ಭಾನುವಾರ, ಸೆಪ್ಟೆಂಬರ್ 15, 2019
23 °C

ಲಂಬೋದರನಿಗೆ ಸಂಭ್ರಮದ ವಿದಾಯ

Published:
Updated:

ರಾಮದುರ್ಗ: ರಾಮದುರ್ಗ ಪಟ್ಟಣದಲ್ಲಿ ಗಣೇಶ ವಿಸರ್ಜನೆಯ ಸಮಯಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ಮಸೀದಿ ಮುಂಭಾಗದಿಂದ ಹಾಯ್ದು ಹೋಗುವ ಪ್ರತಿಯೊಂದು ಗಣೇಶ ಮೂರ್ತಿಗಳಿಗೆ ಹೂಹಾರ ಹಾಕುವ ಮೂಲಕ ಹಿಂದೂ-ಮುಸ್ಲಿಂರ ಸಾಮರಸ್ಯಕ್ಕೆ ನಾಂದಿ ಹಾಡಿದರು.ತೇರಬಜಾರಿನ ವಿಘ್ನೇಶ್ವರನಿಗೆ ಮುಸ್ಲಿಂ ಸಮುದಾಯ ಹಿರಿಯರು ಹೂಹಾರ ಹಾಕಿದರು. ಹಿಂದೂಗಳನ್ನು ಆಲಂಗಿಸಿಕೊಂಡು ಹಬ್ಬದ ಸಂಭ್ರಮಾ ಚರಣೆಯಲ್ಲಿ ಭಾಗವಹಿಸಿದರು. ಮೊನ್ನೆನ ದಿನ ಮುಸ್ಲಿಂ ಬಾಂಧವರು (ಕಾರ್ ಸ್ಟ್ಯಾಂಡಿನ ಯುವಕರು ) ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸುವ ಮೂಲಕ ಜಾಗೃತಿ ಮೂಡಿಸಿದ್ದರು. ಅದರಂತೆ ಮುಸ್ಲಿಮರು ವಿಸರ್ಜನೆಯ ಸಮಯಕ್ಕೆ ಕೋಮು ಸಾಮರಸ್ಯ ಕದಡುವ ವ್ಯಕ್ತಿಗಳೇ ಹುಬ್ಬೇರಿಸುವಂತೆ ಮೂರ್ತಿಗಳನ್ನು ಸ್ವಾಗತಿಸಿ ಭಾವೈಕ್ಯತೆ ಮೆರೆದರು.ಮುಸ್ಲಿಂ ಸಮುದಾಯವೇ ಮೂರ್ತಿಗಳಿಗೆ ಹೂಮಾಲೆ ಹಾಕುವುದನ್ನು ನೋಡಲು ಹೆಚ್ಚಿನ ಸಂಖ್ಯೆ ಜನತೆ ಸೇರಿತ್ತು. ಬಸೀರಅಹ್ಮದ್ ರೋಣದ, ರಸೂಲ ಬೆಣ್ಣಿ, ಮೈತಾಬಲಿ ಪಠಾಣ, ಮತ್ತು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರು ಸೇರಿದಂತೆ ಇತರರು ಹಾಜರಿದ್ದರು.ಮಸೀದಿ ಮುಂಭಾಗದಿಂದ ಸಾಗಿದ ಗಣೇಶ ಮೂರ್ತಿಗಳು ಬಸವ ಮಾರ್ಗ, ಅಂಬೇಡ್ಕರ್ ಬೀದಿ, ಸಾಲಿ ರಾಮಚಂದ್ರ ರಾಯರ ಬೀದಿ, ತೇರ ಬಜಾರ್ ಮೂಲಕ ಮಲಪ್ರಭಾ ನದಿಯಲ್ಲಿ ವಿಸರ್ಜನೆಗೊಂಡವು.

ಯುವಕರ ತಂಡ ದಾರಿಯುದ್ದಕ್ಕೂ ನೃತ್ಯ ನಡೆಸಿತು. ಕರಡಿ ಮಜಲು, ಜಾಂಜ್ ಪಥಕ ಸೇರಿದಂತೆ ಅನೇಕ ವಾದ್ಯ ಬಳಸಿಕೊಳ್ಳಲಾಯಿತು. ಇಡೀ ರಾತ್ರಿ ಸಾಕಷ್ಟು ಪ್ರಮಾಣದ ಮದ್ದು, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಸೂಕ್ತ ಬಂದೋಬಸ್ತ್ ಏರ್ಪಡಿ ಸಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ ನಾಯ್ಡು, ಎಸ್‌ಐ ಸಂಜೀವ ಬಳಿಗಾರ ಠಾಣೆ ಪರವಾಗಿ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು.ಸವದತ್ತಿ ವರದಿ

ಸವದತ್ತಿ: ನಗರದಲ್ಲಿ ಹನ್ನೊಂದು ದಿನಗಳವರೆಗೆ ಗಣೇಶನಿಗೆ ಪೂಜೆ ಸಲ್ಲಿಸಿ ಭಾನುವಾರ ವಿದಾಯ ಹೇಳಲಾಯಿತು.ನಗರದಲ್ಲಿನ ಆನಿಅಗಸಿ, ಗಾಂಧಿಚೌಕ, ಹಳೇ ಬಸ್ ನಿಲ್ದಾಣ, ಜೋಶಿಗಲ್ಲಿ, ಹಣಮಗೇರಿ, ಸಾರಿಗೆ ಸಂಸ್ಥೆ ಹಾಗೂ ಗುರ್ಲಹೊಸೂರಲ್ಲಿ ಪ್ರತಿಷ್ಠಾಪಿಸಲಾದ ಏಕದಂತನ ಮೂರ್ತಿಗಳನ್ನು  ಭಾನುವಾರ ವಿಸರ್ಜಿಸಲಾಯಿತು.ಹಳೆಯ ಬಸ್ ನಿಲ್ದಾಣ ಸಮೀಪದ ಮಸೀದಿಯ ಬಳಿ ಮೆರವಣಿಗೆ ಬಂದಾಗ   ಮುಸ್ಲಿಂ ಬಾಂಧವರ ಪರವಾಗಿ ನಗರದ ಅಮೀರ್ ಗೋರಿನಾಯಕ ಎಲ್ಲ ಗಣೇಶ ಮೂರ್ತಿಗಳಿಗೆ ಹೂಮಾಲೆ ಹಾಕಿದರು.ಚಿಕ್ಕೋಡಿ ವರದಿ

ಚಿಕ್ಕೋಡಿ: ಪಟ್ಟಣದಲ್ಲಿ 11 ದಿನಗಳ ಮಹಾಪೂಜೆಯೊಂದಿಗೆ ಸಾರ್ವಜನಿಕ ಮಂಡಳಗಳು ಪ್ರತಿಷ್ಠಾಪಿಸಿದ ವಿನಾಯಕನ ಮೂರ್ತಿಗಳಿಗೆ ಭಾನು ವಾರ ಶೃದ್ಧಾ ಭಕ್ತಿಯೊಂದಿಗೆ ವಿದಾಯ ಹೇಳಲಾಯಿತು.ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಲಾಗಿದ್ದ 35ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಭಾನುವಾರ ಸಂಜೆ ಸುಮಾರು ಎಂಟು ಗಂಟೆಗೆ ಆರಂಭಗೊಂಡು ತಡರಾತ್ರಿಯವರೆಗೂ ಸಡಗರದಿಂದ ನಡೆಯಿತು.ತಹಸೀಲ್ದಾರ ರಮೇಶ ದೇಸಾಯಿ, ಸಿಪಿಐ ಎಲ್.ವೇಣುಗೋಪಾಲ್ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ವಿದಾಯ ಹೇಳಿದರು. ಉಪವಿಭಾಗಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.ಇಡೀ ಪಟ್ಟಣದ ತುಂಬ ಮಾರ್ದನಿಸುವಂತೆ ಗರ್ಜಿಸುತ್ತಿದ್ದ ವಾದ್ಯವೃಂದಗಳ ತಾಳಕ್ಕೆ ದಣಿವರಿಯದೇ ಹೆಜ್ಜೆ  ಹಾಕುತ್ತಿದ್ದ ಯುವಕರ ಉತ್ಸಾಹ ಗಮನ ಸೆಳೆಯುವಂತಿತ್ತು. `ಗಣಪತಿ ಬಪ್ಪಾ ಮೋರಯಾ, ಫುಡಚಾ ವರ್ಷಿ ಲವಕರ್ ಯಾ~ ಮುಂತಾದ ಘೋಷಣೆಗಳು, ಪಟಾಕಿ, ಬಾಣಬಿರುಸುಗಳ ಆರ್ಭಟ ಮುಗಿಲು ಮುಟ್ಟಿತ್ತು.ಮೆರವಣಿಗೆಯಲ್ಲಿ ಪಟ್ಟಣದ ಪುರಸಭೆ ಸದಸ್ಯರು, ಗಣ್ಯಮಾನ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಸುಕಿನ ಜಾವ ಸಮೀಪದ ಮಾಂಜರಿ ಬಳಿ ಕೃಷ್ಣಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.ಡಿವೈಎಸ್‌ಪಿ ಅಮರಾಪೂರ ಅವರ ನೇತೃತ್ವದಲ್ಲಿ ಸಿಪಿಐ ಎಲ್. ವೇಣುಗೋಪಾಲ್ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

Post Comments (+)