಲಂಪೋನ ಅಂಗಿಗೆ ಒರೆಸುತ್ತಾ ಹೇಳಿದ, “ನಾಳೆ ಮತ್ತೆ ಬರ್ತೀನಿ, ಇಲ್ಲೇ ಇರು!”

“ನಾಳೆ ನಾನು ಬರಲ್ಲ” ಲಂಪೋ ತನ್ನ ಬೆತ್ತಲೆ ಕಾಲನ್ನು ಫುಟ್‌ಪಾಥ್‌ನ ಒಡೆದ ಕಲ್ಲಿಗೆ ಉಜ್ಜಿಕೊಳ್ಳುತ್ತಾ ಹೇಳಿದ.

“ನೀನು ಖಂಡಿತ ಬರ್ತೀಯ” ಉವಾಕ ಅವನನ್ನೇ ನೋಡಿದ.

“ಹೂಂ, ಬರ್ತೀನಿ”.ಉವಾಕ ಅವನನ್ನೇ ದುರುಗುಟ್ಟಿ ನೋಡಿದ. ನಂತರ ಫುಟ್‌ಪಾಥ್‌ನ ಬಳಿ ಇದ್ದ ಕೊಳಕು ನೀರಿಗೆ ಉಗಿದು ಹೊರಳಿದ. ಲಂಪೋ ಕೊಟ್ಟಿದ್ದ ಚಿಪ್ಸ್ ಚೀಲದಲ್ಲಿ ಇನ್ನೂ ಚಿಪ್ಸ್‌ಗಳಿದ್ದವು, ಆ ಚೀಲವನ್ನು ಇನ್ನೂ ಉವಾಕ ಹಿಡಿದುಕೊಂಡಿದ್ದ.ಪೊಲೀಸ್ ಉವಾಕ ಹೊರಟು ಹೋದ ಮೇಲೆ ಲಂಪೋ ವಾಸ್ತವ ಜಗತ್ತಿಗಿಳಿದ. ಅವನಿಗೆ ತಲೆ ಸುತ್ತುತ್ತಿತ್ತು. ಮುಂದಿನವಾರ ಚಿಪ್ಸ್ ತಯಾರಿಸುವಾಗ ಜಿಪುಣತನ ತೋರಬೇಕು. ಎಣ್ಣೆ, ಸಕ್ಕರೆ ಮತ್ತು ಅಕ್ಕಿಯಲ್ಲಿ ಉಳಿತಾಯ ಮಾಡಬೇಕಾಗುವುದು. ಕೊಳೆತ, ಹಾಳಾದ ಬಾಳೆಕಾಯಿಯನ್ನು ಖರೀದಿಸಬೇಕು.... ಕತ್ತಲಾಗುತ್ತಿದೆ, ಹೀಗಾಗಿ ಇನ್ನು ವ್ಯಾಪಾರ ಎಲ್ಲಾಗುತ್ತೆ! ಈ ಪೊಲೀಸ್ ಬಂದಾಗಲೆಲ್ಲಾ ಇವನಿಗೆ ತಿನ್ನಿಸುತ್ತಿರಬೇಕಾಗುವುದೆಂಬ ಚಿಂತೆ ಲಂಪೋಗೆ ತೀವ್ರವಾಗಿ ಕಾಡಿತು.ಹೀಗೆಲ್ಲಾ ಯೋಚಿಸಿದಾಗ ಲಂಪೋಗೆ ತಲೆನೋವೂ ತೀವ್ರವಾಗಿ ಕಾಡಿತು. ಅವನು ಬಲತ್ಕಾರದಿಂದ ನಕ್ಕು ಈ ವಿಷಯಗಳನ್ನು ತನ್ನ ತಲೆಯಿಂದ ಹೊರಗಟ್ಟಲು ಪ್ರಯತ್ನಿಸಿದ.ಲಂಪೋ ತಲೆತಗ್ಗಿಸಿ ಕೂತಿದ್ದ. ಮನೆಗೆ ಮರಳಿ ಹೋಗುವವರ ಗುಂಪು ಸಾಗುತ್ತಿತ್ತು. ಸಂಜೆಯ ಪತ್ರಿಕೆ ಮಾರುವ ಹುಡುಗರು, ಗದ್ದಲ, ಬಸ್‌ಗಳು, ಜೀಪ್‌ಗಳು, ಕಾರುಗಳು, ಲೌಡ್ ಸ್ಪೀಕರ್‌ಗಳ ಕಿರುಚಾಟ- ಇವನ್ನೆಲ್ಲಾ ಲಂಪೋ ತನ್ನೆದುರಿನ ಕೊಳಕು ನೀರಿನ ಪ್ರತಿಬಿಂಬದಲ್ಲಿ ಕಾಣುತ್ತಿದ್ದ. ಸಮೀಪದಿಂದ ಪಾದಚಾರಿಗಳು ಹಾದು ಹೋದಾಗ ನೀರಿನಲ್ಲಿ ಅಲೆಗಳೇಳುತ್ತಿದ್ದವು. ಆಗಲೇ ತಡವಾಗಿತ್ತು. ಅವನೂ ದಣಿದಿದ್ದ. ತನ್ನ ತಲೆಯ ಮೇಲೆ ಬುಟ್ಟಿ ಏರಿಸಿಕೊಂಡು, ತನ್ನ ಕಾಲುಗಳನ್ನು ಸಂಕೀರ್ಣ ಗಲ್ಲಿಗಳಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸಿಗರೇಟ್ ತುಂಡುಗಳು ಮತ್ತು ರದ್ದಿ ಕಾಗದಗಳಲ್ಲಿ ಎಳೆದುಕೊಳ್ಳುತ್ತಾ ಮನೆಗೆ ನಡುರಾತ್ರಿಗೆ ಬಂದ.ಅವನು ಕೂಗುವುದಕ್ಕೂ ಮೊದಲೇ ಮನೆಯ ಬಾಗಿಲು ತೆರೆದುಕೊಂಡಿತು. ಅವನ ಹೆಂಡತಿ ಎದಾದ್ ತನ್ನ ನಾಲ್ಕನೆಯ ಮಗುವನ್ನು ಎತ್ತಿಕೊಂಡು ಎದುರಿಗೆ ನಿಂತಿದ್ದಳು. ಅವಳ ಹಿಂದೆ ಬುಟ್ಟಿಯಂತಹ ತೊಟ್ಟಿಲು ಹಗ್ಗದ ಆಸರೆಯಿಂದ ಮೆಲ್ಲನೆ ತೂಗಾಡುತ್ತಿತ್ತು.“ಏನಾಯ್ತು?” ಲಂಪೋನ ಮುಖ ನೋಡಿದೊಡನೆಯೇ, ಏನೋ ಘಟಿಸಿದೆ ಎಂದು ಎದಾದ್‌ಳಿಗನ್ನಿಸಿತು.

ಲಂಪೋ ತಲೆಯಾಡಿಸುತ್ತಾ ಬಾಗಿಲನ್ನು ತಳ್ಳಿದ. ಸೀಮೆಯೆಣ್ಣೆಯ ದೀಪ ಬಾಗಿಲ ಗಾಳಿಗೆ ಒಮ್ಮೆ ಬಲವಾಗಿ ಕಂಪಿಸಿ ಮತ್ತೆ ಸ್ಥಿರವಾಯಿತು.

“ನೋಡಿ!” ಎದಾದ್ ಶುಷ್ಕತೆಯಿಂದ ಹೇಳಿ ತನ್ನ ಕುಪ್ಪಸದ ಗುಂಡಿಗಳನ್ನು ಬಿಚ್ಚಿ ತೋರಿಸಿದಳು. ದೀಪದ ಬೆಳಕಿನಲ್ಲಿ ಅವಳ ಕುಚಗಳು ಖಾಲಿ ಚೀಲದಂತೆ ಒಳಹೋಗಿದ್ದವು.“ಮೊದಲಿನಂತೆಯೇ ಇವೆ” ಲಂಪೋನ ಸ್ವರದಲ್ಲಿ ನಿರಾಸೆಯಿತ್ತು.

“ಇಲ್ಲ” ಎದಾದ್ ಹೇಳಿದಳು, “ನಮಗೆ ಯಾವುದೂ ಮೊದಲಿನಂತಿಲ್ಲ. ನಿಮ್ಮ ಮಗು ಇಂದು ಬೆಳಿಗ್ಗೆಯಿಂದ ಗಾಳಿಯನ್ನು ಮಾತ್ರ ಚೀಪುತ್ತಿದೆ. ನಾನು ನಿಮ್ಮನ್ನೇ ಕಾಯುತ್ತಿದ್ದೆ. ದುಡ್ಡು ಕೊಡಿ!”“ದುಡ್ಡೆಲ್ಲಿದೆ?.... ಪೊಲೀಸು ಇಂದು ಮತ್ತೆ ಬಂದಿದ್ದ”. ಲಂಪೋ ಅರ್ಧ ಖಾಲಿಯಾಗಿದ್ದ ಬುಟ್ಟಿಯನ್ನು ಮೇಜಿನ ಮೇಲಿಟ್ಟ.

ಎದಾದ್ ಮುಷ್ಟಿ ಬಿಗಿಯುತ್ತಾ ಅವನ ಬಳಿಗೆ ಬಂದು ಅವನ ಮುಖಕ್ಕೆ ಬಲವಾಗಿ ಗುದ್ದಿದಳು, “ನಿಮ್ಮ ತಲೆ ನಿಮ್ಮ ಹೆಸರಿನಂತೆಯೇ ಇದೆ!”

ಆಗ ಮಗು ಎಚ್ಚರಗೊಂಡು ರೋದಿಸಿತು.“ಇನ್ನೂ ಗಟ್ಟಿಯಾಗಿ ಅಳು, ಆಗಲಾದರೂ ನಿಮ್ಮಪ್ಪ ಎಚ್ಚರಗೊಳ್ಳಬಹುದು!”

ಮಗುವಿನ ರೋದನ ತೀವ್ರವಾಯಿತು.“ನಾನು ನನ್ನ ಬುಟ್ಟಿಯನ್ನು ಅಡಗಿಸಿಟ್ಟುಕೊಳ್ಳುವುದಕ್ಕೂ ಮೊದಲೇ ಪೊಲೀಸ್ ಅಲ್ಲಿಗೆ ಬಂದಿದ್ದ” ಲಂಪೋ ತನ್ನ ಗಲ್ಲಗಳನ್ನು ತಡವರಿಸಿಕೊಂಡ.

“ನೋಡಿ, ನಿಮ್ಮ ಮಗುವಿನಲ್ಲಿ ನಿಮಗಿಂತ ಒಳ್ಳೆ ತಲೆಯಿದೆ. ಅದಕ್ಕೆ ಪೆಟ್ಟಾದರೆ ಅಳುತ್ತೆ!” ಎದಾದ್ ಅವನ ಮಾತಿಗೆ ಗಮನ ಕೊಡದೆ ಹೇಳಿದಳು.

ಲಂಪೋ ಮೌನಿಯಾಗಿ ನಿಂತಿದ್ದ. ಅವನ ಉಸಿರಾಟ ಈ ಮೊದಲಿಗಿಂತ ತೀವ್ರವಾಯಿತು. ಹಣೆಯಲ್ಲಿ ಬೆವರ ಹನಿಗಳು ಹೊಳೆಯುತ್ತಿದ್ದವು.“ಎದಾದ್, ಇಷ್ಟು ವರ್ಷಗಳಾದರೂ ನೀನು ನನ್ನನ್ನು ಅರ್ಥಮಾಡಿಕೊಂಡಿಲ್ಲ?”

“ನಾನು ತುಂಬಾ ಕಲಿತಿರುವೆ” ಎನ್ನುತ್ತ ಎದಾದ್ ಮಗುವನ್ನು ತೊಟ್ಟಿಲಿಗೆ ಹಾಕಿದಳು.

ನನ್ನಿಂದಾಗಿ ಇವಳು ತೊಂದರೆಯನ್ನು ಅನುಭವಿಸುತ್ತಿದ್ದಾಳೆ ಎಂದು ಲಂಪೋ ಯೋಚಿಸಿದ. ಎದಾದ್ ಬಾಗಿ ಮಗುವನ್ನೇ ಗಮನಿಸುತ್ತಿದ್ದಳು. ಅವಳ ಹೊಳೆಯುವ ಕಣ್ಣೀರು ಕಣ್ಣುಗಳ ಅಂಚಿನಲ್ಲಿ ಗೋಚರಿಸುತ್ತಿತ್ತು. ಅವಳ ಎರಡೂ ಬಾಹುಗಳು ಬಟ್ಟೆಗಳನ್ನು ಒಗೆದೂ-ಒಗೆದೂ ಸುಕ್ಕು ಗಟ್ಟಿದ್ದವು.ಎದಾದ್ ಹಿಟ್ಟಿನ ಚೀಲದಿಂದ ತಯಾರಿಸಿದ ಕಂಬಳಿಯನ್ನು ಕೊಡವಿ ಮಗುವಿಗೆ ಹೊದಿಸಿದಳು.

“ನನಗೆ ತುಂಬಾ ದುಃಖವಾಗ್ತಿದೆ” ಲಂಪೋ ಎದಾದಳನ್ನೇ ನೋಡಿದ.

“ದುಃಖಪಡುವ ಸಮಯ ಮೀರಿದೆ?”

ಲಂಪೋನ ಹೆಜ್ಜೆಗಳು ಬಾಗಿಲ ಬಳಿಗೆ ಬಂದವು.

“ಎಲ್ಲಿಗೆ ಹೋಗ್ತಿದ್ದೀರಿ?”

ಲಂಪೋ ಮಾತನಾಡದೆ ಹೆಗಲುಗಳನ್ನು ಕುಣಿಸಿದ.

“ನಿಮಗೆ ಹುಚ್ಚು ಹಿಡಿದಿದೆಯೇ? ಅರ್ಧ ರಾತ್ರಿಗೂ ಮೀರಿ ಸಮಯವಾಗಿದೆ”

“ಇದಕ್ಕೂ ನಿನಗೂ ಏನು ಸಂಬಂಧ?”ಲಂಪೋ ಬಾಗಿಲು ತೆರೆದ. ಎದಾದ್ ನಿಂತಲ್ಲೇ ಗಾಬರಿಗೊಂಡಳು. ಆದರೆ ಅಷ್ಟರಲ್ಲಿ ಲಂಪೋ ಹೊರಗಿನ ಅಂಧಕಾರದಲ್ಲಿ, ಕಣ್ಮರೆಯಾಗಿದ್ದ.

“ನಿಲ್ಲಿ, ನಿಲ್ಲಿ!” ಎದಾದ್ ರೋದಿಸಿದಳು. ಆದರೆ ಲಂಪೋ ಅಂಕು-ಡೊಂಕು ಗಲ್ಲಿಗಳಲ್ಲಿ ಓಡುತ್ತಾ ಹೋದ. ಅವನು ಏದುಸಿರು ಬಿಡುತ್ತಿದ್ದ. ಕೈಯಲ್ಲಿದ್ದ ಬುಟ್ಟಿ ಭಾರವೆನಿಸಿತು. ಅವನು ಕಸ-ಕಡ್ಡಿಗಳನ್ನು ದಾಟುತ್ತಾ ಓಡುತ್ತಲೇ ಇದ್ದ. ತಲೆ ಸುತ್ತುತ್ತಿತ್ತು. ಲಂಪೋ ಅದೇ ‘ನ್ಯೂ ಲೈಫ್ ರೆಸ್ಟೋರೆಂಟಿ’ನ ಬಳಿಗೆ ಬಂದು, ಆಯಾಸದಿಂದಾಗಿ ಕುಸಿದು ಬಿದ್ದ. ತನ್ನ ಕಂಪಿಸುವ ಕೈಯಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ.ಬೆಳಿಗ್ಗೆ ಬೀದಿ ಕಸಗುಡಿಸುವವರ ಕಸಪರಿಕೆಗಳ ಶಬ್ದದಿಂದಾಗಿ ಲಂಪೋಗೆ ಎಚ್ಚರವಾಯಿತು. ಅವನು ಒಮ್ಮೆಲೆ ಎದ್ದು ರೆಸ್ಟೋರೆಂಟಿನ ಕಿಟಕಿಯನ್ನು ಆಶ್ರಯಿಸಿ ಕೂತ. ಕಿಟಕಿಯ ಗಾಜಿನಲ್ಲಿ ಅವನಿಗೆ ತನ್ನ ಪರಿಚಿತ ಆದರೆ ಅಪರಿಚಿತ ಮುಖಗಳು ಕಂಡವು. ಜೊತೆಗೆ ಒಳಗೆ ನೇತಾಡುತ್ತಿದ್ದ ಕೋಳಿಯ ಮುಂಡವೂ ಕಾಣಿಸಿತು.ಕ್ರಮೇಣ ಗಲ್ಲಿಯಲ್ಲಿ ಬೆಳಕು ವೃದ್ಧಿಸಿತು. ಲಾಟರಿ ಮಾರಾಟಗಾರರು, ಪ್ಲಾಸ್ಟಿಕ್ ಬಾಕ್ಸ್‌ಗಳು, ಆಟಿಕೆಗಳು, ಚಾಕುಗಳು, ಕತ್ತರಿಗಳು ಮತ್ತು ಬಾಲ್‌ಪೆನ್‌ಗಳನ್ನು ಮಾರುವವರು ತಮ್ಮ ತಮ್ಮ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಲು ಪ್ರಾರಂಭಿಸಿದರು.ಲಂಪೋ ಎದ್ದು ಮುಂದಿನ ಸರ್ಕಲ್‌ಗೆ ಹೋದ. ಬುಟ್ಟಿಯಲ್ಲಿದ್ದ ಬಾಳೆ ಚಿಪ್ಸ್‌ಗಳು ಧೂಳಿನಿಂದಾಗಿ ತಮ್ಮ ಬಣ್ಣವನ್ನು ಕಳೆದುಕೊಂಡಿದ್ದವು. ಹಗಲು ಹೆಚ್ಚಿತು. ಲಂಪೋ ಸಿಟ್ಟಿನಿಂದ ಬುಟ್ಟಿಯನ್ನು ನೋಡುತ್ತಾ ಕೂತ. ಒಮ್ಮೆಯೂ ಗಿರಾಕಿಗಳನ್ನು ಕರೆಯಲಿಲ್ಲ, ಅವರೆಡೆಗೆ ನೋಡಲೂ ಇಲ್ಲ.

“ನಿದ್ರೆ ಮಾಡ್ತಿದ್ದೀಯಾ?” ಸ್ವರವೊಂದು ಪ್ರಶ್ನಿಸಿತು. ಲಂಪೋನ ಮುಖ ಒಳಗಿನ ಶಾಖದಿಂದ ಕೆಂಪಗಾಯಿತು.“ತುಂಬಾ ಹೊತ್ತಿನಿಂದ ಕಾಯ್ತಿದ್ದೀಯಾ?” ಉವಾಕ ಸ್ವರವನ್ನು ಮಂದಗೊಳಿಸುತ್ತಾ ಕೇಳಿದ.

ಲಂಪೋ ತನ್ನೆರಡೂ ಕೈಗಳ ಮುಷ್ಟಿಗಳನ್ನು ಸಡಿಲಗೊಳಿಸುತ್ತಾ- ಬಿಗಿಗೊಳಿಸುತ್ತಾ ಕೇಳಿದ, “ನೀವು ನನ್ನಿಂದ ಬಯಸುವುದಾದರೂ ಏನನ್ನು?”

“ಬಯಸುವುದು? ನಾನು ನಿನ್ನಿಂದ ಏನನ್ನು ಬಯಸುವುದು ಸಾಧ್ಯ?” ಪೊಲೀಸ್ ಉವಾಕ ಲಂಪೋನ ಹೆಗಲ ಮೇಲೆ ಕೈಯಿಟ್ಟ.

“ನನ್ನ ಮುಟ್ಟಬೇಡಿ!”

“ಏನ್ ವಿಷಯ?”

“ನೀವು... ನೀವು!” ಸಿಟ್ಟಿನ ಆವೇಶದಲ್ಲಿ ಲಂಪೋ ಮಾತನಾಡದಾದ.

“ನೀನಿವತ್ತು ಜೋರಾಗಿ ಮಾತಾಡ್ತಿದ್ದೀಯ! ನೀನು ನನಗೆ ಬಾ ಅಂತ ಕರೆದಿದ್ದೆಯಲ್ಲ?”

“ಕಳ್ಳ!” ಲಂಪೋ ಸೆಟೆದು ನಿಂತ.

“ಏನಂದೆ?”

“ಕಳ್ಳ!” ಲಂಪೋ ಮತ್ತು ಗಟ್ಟಿಯಾಗಿ ಹೇಳಿದ.“ನೀನು ಕೂತ್ಕೋ!” ಬೇರೆಯವರು ತನಗೆ ಲಂಪೋ ನಿಂದಿಸಿದ್ದನ್ನು ಗಮನಿಸಿಲ್ಲ ತಾನೇ ಎಂದು ಉವಾಕ ಅತ್ತ-ಇತ್ತ ದೃಷ್ಟಿ ಹರಿಸಿದ. ಲಂಪೋ ಕುಳಿತುಕೊಳ್ಳಲಿಲ್ಲ. ಉವಾಕ ಮತ್ತೆ ಗದರಿಸಿದ, “ನಾನು ಹೇಳಿದ್ದು ನಿನಗೆ ಕೇಳಿಸಲಿಲ್ವಾ?”“ಕೂತು-ಕೂತು ದಣಿದಿರುವೆ” ಲಂಪೋ ಸ್ವರದಲ್ಲೂ ಗದರಿಕೆಯಿತ್ತು.

ಉವಾಕ ಅವನನ್ನು ತಳ್ಳಿದ. ಲಂಪೋ ದಢಾರನೆ ಬಿದ್ದ. ಬಿದ್ದ ಶಬ್ದಕ್ಕೆ ಜನ ನಿಂತು, “ಏನಾಯ್ತು, ಏನಾಯ್ತು?” ಎಂದು ಪ್ರಶ್ನಿಸಿದರು. ತಲೆಗೆ ಪೆಟ್ಟು ಬಿದ್ದಿದ್ದರಿಂದಾಗಿ ಲಂಪೋನ ತಲೆಯಿಂದ ರಕ್ತ ಒಸರಿ ಕೆಳಗೆ ಬೀಳುತ್ತಿತ್ತು.“ನೀನು ಕಳ್ಳ!” ಮಲಗಿದ್ದಲ್ಲಿಯೇ ಲಂಪೋ ಕಿರುಚಿದ.

ನಂತರ ಅಲ್ಲಿಂದೆದ್ದು ಬಾಳೆ ಚಿಪ್ಸ್‌ನ ಬುಟ್ಟಿಯನ್ನೆತ್ತಿ ಉವಾಕನ ಮೇಲೆಸೆದು ಹೇಳಿದ, “ತಗೋ! ಎಲ್ಲವನ್ನೂ ತಿಂದುಬಿಡು, ಹಸಿವು ಇಂಗದಿದ್ದರೆ, ನನ್ನನ್ನು ಕರೆದೊಯ್ಯಿ!”ಉವಾಕನ ಖಾಕಿ ಸಮವಸ್ತ್ರದ ಮೇಲೆ ಬಾಳೆಚಿಪ್ಸ್‌ನ ಕಲೆಗಳು ಮೂಡಿದವು. ಗುಂಪು ಚದುರಿತ್ತು.

“ಪಾಪ, ಸಾಯಿಸಿಬಿಟ್ಟ” ಯಾರೋ ಲಂಪೋನ ಪರಿಸ್ಥಿತಿ ಕಂಡು ಉದ್ಗರಿಸಿದರು.

“ಏನಾಯ್ತು?” ಮತ್ತೊಬ್ಬರು ವಿಚಾರಿಸಿದರು.“ಏನಿಲ್ಲ, ಕುಡಿದಿದ್ದಾನೆ. ಇವನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗ್ತೀನಿ” ಉವಾಕ ಸಮಜಾಯಿಷಿ ಹೇಳಿದ. ಆದರೆ ಲಂಪೋ ತಲೆಯಿಂದ ರಕ್ತ ಒಸರುತ್ತಿರುವುದನ್ನು ಕಂಡು ಅವನೂ ಗಾಬರಿಗೊಂಡಿದ್ದ.

 “ಮೊದ್ಲು ಇವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ!” ಇನ್ಯಾರೋ ಸಲಹೆಯಿತ್ತರು.ಕೆಲವರು ಮುಂದೆ ಬಂದರು, ಲಂಪೋನನ್ನು ಎತ್ತಿದರು. ಪೊಲೀಸ್ ಉವಾಕ ಈ ನಡುವೆ ಜಾರಿಕೊಂಡ. ಲಂಪೋ ರಕ್ತ ಒರೆಸಿಕೊಳ್ಳುತ್ತಾ ಹೇಳಿದ, “ನಾನು ಚೆನ್ನಾಗಿದ್ದೇನೆ, ನೀವು ಹೋಗಿ!”ಗುಂಪು ಚದುರಿತು. ಜನ ತಮ್ಮ-ತಮ್ಮ ದಾರಿ ಹಿಡಿದರು. ಅವನ ಬಾಳೆಚಿಪ್ಸ್‌ಗಳನ್ನು ಜನ ತುಳಿಯುತ್ತಾ ಸಾಗುತ್ತಿದ್ದರು. ಸ್ವಲ್ಪಹೊತ್ತಿಗೆ ಮುಂಚೆ ಅವನ ತಲೆಯಿಂದ ಒಸರಿ ಬಿದ್ದಿದ್ದ ರಕ್ತದ ಹನಿಗಳ ಮೇಲೂ ಜನರ ಕಾಲುಗಳು ಸಾಗಿದ್ದವು, ಹೀಗಾಗಿ ರಸ್ತೆ ಸ್ವಚ್ಛವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry