ಲಕ್ಷ್ಮೇಶ್ವರ ಕೋಡಿಯಲ್ಲಮ್ಮನ ಜಾತ್ರೆ ಇಂದು

7

ಲಕ್ಷ್ಮೇಶ್ವರ ಕೋಡಿಯಲ್ಲಮ್ಮನ ಜಾತ್ರೆ ಇಂದು

Published:
Updated:
ಲಕ್ಷ್ಮೇಶ್ವರ ಕೋಡಿಯಲ್ಲಮ್ಮನ ಜಾತ್ರೆ ಇಂದು

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ  ಕೋಡಿಯಲ್ಲಮ್ಮನ ಜಾತ್ರೆ ಏ. 18ರಂದು ಜರುಗಲಿದೆ.ಐತಿಹಾಸಿಕ ಹಾಗೂ ಪೌರಾಣಿಕವಾಗಿ ಪ್ರಸಿದ್ಧ ಗ್ರಾಮ ದೇವತೆಯಾಗಿರುವ ಕೋಡಿಯಲ್ಲಮ್ಮ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವತೆಯಾಗಿ ಇಂದಿಗೂ ಅಸಂಖ್ಯಾತ ಜನರ ಸಂಕಷ್ಟಗಳನ್ನು ಪರಿಹರಿಸುತ್ತ ಪೊರೆಯುತ್ತಿದ್ದಾಳೆ. ಒಂದು ಮೂಲದ ಪ್ರಕಾರ ಕೋಡೆಮ್ಮ ಹಾಗೂ ಯಲ್ಲಮ್ಮ ದೇವತೆಯರು ಒಂದೇ ಸ್ಥಳದಲ್ಲಿ ನೆಲೆಸಿದ್ದರಿಂದ ಇದಕ್ಕೆ ಕೋಡಿಯಲ್ಲಮ್ಮ ದೇವಸ್ಥಾನ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.

 

ಒಂದು ದಂತಕಥೆಯಂತೆ ಸಂತ ಶಿಶುವಿನಾಳದ ಸಂತ ಶರೀಫ ಸಾಹೇಬರು ಒಮ್ಮೆ ಲಕ್ಷ್ಮೇಶ್ವರಕ್ಕೆ ಬಂದಾಗ ಕೋಡಿಯಲ್ಲಮ್ಮನ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದರಂತೆ. ಆಗ ಅಲ್ಲಿ ನೂರಾರು ಭಕ್ತರು ನೆರೆದಿದ್ದರು. ಅಂದು ಕರಾಳ ಅಮವಾಸ್ಯೆ. ಚಿಲುಮೆಯ ನಶೆಯಲ್ಲಿದ್ದ ಶರೀಫರು, ‘ತಾಯಿ ಕೋಡಿಯಲ್ಲಮ್ಮ, ಪೂರ್ಣ ಹುಣ್ಣಿಮೆಯೆಂದು ನಿನ್ನ ದರ್ಶನ ಪಡೆದು ನನ್ನ ಜೀವನ ಪಾವನವಾಯಿತು’ ಎಂದರಂತೆ. ಆಗ ಅಲ್ಲಿ ಸೇರಿದ್ದ ಭಕ್ತರು ಶರೀಫರ ಈ ಮಾತನ್ನು ಕೇಳಿದಾಕ್ಷಣ ಕೋಪಗೊಂಡು ಕುಡುಕ ಶರೀಫರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ‘ಶರೀಫ ಸಾಹೇಬರೇ! ಇಂದು ಅಮವಾಸ್ಯೆ. ಹುಣ್ಣಿಮೆ ಎಲ್ಲಿಂದ ಬಂತ್ರೀ. ಹಂಗಾರ ಈವತ್ತ ನೀವು ನಮಗ ಚಂದ್ರಮನ ತೋರಿಸಿರಿ’ ಎಂದು ಪಟ್ಟು ಹಿಡಿದರಂತೆ.

 

ಶರೀಫರು ಸ್ವಲ್ಪವೂ ವಿಚಲಿತರಾಗದೆ ಕೋಡಿಯಲ್ಲಮ್ಮನ ಕೈಯಲ್ಲಿದ್ದ ಒಂದು ಬಳೆಯನ್ನು ಪೂರ್ವ ದಿಕ್ಕಿನತ್ತ ಮೇಲಕ್ಕೆಸೆದರಂತೆ. ತಕ್ಷಣ ಪೂರ್ಣ ಹುಣ್ಣಿಮೆ ಚಂದ್ರ ಆಕಾಶದಲ್ಲಿ ‘ಫಳಫಳನೇ’ ಹೊಳೆಯ ತೊಡಗಿದನಂತೆ. ಶರೀಫರ ಪವಾಡ ಹಾಗೂ ಕೋಡಯಲ್ಲಮ್ಮನ ಮಹಿಮೆ ಕಂಡ ಜನರು ಮಂತ್ರಮುಗ್ದರಾದರಂತೆ. ಅಂದಿನಿಂದ ಈ ದೇವಸ್ಥಾನ ಜಾಗೃತ ಸ್ಥಳವಾಗಿ ಇಂದಿಗೂ ಸಾವಿರಾರು ಭಕ್ತರ ಆರಾಧ್ಯ ಪವಿತ್ರ ಸ್ಥಾನವಾಗಿದೆ.

 

ಪ್ರತಿ ವರ್ಷ ದವನದ ಹುಣ್ಣಿಮೆಯಂದು ಕೋಡಿಯಲ್ಲಮ್ಮನ ರಥೋತ್ಸವ ಸಡಗರದಿಂದ ನಡೆಯುತ್ತ ಬಂದಿದೆ. ಅಂದು ಕೋಡಿಯಲ್ಲಮ್ಮನ ಮೂರ್ತಿಯನ್ನು ಪಟ್ಟಣದ ತುಂಬೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry