ಶನಿವಾರ, ಮೇ 21, 2022
25 °C

ಲಕ್ಷ್ಮಣ್ ಸ್ಪೆಷಲ್‌ಗೆ 10ರ ಸಂಭ್ರಮ...

ನಾಗೇಶ್ ಶೆಣೈ Updated:

ಅಕ್ಷರ ಗಾತ್ರ : | |

ಭಾರತ ತಂಡದವರು ಇತ್ತೀಚೆಗೆ ವಿಶ್ವಕಪ್ ಕ್ರಿಕೆಟ್‌ನ ಲೀಗ್ ಪಂದ್ಯಗಳನ್ನು ಪರದಾಡುತ್ತ ಆಡುತ್ತಿರುವ ಸಂದರ್ಭದಲ್ಲೇ ಟೆಸ್ಟ್ ತಂಡದ ಆಪತ್ಬಾಂಧವ ವಿ.ವಿ.ಎಸ್.ಲಕ್ಷ್ಮಣ್ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಲು. ತಮ್ಮ 36ನೇ ವಯಸ್ಸಿನಲ್ಲೂ ಲಕ್ಷ್ಮಣ್ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಅನಿವಾರ್ಯ ಎಂಬಂತೆ ಇದ್ದಾರೆ.ಅವರು ಕುಟುಂಬ ಸಮೇತರಾಗಿ ಯಾತ್ರಾಸ್ಥಳ ಧರ್ಮಸ್ಥಳಕ್ಕೆ ಬಂದು ಮಾರ್ಚ್ 10ರಂದು ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಮರುದಿನ ಅಲ್ಲಿಯೇ ವಿವಿಧ ಸೇವೆಗಳನ್ನು ಪೂರೈಸಿದರು.ಸರಿಯಾಗಿ 10 ವರ್ಷಗಳ ಹಿಂದೆ ಲಕ್ಷ್ಮಣ್ (ಮಾರ್ಚ್ 11, 2001) ಭಾರತ ಕ್ರಿಕೆಟ್ ಇತಿಹಾಸದಲ್ಲೇ ಸ್ಮರಣೀಯ ಎನ್ನಿಸುವ ಆ ಮಹಾನ್ ಇನಿಂಗ್ಸ್ ಆಡಿದ್ದರು. ಕೋಲ್ಕತ್ತದಲ್ಲಿ ಅವರು ಗಳಿಸಿದ್ದ ಆ 281ರ ಆಟ ತಂಡದಲ್ಲಿ ಅಲುಗಾಡುತ್ತಿದ್ದ ಅವರ ಸ್ಥಾನವನ್ನು ಸುಭದ್ರಗೊಳಿಸಿತ್ತು. ಆಸ್ಟ್ರೇಲಿಯ ವಿರುದ್ಧ ಫಾಲೊಆನ್‌ಗೆ ಒಳಗಾಗಿದ್ದ ಭಾರತ ಚೇತರಿಸಿ ಪಂದ್ಯ ಗೆಲ್ಲುವಲ್ಲಿ ಲಕ್ಷ್ಮಣ್ ಪಾತ್ರ ಅವಿಸ್ಮರಣೀಯ. ಕ್ರಿಕೆಟ್ ಇತಿಹಾಸದಲ್ಲಿ ಫಾಲೊಆನ್‌ಗೆ ಒಳಗಾದ ತಂಡ ಚೇತರಿಸಿ ಗೆದ್ದ ಮೂರನೇ ಉದಾಹರಣೆ ಅದು. ಸುನೀಲ್ ಗಾವಸ್ಕರ್ ಅವರ ಔಟಾಗದೇ 236 ರನ್‌ಗಳ (ಭಾರತೀಯ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ) ದಾಖಲೆ ಮುರಿದ ಆಟ. ಸೆಹ್ವಾಗ್ ಐದು ವರ್ಷಗಳ ನಂತರ 309 ಹೊಡೆಯುವವರೆಗೆ ಅದು ಅಬಾಧಿತವಾಗಿ ಉಳಿದಿತ್ತು.ಆಸ್ಟ್ರೇಲಿಯ ತಂಡ, ಭಾರತ ವಿರುದ್ಧ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿ ಆಡಲು 2001ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಬೇರೆ ಬೇರೆ ಕಡೆ ಸತತ 15 ವಿಜಯಗಳೊಡನೆ ದಂಡಯಾತ್ರೆಗೆ ಬಂದಿದ್ದ ಕಾಂಗರೂ ಪಡೆಗೆ ಸ್ಟೀವ್ ವಾ ಅವರ ಸಮರ್ಥ ನಾಯಕತ್ವ ನೆರವಾಗಿತ್ತು. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಯಶಸ್ಸಿನ ಸರಣಿ ಮುಂದುವರಿಸಿ 16ನೇ ವಿಜಯ ದಾಖಲಿಸಿತ್ತು.ಕೋಲ್ಕತ್ತದಲ್ಲಿ ಎರಡನೇ ಟೆಸ್ಟ್. ಆಸ್ಟ್ರೇಲಿಯದ 445 ರನ್‌ಗಳ ಭಾರಿ ಮೊತ್ತಕ್ಕೆ ಉತ್ತರವಾಗಿ ಮೂರನೇ ದಿನ ಬೆಳಿಗ್ಗೆ ಲಂಚ್ ಮೊದಲು 171 ರನ್ನಿಗೆ ಆಲೌಟ್ ಆಗಿತ್ತು. ಕೊನೆಯವರಾಗಿ ಔಟಾದವರು ಲಕ್ಷ್ಮಣ್. ಅವರು ಗಳಿಸಿದ್ದ 59 ತಂಡದ ಅತ್ಯಧಿಕ ಮೊತ್ತ. ನಿರೀಕ್ಷೆಯಂತೆ ಫಾಲೊ ಆನ್.ಎರಡನೇ ಇನಿಂಗ್ಸ್‌ನಲ್ಲಿ 115 ರನ್ನಿಗೆ 3 ವಿಕೆಟ್‌ಗಳು ಬಿದ್ದವು. ಒಂದನೇ ವಿಕೆಟ್ ಬಿದ್ದಾಗ ಬಡ್ತಿ ಪಡೆದು ಬಂದವರೇ ಲಕ್ಷ್ಮಣ್!. ಸಚಿನ್ ಔಟಾದಾಗ ಭಾರತ ಸೋಲುವುದೆಂದು ಪ್ರೇಕ್ಷಕರು ಜಾಗ ಖಾಲಿ ಮಾಡತೊಡಗಿದ್ದರು. ಆದರೆ ನಂತರದ್ದೆಲ್ಲ ಪವಾಡ! ಲಕ್ಷ್ಮಣ್  ದ್ರಾವಿಡ್ ಅಂದು ಅದ್ಭುತ ಆಟವಾಟಡಿದ್ದರು, ಮಾತ್ರವಲ್ಲ, ಮರುದಿನವೂ ಆಸ್ಟ್ರೇಲಿಯವನ್ನು ಕಾಡಿದ್ದು ಇತಿಹಾಸ. ನಾಲ್ಕನೇ ದಿನ ಇವರಿಬ್ಬರ ಆಟದ ನಂತರ ಪ್ರೇಕ್ಷಕರು ಕ್ರೀಡಾಂಗಣದತ್ತ ದಾಂಗುಡಿಯಿಟ್ಟರು.ಸಕಾಲಿಕ ಬೆಂಬಲ ನೀಡಿದ ದ್ರಾವಿಡ್ 180 ರನ್ ಗಳಿಸಿದ್ದು, ಭಾರತ 657 (8 ವಿಕೆಟ್‌ಗೆ ಡಿಕ್ಲೇರ್) ಬೃಹತ್ ಮೊತ್ತ ಕಲೆಹಾಕಲು ಕಾರಣವಾಯಿತು.ಗ್ಲೆನ್ ಮೆಕ್‌ಗ್ರಾತ್, ಜೇಸನ್ ಗಿಲೆಸ್ಪಿ, ಮೈಕೆಲ್ ಕ್ಯಾಸ್ಟ್ರೊವಿಚ್, ಶೇನ್ ವಾನ್ ಅವರ ದಾಳಿಯನ್ನು ಲಕ್ಷ್ಮಣ್ ಆರಾಮವಾಗಿ ಆಡಿದ್ದು ಇನ್ನೂ ನೆನಪಿನಲ್ಲಿಳಿಯುವಂತಿದೆ. ಮೆಕ್‌ಗ್ರಾತ್, ಗಿಲೆಸ್ಪಿ ಅವರನ್ನು ಆರಾಮವಾಗಿ ಡ್ರೈವ್ ಮಾಡುತ್ತಿದ್ದ ಲಕ್ಷ್ಮಣ್, ವಾರ್ನ್ ಅವರನ್ನೂ ನಿರಾಯಾಸವಾಗಿ ಆಡಿದ್ದರು. ಅವರಿಗೆ ಹೇಗೆ ಬೌಲ್ ಮಾಡಬೇಕೆಂದೇ ಆಸ್ಟ್ರೇಲಿಯದವರಿಗೆ ತಿಳಿಯಲಿಲ್ಲ. ಲಕ್ಷ್ಮಣ್ ಆಟದಲ್ಲಿ 44 ಬೌಂಡರಿಗಳಿದ್ದವು! ಭಾರತ ಆ ಪಂದ್ಯದಲ್ಲಿ 171 ರನ್‌ಗಳಿಂದ ಜಯಗಳಿಸಿತ್ತು.ಭಾರತ, ಚೆನ್ನೈನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನೂ ಗೆದ್ದು ಸರಣಿ 2-1ರಲ್ಲಿ ವಶಪಡಿಸಿಕೊಂಡಿತು. ಲಕ್ಷ್ಮಣ್ ಅವರಂತೆ ಹರಭಜನ್ ಮಿಂಚಿದ ಸರಣಿಯದು. ಭಜ್ಜಿ ಆ ಪಂದ್ಯದಲ್ಲಿ 13 ವಿಕೆಟ್ ಕಬಳಿಸಿದ್ದರು. ಹರಭಜನ್ ಆ ಸರಣಿಯಲ್ಲಿ ಭಾರತದ ಮೊದಲ ಟೆಸ್ಟ್ ಹ್ಯಾಟ್ರಿಕ್ ಸಾಧಿಸಿದ್ದರು!ಬಲಿಷ್ಠರ ವಿರುದ್ಧ: ಲಕ್ಷ್ಮಣ್ ಅದಕ್ಕೆ ಮೊದಲು ಅಂಥ ಆಟ ಆಡಿರಲಿಲ್ಲ ಎಂದೇನಲ್ಲ. ಆದರೆ ಗಂಗೂಲಿ, ತೆಂಡೂಲ್ಕರ್, ದ್ರಾವಿಡ್ ಅವರಂಥ ಘಟಾನುಘಟಿಗಳಿದ್ದ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಕಾಣದೇ ಪರದಾಡುತ್ತಿದ್ದರು. ಅವರ ಕ್ರಮಾಂಕಗಳೂ ಬದಲಾಗುತ್ತಿದ್ದವು. 3-4 ಸರಣಿಗೆ ಇಷ್ಟವಿಲ್ಲದಿದ್ದದರೂ ಆರಂಭಿಕನಾಗಿ ಆಡಿದ್ದೂ ಇದೆ. ಇಂಥ ಒಂದು ಸಂದರ್ಭದಲ್ಲಿ ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ 167 ರನ್ ಬಾರಿಸಿದ್ದು ಸುದ್ದಿಯಾಗಿತ್ತು.ಲಕ್ಷ್ಮಣ್ ಅವರ ಇನ್ನೊಂದು ವಿಶೇಷ ಎಂದರೆ ಅವರ ಹೆಚ್ಚಿನ ಶತಕಗಳು ಆಸ್ಟ್ರೇಲಿಯ ವಿರುದ್ಧ ಬಂದಿವೆ. 16ರಲ್ಲಿ ಆರು ಆಸ್ಟ್ರೇಲಿಯ ವಿರುದ್ಧ. ಕುದುರಿಕೊಂಡರೆ ದೊಡ್ಡ ಮೊತ್ತ ಗಳಿಸುವುದು ಅವರ ಇನ್ನೊಂದು ವೈಶಿಷ್ಟ್ಯ. ಲಕ್ಷ್ಮಣ್ 86 ಒಂದು ದಿನದ ಪಂದ್ಯಗಳನ್ನು ಆಡಿದ್ದರು.ಆದರೆ ವಿಶ್ವಕಪ್‌ನಲ್ಲಿ ಮಾತ್ರ ಆಡುವ ಅವಕಾಶ ಸಿಗಲಿಲ್ಲ. ಅವರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರದ ಇದು ನಾಲ್ಕನೇ ವಿಶ್ವಕಪ್. ಒಂದು ದಿನದ ಪರಿಣಿತರು ಬೆಳಕಿಗೆ ಬಂದಿದ್ದು ಒಂದು ಕಾರಣ. ಲಕ್ಷ್ಮಣ್ ಟೆಸ್ಟ್ ತಂಡಕ್ಕೆ ಸೂಕ್ತ ಎಂಬ ಹಣೆಪಟ್ಟಿ ಇನ್ನೊಂದು ಕಾರಣ!.ಏನಿದ್ದರೂ ಲಕ್ಷ್ಮಣ್ ಅವರು ಟೆಸ್ಟ್ ತಂಡದಲ್ಲಿ ಆಡಿದ ಹಲವು ಇನಿಂಗ್ಸ್‌ಗಳು ನೆನಪಿನಲ್ಲಿ ಉಳಿಯುವಂಥವು. ವಿ.ವಿ.ಎಸ್. ಎಂದರೆ ವೆರಿವೆರಿ ಸ್ಪೆಷಲ್ ಅನ್ವರ್ಥ ಅವರಿಗೆ ಸೂಕ್ತವಾಗಿಯೇ ಇದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.