ಲಕ್ಷಾಂತರ ರೂಪಾಯಿ ನಷ್ಟ; ಕಣ್ಣೀರಿಟ್ಟ ರೈತರು

7

ಲಕ್ಷಾಂತರ ರೂಪಾಯಿ ನಷ್ಟ; ಕಣ್ಣೀರಿಟ್ಟ ರೈತರು

Published:
Updated:
ಲಕ್ಷಾಂತರ ರೂಪಾಯಿ ನಷ್ಟ; ಕಣ್ಣೀರಿಟ್ಟ ರೈತರು

ಕುಕನೂರು: ಇಲ್ಲಿಯ ಕೋಳಿಪೇಟೆಯ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಅಗ್ನಿ ದುರಂತ ಸಂಭವಿಸಿದ್ದರ ಪರಿಣಾಮದಿಂದ 20ಕ್ಕೂ ಹೆಚ್ಚು ಹೊಟ್ಟು ಮತ್ತು ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ.ಕುಕನೂರು-ಇಟಗಿ ರಸ್ತೆಯ ಕೋಳಿಪೇಟೆಯ ಭಾಗದಲ್ಲಿ ರೈತರು ತಮ್ಮ ಜಾನುವಾರುಗಳ ಪೋಷಣೆಗಾಗಿ ಹಿತ್ತಲದಲ್ಲಿ ಶೇಖರಿಸಿಟ್ಟಿದ್ದ ನೂರಾರು ಬಣವೆಗಳ ಪೈಕಿ ಶುಕ್ರವಾರ ಮಧ್ಯಾಹ್ನ ಒಂದು ಬಣವೆಗೆ ಬೆಂಕಿ ತಗುಲಿದ ಪರಿಣಾಮದಿಂದ ಎಂಟು ಜನ ರೈತರಿಗೆ ಸಂಬಂಧಿಸಿದ 20ಕ್ಕೂ ಅಧಿಕ ಬಣವೆಗಳು ಸುಟ್ಟು ಭಸ್ಮವಾಗಿದ್ದರ ಪರಿಣಾಮದಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಲು ಕಾರಣವಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಕುಕನೂರು ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ವರ್ಗ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಭಾರಿ ಪ್ರಮಾಣದ ಗಾಳಿ ಹಾಗೂ ಉರಿಬಿಸಿಲು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಗೆ ಅಡ್ಡಿಯನ್ನು ಉಂಟು ಮಾಡಿದ್ದಲ್ಲದೇ, ಬೆಂಕಿಯ ಕೆನ್ನಾಲಿಗೆ ತತ್‌ಕ್ಷಣವೇ ಅಕ್ಕಪಕ್ಕದಲ್ಲಿದ್ದ ಬಣವೆಗಳಿಗೆ ಪಸರಿಸಿತು. ಇದರಿಂದ ಆತಂಕಗೊಂಡ ಸಾರ್ವಜನಿಕರು ಮುಂದೆ ಆಗಬಹುದಾದ ಭಾರಿ ಅನಾಹುತವನ್ನು ತಪ್ಪಿಸಲು ಪಿ.ಎಸ್.ಐ ಹಾಗೂ ಸಿ.ಪಿ.ಐ ಅವರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ ಗುರುದೇವ ನೆಲ್ಲೂರ, ಪಿ.ಎಸ್.ಐ ಎಚ್.ಗುರುಬಸವರಾಜ ಅವರು ಪರಿಸ್ಥಿತಿಯನ್ನು ತಹಬಂದಿಗೆ ತರಲು ಕೊಪ್ಪಳ ಮತ್ತು ಕುಷ್ಟಗಿ ಅಗ್ನಿಶಾಮಕ ಠಾಣೆಯಿಂದ ಮತ್ತೆರೆಡು ವಾಹನ ತರಿಸಲು ಪ್ರಯತ್ನಿಸಿದರಾದರೂ, ಬೇರೆ ಬೇರೆ ಕಾರಣಾಂತರಗಳಿಂದ ವಾಹನಗಳು ಬರುವಷ್ಟರಲ್ಲೇ ಬಣವೆಗಳು ಸಂಪೂರ್ಣವಾಗಿ ಹೊತ್ತಿ ಉರಿದು ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದ್ದವು. ಆದಾಗ್ಯೂ ಕೂಡ ಅಕ್ಕಪಕ್ಕದ ನಿವಾಸಿಗಳು, ಯುವಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನೀರನ್ನು ತಂದು ಸುರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.`ಅಯ್ಯೋ, ಹೆಂಗ ಮಾಡಲಿ, ನಮ್ಮ ದನ-ಕರುಗೆ ಈಗ ಏನ್ ಹಾಕ್ಲೀ, ಮಳೆ ಬ್ಯಾರೆ ಕೈ ಕೊಟ್ಟು ಹೊಲದಾಗ ಹಿಡಿ ಮೇವಿಲ್ಲ~ ಎಂದು ಶಂಕ್ರಮ್ಮ ರಾಮಪ್ಪ ತಹಸೀಲ್ದಾರ ಎಂಬ ರೈತ ಮಹಿಳೆಯೊಬ್ಬಳು ತಮ್ಮ ಬಣವೆ ಸಂಪೂರ್ಣ ಭಸ್ಮವಾಗಿದ್ದನ್ನು ಕಂಡು `ಪ್ರಜಾವಾಣಿ~ಗೆ ತನ್ನ ಅಳಲನ್ನು ತೋಡಿಕೊಂಡು ಕಣ್ಣೀರಿಟ್ಟಳು. ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಪಸರಿಸದಿರಲು ಗ್ರಾಮ ಪಂಚಾಯತಿ ಹಿಟಾಚಿ ಯಂತ್ರದಿಂದ ಮಣ್ಣನ್ನು ಅಗಿದು ಎರಚಲಾಯಿತು. ಮತ್ತಷ್ಟು ಬೆಂಕಿ ಅಕ್ಕಪಕ್ಕದ ಬಣವೆಗಳಿಗೆ ಬರಬಹುದೆಂದು ಊಹಿಸಿ ಅವುಗಳನ್ನು ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೊಟ್ಟು ಮತ್ತು ಮೇವನ್ನು ಬೇರೆಡೆ ಸ್ಥಳಾಂತರಿಸಲಾಯಿತು.ಪರಿಹಾರಕ್ಕೆ ಆಗ್ರಹ: ಕುಕನೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹೊಟ್ಟು ಹಾಗೂ ಮೇವನ್ನು ಕಳೆದುಕೊಂಡ ಬಡ ರೈತ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ತಾಲ್ಲೂಕು ಕನ್ನಡ ಸೇನೆ ಅಧ್ಯಕ್ಷ ಅಮರೇಶ ಪಲ್ಲೇದ ಆಗ್ರಹಿಸಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಮರೇಶ ಪಲ್ಲೇದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸೇವೆಯನ್ನು ಸ್ಮರಿಸಿದ ಅವರು, ಇಂಥಹ ಅಗ್ನಿ ದುರಂತ ಸಂಭವಿಸಿದಾಗ್ಯೂ ಕೂಡ ಕಂದಾಯ ಇಲಾಖೆಯ ಯಾವುದೇ ಒಬ್ಬ ನೌಕರರಾಗಲೀ ಅಥವಾ ಅಧಿಕಾರಿಗಳಾಗಲಿ ಇತ್ತ ಮುಖ ಮಾಡದೇ ಇರುವ ಸಂಗತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಮಳೆ ಇಲ್ಲದೇ ಬರಗಾಲ ಎದುರಿಸುತ್ತಿರುವ ರೈತರು ಈಗ ಆಕಸ್ಮಿಕ ಅಗ್ನಿ ಅನುಹುತಕ್ಕೆ ಜಾನುವಾರು ಸಂರಕ್ಷಣೆಗಾಗಿ ಶೇಖರಿಸಿಟ್ಟ ಅಳಿದುಳಿದ ಹೊಟ್ಟು-ಮೇವು ಸುಟ್ಟು ಕರಕಲಾಗಿದ್ದು ದುರದೃಷ್ಟಕರ. ಬಡ ರೈತ ಕುಟುಂಬಕ್ಕೆ ಸರ್ಕಾರ ತುರ್ತಾಗಿ ಪರಿಹಾರ ಹಣವನ್ನು ಮಂಜೂರು ಮಾಡಬೇಕೆಂದು ಅವರು ಒತ್ತಾಯಿಸಿದರು.

ನಾಗಪ್ಪ ಅಸಲಿ, ಹನುಮಪ್ಪ ಯಡ್ಡೋಣಿ, ಕಳಕಪ್ಪ ಕುಂಬಾರ, ಮಹೇಶ ಡೊಳ್ಳಿನ, ನಾಗರಾಜ ನರಹಟ್ಟಿ, ರವಿ ನಿಂಗಾಪುರದವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry