ಲಕಲಕ ವೆಟ್ ಲುಕ್

7

ಲಕಲಕ ವೆಟ್ ಲುಕ್

Published:
Updated:
ಲಕಲಕ ವೆಟ್ ಲುಕ್

ನಡು ಮಧ್ಯಾಹ್ನವಾದರೂ ಬೆನ್ನಂಚಿಗೆ ಬಂದ ಒದ್ದೆ ಕೂದಲು. ಚಂದ್ರಬಿಂಬದಂಥ ಮೊಗದ ಹಣೆಯ ಮೇಲೆ ಹಸಿಗೂದಲ ಎಸಳು. ಕೊರಳಿನಿಂದ ಕೆಳಗಿಳಿದ ಕೂದಲಂಚಿನಿಂದ ಇನ್ನೇನು ನೀರು ಬಸಿದಿಳಿಯುವಂಥ ತಾಜಾತನ.ಈ ಮಾದಕ ಸೌಂದರ್ಯಕ್ಕೆ ಇಬ್ಬನಿ  ಸ್ಪರ್ಶದಂಥ ತೇವ. ಅದು ನೈಜವೇ? ಇಲ್ಲ... ಕೃತಕ ಲೇಪನ. ಆದರೆ ಸಹಜವೆನಿಸುವಷ್ಟೇ ಸುಂದರ ನೋಟ ಕೊಡುವಲ್ಲಿ ಈ `ವೆಟ್ ಲುಕ್~ ಸಾಕಷ್ಟು ಸಹಾಯ ಮಾಡುತ್ತದೆ.

 

ಇಳಿಬಿಟ್ಟ ಕೂದಲಿಗೆ ಸರಿ ಹೊಂದುವ ಈ ಮೇಕಪ್‌ಗೆ ತನ್ನದೇ ನಿಯಮಗಳಿವೆ. ವೆಟ್ ಲುಕ್ ಬಯಸುವವರು ಹೆಚ್ಚುವರಿ ಮೇಕಪ್‌ಗೆ ತಮ್ಮನ್ನು ತಾವು ಒಡ್ಡುವಂತಿಲ್ಲ. ಕಣ್ಣಂಚಿಗೆ ತೆಳು ಕಾಡಿಗೆ, ತಿಳಿ ವರ್ಣದ ತುಟಿ ರಂಗು ಇದ್ದರೆ ಮಾತ್ರ ಈ ತಾಜಾತನದ ಅಂದ ಹೆಚ್ಚುತ್ತದೆ.ಗಾಢವರ್ಣದ ಬಳಕೆಯಿಂದಾಗಿ ಚಹರೆಯ ಭಾವ ನಾಟಕದವರಂತೆ ಕಾಣುತ್ತದೆ.

ಹಿಂದೆ ಇಂಥ ವೆಟ್ ಲುಕ್ ಸಾಧಿಸಲು ಸ್ನಾನದ ನಂತರ ನೀರಿಗೆ ಶುದ್ಧ ತೆಂಗಿನೆಣ್ಣೆ, ನಿಂಬೆರಸ ಬೆರೆಸಿ ಬಳಸುತ್ತಿದ್ದರು.

 

ನಂತರ ಛಾಯಾ ಚಿತ್ರಕಾರರು ತಮ್ಮ ರೂಪದರ್ಶಿಗೆ ಕಾಂತಿಯುತ ಮೊಗದ ಚೆಲುವೆ ಎನಿಸಲು ಬಳಸಿದ್ದು, ಬೇಬಿ ಆಯಿಲ್‌ನ ಲೇಪನವನ್ನು. ಬೇಬಿ ಆಯಿಲ್ ಬಳಸಿ, ಮೇಲೆ ಸ್ಪ್ರೇಯರ್‌ನಿಂದ ಹನಿ ಸಿಂಚನ ಮಾಡಿದರೆ, ಸ್ನಾನ ಮಾಡಿ ಬಂದ ಸೌಂದರ್ಯದ ನೋಟ ಸಿಗುತ್ತಿತ್ತು.ಇದನ್ನೇ ಕೈಗೆಟಕುವ ದರದಲ್ಲಿ ಎಂಬಂತೆ ಮಾಡಲು, ಮೇಕಪ್ ಮುಗಿದ ಬಳಿಕ ತೆಳುವಾಗಿ ವ್ಯಾಸಲೀನ್ ಲೇಪಿಸುವ ತಂತ್ರವೂ ಫಲಿಸಿತು.

 

80ರ ದಶಕದಲ್ಲಿ ಫ್ಯಾಶನ್ ಟ್ರೆಂಡ್ ಆಗಿದ್ದ ಈ ವೆಟ್ ಲುಕ್ 2010ರಿಂದೀಚೆಗೆ ಮತ್ತೆ ಜನಪ್ರಿಯವಾಗತೊಡಗಿದೆ. ಆದರೆ ಈಗ ವೆಟ್ ಲುಕ್ ಕೇವಲ ಕತ್ತು, ಮುಖಕ್ಕೆ ಮಾತ್ರವಲ್ಲ; ಕೇಶದವರೆಗೂ ತನ್ನ ಬಾಹುಗಳನ್ನು ಚಾಚಿದೆ.ಸೌಂದರ್ಯ ಪ್ರಸಾಧನಗಳೂ ಪೈಪೋಟಿಯಲ್ಲಿ `ವೆಟ್~ ನೋಟದ ಪ್ರಸಾಧನಗಳನ್ನು ಉತ್ಪಾದಿಸುತ್ತಿವೆ. ತ್ವಚೆಯ ತೇವಾಂಶದ ರಕ್ಷಣೆಗೆ ಮಾಯಿಶ್ಚರೈಸರ್‌ಗಳು ಬೇಡಿಕೆಗೆ ಬಂದವು. ಮೊದಲು ಕೇವಲ ತುಟಿಗೆ ರಂಗು ಮಾತ್ರ ನೀಡುತ್ತಿದ್ದ ತುಟಿರಂಗು, ರಸಭರಿತ ನೋಟ ನೀಡುವಂತೆ, ಲಿಪ್‌ಗ್ಲಾಸ್‌ಗಳು ಬಂದವು.

 

ಈಗ ಕಣ್ರೆಪ್ಪೆಯ ಸೌಂದರ್ಯಕ್ಕೆ, ಕಣ್ಣೆವೆಗಳ ಸೌಂದರ್ಯಕ್ಕೆ ಕೆನ್ನೆಗೆ ಹೀಗೆ ಇಡೀ ಮುಖಕ್ಕೇ ಕೃತಕ ತಾಜಾತನದ ಸ್ಪರ್ಶ ನೀಡುವಂಥ ಉತ್ಪನ್ನಗಳೇ ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಇಷ್ಟೆಲ್ಲ ಮುಖದ ಓರೆಕೊರೆಗಳನ್ನು ತಿದ್ದಿದರೂ ನೀವು ಸೂಸುವ ನಗೆ ಪ್ರಾಮಾಣಿಕವಾಗಿದ್ದರೆ ಮಾತ್ರ ತಾಜಾತನದ ಲುಕ್‌ಗೆ ಗ್ಯಾರಂಟಿ ನೀಡಬಹುದು. ಇಲ್ಲದಿದ್ದರೆ ಮೇಕಪ್‌ನೊಂದಿಗೆ ನಗೆಯನ್ನೂ ಕಳಚಿಡಬೇಕಾದ ಪಾತ್ರಗಳನ್ನೇ ನಿರ್ವಹಿಸಬೇಕಾದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry