ಲಕ್ಷ ಕುಟುಂಬಕ್ಕೆ ಉದ್ಯೋಗ

7

ಲಕ್ಷ ಕುಟುಂಬಕ್ಕೆ ಉದ್ಯೋಗ

Published:
Updated:

ಹೊಸಪೇಟೆ: ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ರಾಜ್ಯದ 1 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ ತಿಳಿಸಿದರು.ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದ ವತಿಯಿಂದ ಈವರೆಗೆ 40 ಸಾವಿರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು.‘40 ಸಾವಿರ ಕುಟುಂಬಗಳಿಗೆ ವಸತಿ ಮತ್ತು ಕಾರ್ಯಾಗಾರಗಳ ನಿರ್ಮಾಣ, ಸಾಮಾನ್ಯ ಸೌಲಭ್ಯ ಕೇಂದ್ರಗಳ ನಿರ್ಮಾಣ, ತರಬೇತಿ ಕಾರ್ಯಕ್ರಮ, ರಸ್ತೆಬದಿ ಕುಟೀರ ವಿತರಣೆ, ಚರ್ಮ ಕರಕುಶಲ ಸಪ್ತಾಹ ಆಚರಣೆ ಹಾಗೂ ಪ್ರಶಸ್ತಿ ವಿತರಣೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಚಟುವಟಿಕೆಗಳನ್ನು ನಿಗಮ ಹಮ್ಮಿಕೊಂಡಿದೆ’ ಎಂದು ತಿಳಿಸಿದರು.‘ವಾಣಿಜ್ಯ ಚಟುವಟಿಕೆಗಳಡಿ 100ಕ್ಕಿಂತ ಹೆಚ್ಚು ಸಣ್ಣ ಪ್ರಮಾಣದ ಘಟಕಗಳು ತಯಾರಿಸಿದ ಚರ್ಮೋತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ. ರಾಜ್ಯದಾದ್ಯಂತ ಇರುವ 24 ಮಾರಾಟ ಮಳಿಗೆಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರು.‘ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರಿ ಇಲಾಖೆ, ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಅಗತ್ಯವಿರುವ ಚರ್ಮೋತ್ಪನ್ನಗಳನ್ನು ನಿಗಮದ ವತಿಯಿಂದ ಸರಬರಾಜು ಮಾಡುವ ಉದ್ದೇಶವಿದೆ’ ಎಂದು ತಿಳಿಸಿದರು.‘ರಾಜ್ಯ ಸರ್ಕಾರ 2009-10ನೇ ಸಾಲಿನಲ್ಲಿ ನಿಗಮವನ್ನು ಪುನಃಶ್ಚೇತನಗೊಳಿಸಲು ರೂ. 3 ಕೋಟಿ ಬಿಡುಗಡೆ ಮಾಡಿದೆ. ಪರಿಶಿಷ್ಟ ಜಾತಿಗೆ ಸೇರಿದ ಸಾವಿರ ಚರ್ಮ ಕುಶಲಕರ್ಮಿಗಳ ಕುಟುಂಬಗಳಿಗೆ ನಿರಂತರ ಉದ್ಯೋಗ ಒದಗಿಸುವುದು, ಚರ್ಮ ಕುಶಲಕರ್ಮಿಗಳಿಗೆ ಕಚ್ಚಾ ವಸ್ತು ಖರೀದಿಸಲು ಸಹಾಯ ಹಾಗೂ ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಹಾಲಿ ಮಾರಾಟ ಮಳಿಗೆಗಳನ್ನು ನವೀಕರಣ ಮತ್ತು ಗಣಕೀಕರಣ ಮಾಡಲಾಗುವುದು’ ಎಂದು ಹೇಳಿದರು.‘ಸಾಂಪ್ರದಾಯಿಕ ಚರ್ಮ ಕುಶಲಕರ್ಮಿಗಳು ಹಾಗೂ ಸಣ್ಣ ಪ್ರಮಾಣದ ಘಟಕದ ಸರಬರಾಜುದಾರರು ತಯಾರಿಸುವ ಅಪ್ಪಟ ಚರ್ಮ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಹಾಗೂ ನಿಗಮದ ವಿವಿಧ ಯೋಜನೆಗಳಿಗೆ ನೀಡಿರುವ ರೂ. 11.36 ಲಕ್ಷ ಸಾಲವನ್ನು ಷೇರು ಬಂಡವಾಳವನ್ನಾಗಿ ಪರಿವರ್ತಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ‘ಎಂದು ತಿಳಿಸಿದರು.ಕಳೆದ ನಾಲ್ಕೈದು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ಸಹಾಯ ಧನ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳಿರುವ ರೂ. 70 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು 30 ಕೋಟಿ ರೂಪಾಯಿಗಳು ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಲಿಡ್‌ಕರ್ ಮಾರಾಟ ಮಳಿಗೆ ವ್ಯವಸ್ಥಾಪಕ ಸಂಜೀವಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry