ಲಂಬಾಣಿಗರ ವಿಶಿಷ್ಟ ದೀಪಾವಳಿ ಆಚರಣೆ

7

ಲಂಬಾಣಿಗರ ವಿಶಿಷ್ಟ ದೀಪಾವಳಿ ಆಚರಣೆ

Published:
Updated:

ಭರಮಸಾಗರ:  ನಗರ, ಪಟ್ಟಣಗಳಿಗಿಂತ ಗ್ರಾಮೀಣ ಭಾಗದಲ್ಲಿ ಆಚರಿಸುವ ಹಬ್ಬಗಳ ಸೊಗಸು-ಸಂಭ್ರಮಗಳೇ ವಿಶಿಷ್ಟ. ಪ್ರತಿಯೊಂದು ಹಳ್ಳಿ, ಜಾತಿ, ಸಮುದಾಯಗಳ ವಿಭಿನ್ನ ರೀತಿಯ ನಡವಳಿಕೆ, ನಂಬಿಕೆಗಳು ಹಬ್ಬದ ಆಚರಣೆಗಳಲ್ಲಿ ಬಿಂಬಿತವಾಗುತ್ತವೆ.ಹೋಬಳಿಯ ಬೇವಿನಹಳ್ಳಿ ತಾಂಡಾದಲ್ಲಿ ಕೂಡ ದೀಪಾವಳಿ ಹಬ್ಬದ್ಲ್ಲಲಿ ವಿಭಿನ್ನ ರೀತಿಯ ಸಾಂಪ್ರದಾಯಿಕ ಆಚರಣೆಗಳು ಕಂಡುಬರುತ್ತವೆ. ತಾಂಡಾದ ಸಂಪ್ರದಾಯದಂತೆ ಹಬ್ಬದ ಹಿಂದಿನ ರಾತ್ರಿ ದೀಪಗಳನ್ನು ಹಚ್ಚಿ ವಿವಿಧ ರೀತಿಯ ಧಾರ್ಮಿಕ ವಿಧಿ, ಆಚರಣೆಗಳನ್ನು ಮಾಡಲಾಗುತ್ತದೆ.ಬೆಳಿಗ್ಗೆ ಕೋರು ಹುಡುಗಿಯರು (ಮದುವೆಯಾಗದ) ಮಡಿಯುಟ್ಟು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ತಲೆ ಮೇಲೆ ಗಣ್ಯೋಪುಲ್ಯೊ ಧರಿಸಿ ಅದರ ಮೇಲೆ ಹೂವು ತರುವ ಪುಟ್ಟಿ ಇಟ್ಟುಕೊಂಡು ಉರುಮೆ ಮುಂತಾದ ವಾದ್ಯಗಳ ಸದ್ದಿಗೆ ನೃತ್ಯ ಮಾಡುತ್ತಾರೆ. ಇವರೊಂದಿಗೆ ಗ್ರಾಮದ ಹಿರಿಯ ಮಹಿಳೆಯರು ಹೆಜ್ಜೆ ಹಾಕುತ್ತಾರೆ.ಬಳಿಕ ಹಿರಿಯರ ಪೂಜೆಗೆ ಹೂವು ತರಲು ಹೊರಟ ಯುವತಿಯರನ್ನು ಪೋಷಕರು ಊರ ಬಾಗಿಲವರೆಗೆ ಬಂದು ಕಳುಹಿಸಿಕೊಡುತ್ತಾರೆ. ಈ ರೀತಿ ಹೊರಟ ಕೋರುಹುಡುಗಿಯರು ಲಂಬಾಣಿ ಭಾಷೆಯಲ್ಲಿ ಹಬ್ಬದ ಮಹತ್ವ ಸಾರುವ ಹಾಡುಗಳ ಜತೆಗೇ, ಪೂಜೆಗೆ ಹೂವು ಕೀಳಲು ಬಂದ ತಮ್ಮನ್ನು ಬಯ್ಯಬೇಡಿ ಎಂದು ಹೊಲದ ಮಾಲೀಕರಿಗೆ ಮನವಿ ಮಾಡಿಕೊಳ್ಳುವ ಹಾಡ್ನು ಹಾಡುತ್ತಾ ಹೂವುಗಳನ್ನು ಕಿತ್ತು ಪುಟ್ಟಿಯಲ್ಲಿ ಸಂಗ್ರಹಿಸಿಕೊಳ್ಳುತ್ತಾರೆ.ನಂತರ ವಾಡಿಕೆಯಂತೆ  ಹೊಲ, ತೋಟದಲ್ಲಿ ಕೆಲಕಾಲ ವಿಶ್ರಮಿಸಿಕೊಳ್ಳುವ ಹುಡುಗಿಯರು ಅಲ್ಲಿ ತಮ್ಮ ಗೆಳತಿಯರೊಂದಿಗೆ ಸಹಭೋಜನ ನಡೆಸಿ ಕಷ್ಟು-ಸುಖ ಹಂಚಿಕೊಳ್ಳುತ್ತಾರೆ. ಮದುವೆ ವಯಸ್ಸಿಗೆ ಬಂದ ಹುಡುಗಿಯರು ಮದುವೆ ನಂತರ ತವರಿನಲ್ಲಿ ನಡೆಯುವ ಇಂತಹ ಆಚರಣೆಯಲ್ಲಿ ಗೆಳತಿಯರ ಜತೆ ಪಾಲ್ಗೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ನೆನಸಿಕೊಂಡು ಪರಸ್ಪರ ತಬ್ಬಿಕೊಂಡು ಅಳುತ್ತಾರೆ.ನಂತರ ಹೂವಿನ ಪುಟ್ಟಿಯೊಂದಿಗೆ ಮನೆಗಳಿಗೆ ಮರಳುತ್ತಾರೆ. ಗುರುವಾರ ಬೇವಿನಹಳ್ಳಿ ತಾಂಡಾದಲ್ಲಿ ಈ ರೀತಿ ಆಚರಣೆ ನಡೆಸಿದ ಯುವತಿಯರು ಹೂವು ತಂದು ಮನೆಯಂಗಳದಲ್ಲಿ ಚೆಲ್ಲಿ, ಸಗಣಿಯಲ್ಲಿ ಬೆರೆಸಿ ಗೋದ್ನ ತಯಾರಿಸಿ ಮನೆ ಬಾಗಿಲ ಬಳಿ ಇಟ್ಟು ತವರು ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ದೀಪ ಹಚ್ಚಿದ ನಂತರ ಹಿರಿಯರ ಪೂಜೆ ನೆರವೇರಿಸಲಾಯಿತು.ರಾತ್ರಿ ಗ್ರಾಮದ ಎಲ್ಲರ ಮನೆಗಳ ಬಳಿ ಗುಂಪಾಗಿ ತೆರಳಿ ಹಾಡಿಕೊಂಡು ನೃತ್ಯ ಮಾಡಿದ ಯುವತಿಯರು ಹಿರಿಯರು ಹರಸಿ ಕೊಟ್ಟ ಕಾಣಿಕೆ ಸ್ವೀಕರಿಸಿದರು.ವ್ಯಾಪಾರ, ನೌಕರಿ, ನಾನಾ ಕಾರಣಗಳಿಂದ ಗ್ರಾಮದಿಂದ ದೂರ ಇರುವ ಪ್ರತಿಯೊಬ್ಬರು ತಪ್ಪದೇ ದೀಪಾವಳಿ ಹಬ್ಬಕ್ಕೆ ಗ್ರಾಮಕ್ಕೆ ಹಿಂತಿರುಗಿ ಬಳಗದೊಂದಿಗೆ ಸಡಗರದಿಂದ ಹಬ್ಬ ಆಚರಿಸುತ್ತಾರೆ.

   ವಿ.ಎಂ. ಶಿವಪ್ರಸಾದ್    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry