ಭಾನುವಾರ, ನವೆಂಬರ್ 17, 2019
23 °C
ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ದಾಸ್ತಾನು

ಲಕ್ಷಾಂತರ ಮೌಲ್ಯದ ದಿನಸಿ ಪದಾರ್ಥ ಜಪ್ತಿ

Published:
Updated:

ಬೆಂಗಳೂರು: ಕಾಡುಗೋಡಿಯಲ್ಲಿನ ದಿನಸಿ ಅಂಗಡಿಯೊಂದರ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು, ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ದಿನಸಿ ಪದಾರ್ಥಗಳನ್ನು ಜಪ್ತಿ ಮಾಡಿ ನಾಲ್ವರನ್ನು  ಬಂಧಿಸಿದ್ದಾರೆ.ಕಾಡುಗೋಡಿಯ ಶಬ್ಬೀರ್, ರಜಾಕ್, ನಜೀರ್ ಮತ್ತು ವೆಂಕಟೇಶ್ ಬಂಧಿತರು. ಆರೋಪಿಗಳು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ತಲಾ 50 ಕೆ.ಜಿ ತೂಕದ 3,221 ಚೀಲ ಅಕ್ಕಿ, 123 ಚೀಲ ತೊಗರಿ ಬೇಳೆ, 34 ಚೀಲ ಬೆಲ್ಲ, 18 ಚೀಲ ಮೈದಾ ಹಾಗೂ 100 ಬಾಕ್ಸ್ ಅಡುಗೆ ಎಣ್ಣೆ ವಶಪಡಿಸಿಕೊಳ್ಳಲಾಗಿದೆ.ಕಾಡುಗೋಡಿಯ ಕಾಶಿ ವಿಶ್ವನಾಥ ದೇವಸ್ಥಾನ ರಸ್ತೆಯಲ್ಲಿರುವ ಪಿ.ಕೆ.ಪ್ರಾವಿಜನ್ ಸ್ಟೋರ್ಸ್‌ ಹೆಸರಿನ ದಿನಸಿ ಅಂಗಡಿಯ ಗೋದಾಮಿನಲ್ಲಿ ಮತದಾರರಿಗೆ ಹಂಚಲು ದಿನಸಿ ಪದಾರ್ಥಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದರು. ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಪಿ.ಕೆ.ಪ್ರಾವಿಜನ್ ಸ್ಟೋರ್ಸ್‌ನ ಹೆಸರಿರುವ ಚೀಟಿಗಳನ್ನು (ಟೋಕನ್) ಮಂಗಳವಾರ ರಾತ್ರಿಯೇ ಸ್ಥಳೀಯರಿಗೆ ವಿತರಿಸಿದ್ದರು. ಆರೋಪಿಗಳು, ಸ್ಥಳೀಯರಿಂದ ಆ ಟೋಕನ್‌ಗಳನ್ನು ಪಡೆದುಕೊಂಡು ದಿನಸಿ ಪದಾರ್ಥ ನೀಡುತ್ತಿದ್ದರು. ಕೇರಳ ಮೂಲದ ಮಹಮ್ಮದ್ ಎಂಬುವರು ಆ ಅಂಗಡಿಯ ಮಾಲೀಕರು. ಆರೋಪಿಗಳಾದ ರಜಾಕ್ ಮತ್ತು ಶಬ್ಬೀರ್ ಅಂಗಡಿಯ ವಹಿವಾಟು ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಗೋದಾಮಿನಲ್ಲಿ ವಶಪಡಿಸಿಕೊಂಡಿರುವ ದಿನಸಿ ಪದಾರ್ಥಗಳ ಮೌಲ್ಯ ಸುಮಾರು ್ಙ 26.20 ಲಕ್ಷ. ಈ ಸಂಬಂಧ ಇನ್ನೂ ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ' ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಪಿ.ಎಸ್.ಹರ್ಷ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)