ಗುರುವಾರ , ಅಕ್ಟೋಬರ್ 17, 2019
28 °C

ಲಕ್ಷ್ಮಣ ತೆಲಗಾವಿ ಅದ್ಭುತ ಸಂಶೋಧಕ

Published:
Updated:

ಚಿತ್ರದುರ್ಗ: ನಗರದಲ್ಲಿ ಭಾನುವಾರ ಖ್ಯಾತ ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ ಅವರನ್ನು ಅಭಿಮಾನಿಗಳು, ಸ್ನೇಹಿತರು, ಬಂಧು- ಬಳಗ, ಒಡನಾಡಿಗಳು ಆತ್ಮೀಯವಾಗಿ ಸನ್ಮಾನಿಸಿದರು.ಹರ್ತಿಕೋಟೆ ವಾಲ್ಮೀಕಿ ಸಾಹಿತ್ಯ ಸಂಪದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಿಂಗಾಪುರದ ಅಪೂರ್ವ ಪ್ರಕಾಶನ, ಆದಿಶಕ್ತ್ಯಾತ್ಮಕ ಅನ್ನಪೂಣೇಶ್ವರಿ ಚಾರಿಟಬಲ್ ಟ್ರಸ್ಟ್, ಡಾ.ಡಿ. ರಾಮಚಂದ್ರ ನಾಯ್ಕ ಗೆಳೆಯರ ಬಳಗ, ಚಿತ್ರದುರ್ಗ ಸಂಶೋಧನಾ ತಂಡ ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ಲಕ್ಷ್ಮಣ್ ತೆಲಗಾವಿ ಅವರಿಗೆ 65ನೇ ವರ್ಷದ ಅಭಿನಂದನೆ ಸಲ್ಲಿಸಲಾಯಿತು.ಸಾಹಿತಿ ಎಸ್.ಆರ್. ಗುರುನಾಥ ರಚಿಸಿರುವ `ದುರ್ಗಾಭಿಜಾತ~ ಕೃತಿ ಬಿಡುಗಡೆ ಮಾತನಾಡಿದ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ತೆಲಗಾವಿ ಅವರು ಅದ್ಭುತ ಸಂಶೋಧಕನಾಗಿ ಹೆಮ್ಮೆಯ ಸಾಧನೆ ಮಾಡಿದ್ದಾರೆ. ತೆಲಗಾವಿ ಅವರು ಚರಿತ್ರೆಯೊಂದಿಗೆ ನಿತ್ಯ ಸಂಸಾರ ಮಾಡಿದ್ದು, ಅದರ ಜತೆಯಲ್ಲಿ ಉಸಿರಾಡಿದ್ದಾರೆ. ವಿಶ್ವಮಾನವ ವ್ಯಕ್ತಿತ್ವ ಹೊಂದಿರುವ ತೆಲಗಾವಿ, `ನಾಯಕ ಅರಸರು~ ಎಂದು ಕರೆದು ಪಾಳೆಗಾರರ ಸ್ಥಾನಮಾನ ಗುರುತಿಸಿದರು ಎಂದರು.ಗುರುನಾಥ ರಚಿಸಿರುವ ಇನ್ನೊಂದು ಕೃತಿ `ತೆಲಗಾವಿಷನ್~ ಪುಸ್ತಕ ಬಿಡುಗಡೆ ಮಾಡಿದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಲೋಕೇಶ್ ಅಗಸನಕಟ್ಟೆ, ಸತ್ಯ ಹೇಳಿದಾಗ ನಿಷ್ಠುರರಾಗಬೇಕಾಗುತ್ತದೆ. ನಿಷ್ಠುರವಾದರೂ ಸತ್ಯವನ್ನೇ ಹೇಳುತ್ತೇನೆ ಎನ್ನುವ ಎದೆಗಾರಿಕೆ ಇತಿಹಾಸಕಾರನಿಗೆ ಅಥವಾ ಸಂಶೋಧಕನಿಗೆ ಇರಬೇಕು ಎಂದು ಅಭಿಪ್ರಾಯಪಟ್ಟರು.ಸಾಹಿತಿ ಬಿ.ಎಲ್. ವೇಣು ಮಾತನಾಡಿ, ತೆಲಗಾವಿ ಅಲೆದಾಟದ ಮೂಲಕ ಸಂಶೋಧನೆ ಮಾಡಿದರು. ಸಂಶೋಧನಾತ್ಮಕ ಲೇಖನಗಳಿಗೆ ಸೃಜನಶೀಲತೆ ಮೆರುಗು ನೀಡಿದ ತೆಲಗಾವಿ ಚಿತ್ರದುರ್ಗದ ಅಭಿಮಾನದ ಸಂಪತ್ತು ಎಂದು ಶ್ಲಾಘಿಸಿದರು.ಸಂಶೋಧಕ ಡಾ.ಬಿ. ರಾಜಶೇಖರಪ್ಪ ಮಾತನಾಡಿ, ಪರಿಶ್ರಮ, ಶಿಸ್ತು, ಅಚ್ಚುಕಟ್ಟುತನ ತೆಲಗಾವಿ ಅವರಲ್ಲಿದ್ದು, ಸ್ನೇಹಜೀವಿ, ಅಧ್ಯಯನಶೀಲರಾಗಿದ್ದಾರೆ. ಸಂಶೋಧಕ ತೆರೆದ ಮನಸ್ಸಿನವಾಗಿದ್ದರೆ ಮಾತ್ರ ಸಂಶೋಧನೆಯ ಆಳಕ್ಕೆ ಹೋಗಲು ಸಾಧ್ಯ ಎಂದು ನುಡಿದರು.ಸಾಹಿತಿ ಎಸ್.ಆರ್. ಗುರುನಾಥ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದ ನಿರ್ದೇಶಕ ಡಾ.ಕೆ.ಎಂ. ಸುರೇಶ್, ವಾಲ್ಮೀಕಿ ಸಾಹಿತ್ಯ ಸಂಪದ ಗೌರವಾಧ್ಯಕ್ಷ ಹರ್ತಿಕೋಟೆ ವೀರೇಂದ್ರಸಿಂಹ, ಅಪೂರ್ವ ಪ್ರಕಾಶನದ ಬಿ.ಆರ್. ಶಿವಕುಮಾರ್, ಆದಿಶಕ್ಯಾತ್ಮಕ ಅನ್ನಪೂಣೇಶ್ವರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ಟಿ. ಸುರೇಶ್, ಡಾ. ಡಿ. ರಾಮಚಂದ್ರನಾಯಕ್, ಲ. ನಾಗರಾಜ ಹೊಯ್ಸಳ ಮತ್ತಿತರರು ಹಾಜರಿದ್ದರು.

Post Comments (+)